ನವದೆಹಲಿ: ಬ್ಯಾಂಕ್ ನೌಕರರ ಸಂಘಟನೆಗಳು ಎರಡು ದಿನಗಳ ಮುಷ್ಕರಕ್ಕೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಮಾರ್ಚ್ 28-29ರಂದು ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿರುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ (ಮಾರ್ಚ್ 23) ತಿಳಿಸಿದೆ.
ಇದನ್ನೂ ಓದಿ:ಪತ್ನಿ ಬಳಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದ ಪೌರ ಕಾರ್ಮಿಕ ಏಕಾಏಕಿ ನಾಪತ್ತೆ
ಮುಷ್ಕರದ ದಿನ ನಮ್ಮ ಬ್ಯಾಂಕ್ ಶಾಖೆಗಳು ಮತ್ತು ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುವ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಸ್ ಬಿಐ ಗ್ರಾಹಕರಿಗೆ ಭರವಸೆ ನೀಡಿದ್ದು, ಆದರೂ ಮುಷ್ಕರದಿಂದ ನಮ್ಮ ಬ್ಯಾಂಕ್ ನ ಸೇವೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದ್ದಿರುವುದಾಗಿ ಹೇಳಿದೆ.
ಮುಷ್ಕರದಿಂದಾಗುವ ಸಂಭಾವ್ಯ ನಷ್ಟವನ್ನು ಅಂದಾಜಿಸಲು ಸಾಧ್ಯವಿಲ್ಲ ಎಂದು ಎಸ್ ಬಿಐ ತಿಳಿಸಿದೆ. ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (ಎಐಬಿಇಎ), ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ (ಬಿಇಎಫ್ ಐ) ಮತ್ತು ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್ ದೇಶಾದ್ಯಂತ ಎರಡು ದಿನಗಳ ಕಾಲ ಮುಷ್ಕರ ನಡೆಸಲು ನಿರ್ಧರಿಸಿರುವುದಾಗಿ ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್ (ಐಬಿಎ)ಗೆ ತಿಳಿಸಿರುವುದಾಗಿ ಎಸ್ ಬಿಐ ಹೇಳಿದೆ.
ಬ್ಯಾಂಕಿಂಗ್ ಕಾಯ್ದೆಗಳ ತಿದ್ದುಪಡಿ ಮಸೂದೆ 2021 ಮತ್ತು ಕೇಂದ್ರ ಸರ್ಕಾರದ ಖಾಸಗಿ ಬ್ಯಾಂಕ್ ಗಳ ಖಾಸಗೀಕರಣದ ನಿಲುವನ್ನು ವಿರೋಧಿಸಿ ಮಾರ್ಚ್ 28 ಮತ್ತು 29ರಂದು ಮುಷ್ಕರ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದೆ.