ಹೊಸದಿಲ್ಲಿ : ದೇಶದ ಅತೀ ದೊಡ್ಡ ಬ್ಯಾಂಕ್ ಎನಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ನಾಳೆ ಮಂಗಳವಾರದಿಂದಲೇ ಜಾರಿಗೆ ಬರುವಂತೆ 30 ಲಕ್ಷ ರೂ. ವರೆಗಿನ ಗೃಹ ಸಾಲದ ಮೇಲಿನ ಬಡ್ಡಿಯನ್ನು ಶೇ.0.25ರಷ್ಟು ಕಡಿತಗೊಳಿಸಿದೆ.
ಎಂದರೆ ನಾಳೆಯಿಂದ 30 ಲಕ್ಷ ರೂ. ವರೆಗೆ ಹೊಸ ಗೃಹ ಸಾಲ ಪಡೆಯುವವರಿಗೆ ಶೇ.8.35 ಬಡ್ಡಿ ದರ ಅನ್ವಯವಾಗುತ್ತದೆ.
ಕೇಂದ್ರ ಸರಕಾರದ ಹೊಸ ಗೃಹ ಸಾಲ ಯೋಜನೆ ಪ್ರಕಾರ 30 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಸಾಲವು “ಕೈಗೆಟಕುವ ಗೃಹಸಾಲ’ ವೆಂದು ಪರಿಗಣಿತವಾಗಿದೆ.
ಹೊಸ ಗೃಹ ಸಾಲ ಪಡೆಯುವ ಪುರುಷರಿಗೆ ಜುಲೈ 31ರ ವರೆಗೆ ಅನ್ವಯವಾಗುವ ಸೀಮಿತ ಅವಧಿಯ ಈ ಯೋಜನೆಯಡಿ ಬಡ್ಡಿದರವನ್ನು ಶೇ.0.20 ಇಳಿಸಲಾಗಿದ್ದು ಅದು ಶೇ.8.40 ಆಗಿದೆ ಎಂದು ಎಸ್‌ಬಿಐ ನ ನ್ಯಾಶನಲ್ ಬ್ಯಾಂಕಿಂಗ್ ಆಡಳಿತ ನಿರ್ದೇಶಕ ರಜನೀಶ್ ಕುಮಾರ್ ಹೇಳಿದ್ದಾರೆ.
ಮಾಸಿಕ ವೇತನ ಪಡೆಯುವ ಮಹಿಳೆಯರಿಗೆ ಶೇ.0.25ರಷ್ಟು ಗೃಹ ಸಾಲ ಬಡ್ಡಿ ದರವನ್ನು ಇಳಿಸಲಾಗಿದೆಯಾದರೆ ಮಾಸಿಕ ವೇತನ ಪಡೆಯದ ಮಹಿಳೆಯರಿಗೆ ನೀಡಲಾಗುವ ಗೃಹ ಸಾಲದ ಮೇಲಿನ ಬಡ್ಡಿಯನ್ನು ಶೇ.0.20 ಇಳಿಸಲಾಗಿದೆ. ಪುರುಷರ ಸಂದರ್ಭದಲ್ಲೂ ಇದೇ ದರವನ್ನು ಅನ್ವಯಿಸಲಾಗಿದೆ.