ಕಲಬುರಗಿ: ಕಲ್ಯಾಣ ಕರ್ನಾಟಕದ ಭಾಗದ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಪ್ರವೇಶಾತಿ ಪಡೆಯಲು ಪೈಪೋಟಿ ಏರ್ಪಟ್ಟಿದ್ದು, ರವಿವಾರ ನಡೆದ ಕಾಲೇಜ್‌ನ ಪ್ರಥಮ ವರ್ಷದ ಪ್ರವೇಶಾತಿಗೆ ನಡೆದ ಸಿಇಟಿಗೆ ನಾಲ್ಕು ಸಾವಿರ ವಿದ್ಯಾರ್ಥಿಗಳು ಹಾಜರಾಗಿರುವುದೇ ಇದಕ್ಕೆ ಸಾಕ್ಷಿ.
ಜಿಲ್ಲೆಯಲ್ಲದೇ ನಾಡಿನ ವಿವಿಧ ಭಾಗಗಳಿಂದ ಪಾಲಕರೊಂದಿಗೆ ಆಗಮಿಸಿದ ವಿದ್ಯಾರ್ಥಿಗಳು ಪ್ರವೇಶಾತಿಗಾಗಿ ಪರೀಕ್ಷೆ ಬರೆದರು. ರವಿವಾರ ಕಾಲೇಜ್‌ನ ಆವರಣದಲ್ಲಿ ಎಲ್ಲಿ ನೋಡಿದಲ್ಲಿ ವಿದ್ಯಾರ್ಥಿ ಹಾಗೂ ಪಾಲಕರ ದಂಡೇ ಕಾಣುತ್ತಿತ್ತು. ವರ್ಷಂಪ್ರತಿ ನಡೆಯುವ ವೈದ್ಯಕೀಯ ಕೋರ್ಸ್ ಹಾಗೂ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಅತ್ಯುತ್ತಮ ರ್‍ಯಾಂಕ್ ಪಡೆಯುವುದೇ ಎಸ್‌ಬಿಆರ್ ಕಾಲೇಜ್‌ನ ವಿದ್ಯಾರ್ಥಿಗಳೇ ಎಂಬುದು ಎಲ್ಲರಿಗೂ ತಿಳಿದ ವಿಷಯ. ಇದೇ ಕಾರಣಕ್ಕೆ ಪಿಯುಸಿ ಪ್ರಥಮ ವರ್ಷದ ಪ್ರವೇಶಾತಿಗೆ ವಿದ್ಯಾರ್ಥಿಗಳ ಪೈಪೋಟಿ ನಡೆಯುತ್ತದೆ.
ಪ್ರಸಕ್ತ ಸಾಲಿನ ಪ್ರವೇಶಾತಿಗಾಗಿ ರವಿವಾರ ಏ.17ರಂದು ಮಧ್ಯಾಹ್ನ 1ರಿಂದ 3ರವರೆಗೆ, ಎಸ್‌ಬಿಆರ್ ಮತ್ತು ಅಪ್ಪ ಪಬ್ಲಿಕ್ ಸ್ಕೂಲ್, ಎರಡು ಕೇಂದ್ರಗಳಲ್ಲಿ ನಡೆಸಲಾಗಿತ್ತು. ಈ ಪರೀಕ್ಷೆಯನ್ನು ಕೋವಿಡ್-19 ನಿಯಮಾವಳಿಗಳನ್ನು ಪಾಲಿಸಿಕೊಂಡು ಸುಸೂತ್ರವಾಗಿ ನಡೆಸಲಾಯಿತು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಅನ್ನದಾಸೋಹದ ಜೊತೆಗೆ ಅಕ್ಷರದಾಸೋಹದ ಸೇವೆ ಗೈಯುತ್ತಾ ಬಂದಿದೆ. ಈ ಸಂಘದ ಅಡಿಯಲ್ಲಿರುವ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸುಮಾರು 28 ವರ್ಷಗಳಿಂದ ಉತ್ಕೃಷ್ಟ ಶಿಕ್ಷಣ ಕೊಡುವುದರೊಂದಿಗೆ, ರಾಷ್ಟ್ರಕ್ಕೆ ಗುಣಮಟ್ಟದ ವೈದ್ಯರು, ಎಂಜಿನಿಯರುಗಳ ಅಡಿಪಾಯ ನಿರ್ಮಿಸುತ್ತಾ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿದೆ. ದಾಸೋಹ ಸಂಸ್ಕೃತಿಯಂತೆ ಶಿಕ್ಷಣ ಕೊಡುವ ದೃಷ್ಟಿಯಿಂದ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಪ್ರವೇಶ ಕೊಡಲಾಗುತ್ತಿದೆ.
ಇದೇ ರೀತಿ ಸಿಬಿಎಸ್‌ಇ ವಿದ್ಯಾರ್ಥಿಗಳಿಗೂ ಬರುವ ಮೇ ತಿಂಗಳಿನ ಅಂದರೆ 29-05-2022ರಂದು ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದ್ದು, ಇದರಲ್ಲಿ 1ರಿಂದ 10 ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ವಸತಿ ಸಹಿತ ಸಂಪೂರ್ಣ ಉಚಿತ ಪ್ರವೇಶ ನೀಡಲಾಗುತ್ತಿದ್ದು, 11ರಿಂದ 20ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ವಸತಿ ಸಹಿತ ಶುಲ್ಕದಲ್ಲಿ ಶೇ.50 ವಿನಾಯತಿ ನೀಡಲಾಗುತ್ತಿದೆ, ಹಾಗೂ 21ರಿಂದ 30 ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ವಸತಿ ಸಹಿತ ಶೇ.25 ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತಿದೆ ಎಂದು ಪ್ರಕಟಿಸಲಾಗಿದೆ.
ಸಿಇಟಿ ಪರೀಕ್ಷೆಯಲ್ಲಿ ರ್‍ಯಾಂಕ್ ಬಂದ ವಿದ್ಯಾರ್ಥಿಗಳಿಗೆ ಅದೃಷ್ಟ
ರವಿವಾರ ನಡೆದ ಸಿಇಟಿ ಪರೀಕ್ಷೆಯಲ್ಲಿ ರ್‍ಯಾಂಕ್ ಬಂದ ವಿದ್ಯಾರ್ಥಿಗಳಿಗೆ 2.5 ಕೋಟಿ ಮೌಲ್ಯದ 9ನೇ ಮಹಾದಾಸೋಹ ಪೀಠಾಧಿಪತಿ ಚಿ. ದೊಡ್ಡಪ್ಪ ಅಪ್ಪ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ. ಪರೀಕ್ಷೆಯಲ್ಲಿ 1ರಿಂದ 20 ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ವಸತಿ ಸಹಿತ ಸಂಪೂರ್ಣ ಉಚಿತ ಪ್ರವೇಶ ನೀಡಲಾಗುತ್ತಿದ್ದು, 21 ರಿಂದ 40ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ವಸತಿ ಸಹಿತ ಶುಲ್ಕದಲ್ಲಿ ಶೇ.50 ವಿನಾಯತಿ ನೀಡಲಾಗುತ್ತಿದೆ, ಹಾಗೂ 41ರಿಂದ 60 ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ವಸತಿ ಸಹಿತ ಶೇ.25 ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತಿದೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.