Advertisement

ನಗರಸಭೆ ಆಡಳಿತದಿಂದ ಸಾಮರಸ್ಯ ಹಾಳು ಮಾಡುವ ಕೆಲಸ ; ಜಾಕೀರ್ ಆರೋಪ

04:09 PM Feb 28, 2022 | sudhir |

ಸಾಗರ: ಇಲ್ಲಿನ ನಗರಸಭೆ ಸಾಮಾನ್ಯಸಭೆಯಲ್ಲಿ ಸೋಮವಾರ ವಾರ್ಡ್ ನಂ. 2ರಲ್ಲಿರುವ ಖಾಸಗಿ ಜಾಗದಲ್ಲಿ ಮದರಸ ಸ್ಥಾಪಿಸಿ, ಅಲ್ಲಿ ಪ್ರಾರ್ಥನೆ ಇನ್ನಿತ್ಯಾದಿ ಚಟುವಟಿಕೆ ನಡೆಸುತ್ತಿರುವುದರ ಪರ ಮತ್ತು ವಿರೋಧ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಪರಸ್ಪರ ವಾಗ್ವಾದ ನಡೆಯಿತು.

Advertisement

ವಿಷಯ ಕುರಿತು ಮಾತನಾಡಿದ ಜೆಡಿಎಸ್ ಸದಸ್ಯ ಸೈಯದ್ ಜಾಕೀರ್, ಕಳೆದ ಸಾಮಾನ್ಯಸಭೆಯಲ್ಲಿ ಉದ್ದೇಶಿತ ಜಾಗದಲ್ಲಿರುವ ಮದರಸದಲ್ಲಿ ಪ್ರಾರ್ಥನೆ ಇನ್ನಿತ್ಯಾದಿ ಚಟುವಟಿಕೆ ನಡೆಸಲು ನಗರಸಭೆ ಅಡ್ಡಿಪಡಿಸಬಾರದು ಎಂದು ವಿಪಕ್ಷದಿಂದ ನಾವು ಮನವಿ ಮಾಡಿದ್ದೇವೆ. ಆದರೆ ಈ ಸಭೆಯಲ್ಲಿ ಮತ್ತೆ ವಿಷಯವನ್ನು ಪ್ರಸ್ತಾಪಿಸಿ ಅವಕಾಶ ನೀಡಬಾರದು ಎಂಬರ್ಥದಲ್ಲಿ ವಿಷಯ ತಂದಿರುವುದು ಸರಿಯಲ್ಲ. ಊರಿನಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡಲು ನಗರಸಭೆ ಮುಂದಾಗಬೇಕೆ ವಿನಃ ಸಾಮರಸ್ಯ ಹಾಳು ಮಾಡುವ ಕೆಲಸ ಮಾಡಬಾರದು ಎಂದು ಒತ್ತಾಯಿಸಿದರು. ಸೈಯದ್ ಜಾಕೀರ್‌ಗೆ ಕಾಂಗ್ರೆಸ್ ವಿಪಕ್ಷ ನಾಯಕ ಮಂಡಗಳಲೆ ಗಣಪತಿ, ಲಲಿತಮ್ಮ, ಮಧುಮಾಲತಿ, ಟಿಪ್‌ಟಾಪ್ ಬಶೀರ್ ಇನ್ನಿತರರು ಧ್ವನಿಗೂಡಿಸಿದರು.

ಬಿಜೆಪಿ ಸದಸ್ಯರಾದ ಸರೋಜ ಭಂಡಾರಿ ಮತ್ತು ಗಣೇಶ್ ಪ್ರಸಾದ್ ಮಾತನಾಡಿ, ಮದರಸದಲ್ಲಿ ಪ್ರಾರ್ಥನೆ ಇನ್ನಿತ್ಯಾದಿ ನಡೆಯುತ್ತಿರುವುದರಿಂದ ಸ್ಥಳೀಯರಿಗೆ ಸಮಸ್ಯೆ ಉಂಟಾಗುತ್ತಿದೆ. ಊರಿನಲ್ಲಿ ವಾತಾವರಣ ಸರಿಯಿಲ್ಲ. ಇಂತಹ ಹೊತ್ತಿನಲ್ಲಿ ಅನಗತ್ಯ ಸಮಸ್ಯೆಯನ್ನು ತಂದುಕೊಂಡು ಊರಿನಲ್ಲಿ ಮತ್ತೊಂದು ರೀತಿಯಲ್ಲಿ ಅಶಾಂತಿ ಉಂಟು ಮಾಡುವುದು ಬೇಡ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಮಧ್ಯಪ್ರವೇಶಿಸಿ ಮಾತನಾಡಿದ ಅಧ್ಯಕ್ಷೆ ಮಧುರಾ ಶಿವಾನಂದ್, ವಿಪಕ್ಷಗಳ ಅಭಿಪ್ರಾಯವನ್ನು ಲಿಖಿತವಾಗಿ ನೀಡಿ, ಇದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ : ಮೇಕೆದಾಟು 2.0: ಮುರುಘಾ ಶ್ರೀಗಳು ಸೇರಿ ಅನೇಕ ಸ್ವಾಮೀಜಿಗಳ ಪಾದಯಾತ್ರೆ

