ಪ್ರತಿ ಸಲ ಮುನಿಸಿಕೊಂಡಾಗಲೂ ನಾನೇ ಕ್ಷಮೆ ಕೇಳಿದ್ದೀನಿ, ನಿನ್ನ ಎಲ್ಲ ಸಮಸ್ಯೆಗಳೂ ನಂದೇ ಅಂದುಕೊಂಡು ಪರಿಹಾರ ಮಾಡಿದೀನಿ, ನಿನಗೆ ಬರೀ ಒಳ್ಳೆಯದೇ ಆಗಲಿ ಅಂತ ಬಯಸಿದ್ದೀನಿ… ಆದ್ರೂ ನೀನು ನನ್ನಿಂದ ದೂರಾಗೋಕೆ ನೋಡ್ತಿದ್ದೀಯ!
ಕೆಲವೊಂದ್ಸಲ ಯಾಕ್ ಬೇಕು ಇದೆಲ್ಲಾ ನಂಗೆ ಅನ್ನಿಸುತ್ತೆ. ನಾನ್ಯಾಕ್ ನಿನ್ನನ್ನ ಅಷ್ಟೊಂದು ಹಚ್ಕೊಂಡಿದೀನಿ? ನಿದ್ದೆ ಬರೋಲ್ಲ, ಊಟ ಸೇರೋದಿಲ್ಲ, ತಲೆ ತುಂಬಾ ನಿನ್ನದೇ ಯೋಚನೆ. ಇತ್ತೀಚೆಗೆ ನೀನು ಮಾತಾಡೋ ರೀತಿ ನೋಡಿ, ನಂಗೆ ಏನು ಮಾಡೋಕೂ ತೋಚುತ್ತಿಲ್ಲ. ನಿನ್ನ ಮನಸ್ಸಿನಲ್ಲೇನು ನಡೀತಿದೆ ಅಂತ ಹೇಳಿದ್ರೆ ತಾನೇ ನಂಗರ್ಥ ಆಗೋದು. ಹೇಳದೇನೇ ಎಲ್ಲ ಅರ್ಥ ಮಾಡಿಕೊಳ್ಳೋಕೆ ದೇವರಲ್ಲ ನಾನು.
ಆದರೂ ನಿನ್ನ ಮನಸ್ಸನ್ನು ತಿಳಿದುಕೊಳ್ಳೋಜೆ ಪ್ರಯತ್ನಪಟ್ಟೆ. ಸಾಧ್ಯ ಆಗ್ಲಿಲ್ಲ. ಯಾಕಂದ್ರೆ, ನಾನು ಏನೇ ಕೇಳಿದ್ರೂ ನಿನ್ನ ಉತ್ತರ ಒಂದೇ; “ನಂಗೊತ್ತಿಲ್ಲ, ನನ್ನನ್ನ ಏನೂ ಕೇಳ್ಬೇಡ!’ ಜಗತ್ತಲ್ಲಿ ಏನೇ ಆದ್ರೂ, ನೀನು ಚೆನ್ನಾಗಿರಬೇಕು ಅಂತ ಕನಸು ಕಂಡಿದ್ದೆ. ಆ ಒಂದು ಕನಸೂ ಕನಸಾಗೇ ಉಳಿಯೋ ಹಾಗಿದೆ. “ನೀನು ನಂಗೆ ಮೆಸೇಜ್ ಮಾಡಲ್ಲ, ಫೋನಲ್ಲಿ ಸರಿಯಾಗಿ ಮಾತಾಡಲ್ಲ, ನಿಂಗೆ ನನ್ನ ಮೇಲೆ ಪ್ರೀತೀನೇ ಇಲ್ಲ’ ಅಂತೆಲ್ಲಾ ನೀನು ಆಗಾಗ ನಂಗೆ ಬೈತಿದ್ದೆ ಅಲ್ವಾ?
ದಯವಿಟ್ಟು, ಈ ಮಾತನ್ನೆಲ್ಲ ವಾಪಸ್ ತಗೋ. ಯಾಕಂದ್ರೆ, ನಂಗೆ ನಂದಲ್ಲದ ತಪ್ಪನ್ನ ನನ್ನ ಮೇಲೆ ತಗೊಳ್ಳೋಕೆ ಇಷ್ಟ ಇಲ್ಲ. ಒಂದೇ ಒಂದು ದಿನನಾದ್ರೂ ನಾನು ಹಾಗೆ ಮಾಡಿದ್ನಾ ಹೇಳು? ಪ್ರತಿ ಸಲ ಮುನಿಸಿಕೊಂಡಾಗಲೂ ನಾನೇ ಕ್ಷಮೆ ಕೇಳಿದ್ದೀನಿ, ನಿನ್ನ ಎಲ್ಲ ಸಮಸ್ಯೆಗಳೂ ನಂದೇ ಅಂದುಕೊಂಡು ಪರಿಹಾರ ಮಾಡಿದೀನಿ, ನಿನಗೆ ಬರೀ ಒಳ್ಳೆಯದೇ ಆಗಲಿ ಅಂತ ಬಯಸಿದ್ದೀನಿ… ಆದ್ರೂ ನೀನು ನನ್ನಿಂದ ದೂರಾಗೋಕೆ ನೋಡ್ತಿದ್ದೀಯ!
ಕೊನೇ ಸಲ ನಿನ್ನನ್ನು ಹತ್ತಿರದಿಂದ ನೋಡ್ಬೇಕು ಅಂತ ತುಂಬಾ ತುಂಬಾ ಆಸೆ ಆಗ್ತಿದೆ. ಅದನ್ನಾದ್ರೂ ಈಡೆರಿಸ್ತೀಯ. ನೆನಪೆಂಬ ಬಾಣಗಳು ಚುಚ್ಚಿ ಚುಚ್ಚಿ ಎದೆಗೂಡಲ್ಲಿ ದೊಡ್ಡ ಗಾಯ ಆಗಿದೆ. ಗಾಯ ವಾಸಿ ಮಾಡೋಕೆ ನಿನ್ನಿಂದ ಮಾತ್ರ ಸಾಧ್ಯ. ಕೊನೆಯ ಬಾರಿ ಕೇಳ್ತಾ ಇದ್ದೀನಿ, “ನಾ ಮಾಡಿದ ತಪ್ಪಾದ್ರು ಏನು?’
ಇಂತಿ ನೀನೇ ದೂರ ಮಾಡಿದ ಪ್ರೇಮಿ
ಹರ್ಷ ಮ್ಯಾಗೇರಿ, ಬ್ಯಾಡಗಿ