Advertisement

ನಗರವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಾಗ ವಿಪಕ್ಷ ಸದಸ್ಯರಿಗೆ ಅನುದಾನ ಸರಿಯಾಗಿ ನೀಡುತ್ತಿಲ್ಲ. ನಾವು ಸಹ ಜನರಿಂದ ಗೆದ್ದು ಬಂದವರಾಗಿದ್ದೇವೆ. ನಮ್ಮ ವಾರ್ಡ್‌ಗಳಿಗೆ ಅನುದಾನ ಏಕೆ ಸರಿಯಾಗಿ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಸದಸ್ಯೆ ಮಧುಮಾಲತಿ ಪ್ರಶ್ನೆ ಮಾಡಿದರೆ, ಇನ್ನೋರ್ವ ಸದಸ್ಯೆ ಎನ್.ಲಲಿತಮ್ಮ ವಿಪಕ್ಷ ಸದಸ್ಯರ ವಾರ್ಡ್‌ಗಳಿಗೆ ಅನುದಾನ ಸರಿಯಾಗಿ ನೀಡುತ್ತಿಲ್ಲ. ನಾವು ಜನರಿಗೆ ಉತ್ತರ ಕೊಡಲು ಆಗುತ್ತಿಲ್ಲ. ಇಂತಹ ತಾರತಮ್ಯನೀತಿ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿ, ನಗರೋತ್ಥಾನ ಯೋಜನೆಯಡಿ ನಗರ ಅಭಿವೃದ್ಧಿಗೆ ೩೦ ಕೋಟಿ ರೂ. ಅನುದಾನ ಬಂದಿದ್ದು ಕ್ರಿಯಾಯೋಜನೆ ತಯಾರಿಸುವಾಗ ವಿಪಕ್ಷದವರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು. ಅಧ್ಯಕ್ಷೆ ಮಧುರಾ ಮಾತನಾಡಿ, ಅನುದಾನ ಹಂಚಿಕೆ ಸಂದರ್ಭದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಎಲ್ಲ ವಾರ್ಡ್‌ಗಳಿಗೆ ಅನುದಾನವನ್ನು ಸರಿಯಾಗಿ ನೀಡಲಾಗಿದೆ ಎಂದು ಪ್ರತಿಪಾದಿಸಿದರು.

ವಿಪಕ್ಷ ನಾಯಕ ಮಂಡಗಳಲೆ ಗಣಪತಿ ಮಾತನಾಡಿ, ನಗರವ್ಯಾಪ್ತಿಯಲ್ಲಿ ಈಡಿಗ, ಲಂಬಾಣಿ ಸೇರಿದಂತೆ ವಿವಿಧ ಜನಾಂಗದ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಕೋರಿದ್ದಾರೆ. ಸೂಕ್ತ ಜಾಗ ಗುರುತಿಸಿ ನಿವೇಶನ ನೀಡಿ. ಜೊತೆಗೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ಸೂಕ್ತ ಜಾಗ ನೀಡುವಂತೆ ಮನವಿ ಮಾಡಿದರು. ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿ, ನಿವೃತ್ತ ನೌಕರರ ಸಂಘ ಸೇರಿದಂತೆ ಅನೇಕ ಸಂಘಟನೆಗಳು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಕಾಯುತ್ತಿವೆ. ಕಾನೂನು ತೊಡಕುಗಳಿಲ್ಲದೆ ಇರುವ ಜಾಗ ಗುರುತಿಸಿ ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದು ನಿವೇಶನ ಕೊಡುವಂತೆ ಮನವಿ ಮಾಡಿದರು.

ಪೌರಾಯುಕ್ತ ರಾಜು ಡಿ. ಬಣಕಾರ್, ಉಪಾಧ್ಯಕ್ಷ ವಿ.ಮಹೇಶ್ ಹಾಗೂ ನಗರಸಭೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next