ಜಂಕ್ ಫುಡ್ ಅಂದಾಕ್ಷಣ ಮಕ್ಕಳು ಬಿಡಿ, ದೊಡ್ಡವರ ಬಾಯಲ್ಲಿಯೂ ನೀರೂರುತ್ತೆ. ರಸ್ತೆ ಬದಿ ಹೋಗುವಾಗೆಲ್ಲ ಪಾನಿಪುರಿ, ಮಸಾಲ ಪುರಿ ಸೇರಿದಂತೆ ಇನ್ನಿತರ ತರಹೇವಾರಿ ಐಟಂಗಳ ಸುವಾಸನೆ ಎಂತಹ ಕಟ್ಟಿದ ಮೂಗನ್ನಾದರೂ ಒಮ್ಮೆ ತನ್ನತ್ತ ಸೆಳೆಯುವಂತೆ ಮಾಡುತ್ತದೆ.ಇವುಗಳು ನಾಲಗೆಗೆ ಎಷ್ಟು ರುಚಿಯೋ, ಆರೋಗ್ಯದ ಮೇಲೆ ಅಷ್ಟೇ ದುಷ್ಪರಿಣಾಮವನ್ನು ಬೀರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾದರೆ ಜಂಕ್‌ಫುಡ್‌ನಿಂದ ಮಕ್ಕಳನ್ನು ದೂರವಿರಿಸಿ ಅವರ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ಯೋಚಿಸುತ್ತಿದ್ದೀರಾ. ಇಲ್ಲಿದೆ ಅದಕ್ಕೆ ಕೆಲವು ಪರಿಹಾರೋಪಾಯಗಳು.
– ತಿನ್ನುವ ಆಹಾರದ ಒಳಿತು ಕೆಡುಕುಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು ಉತ್ತಮ. ಯಾವ ಆಹಾರ ಆರೋಗ್ಯಪೂರ್ಣ ಜೀವನ ಒದಗಿಸುತ್ತದೆ ಎನ್ನುವುದನ್ನು ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಲಿಸಿದರೆ ಭವಿತವ್ಯದಲ್ಲಿ ಆಹಾರ ಪದಾರ್ಥಗಳ ಮೇಲೆ ಅವರೇ ಕಾಳಜಿ ವಹಿಸುವುದನ್ನು ಕಲಿತುಕೊಳ್ಳುತ್ತಾರೆ.
- ಮಕ್ಕಳು ಹಿರಿಯರನ್ನು ಅನುಸರಿಸುವುದೇ ಹೆಚ್ಚು. ಅವರೆದುರು ನೀವು ಜಂಕ್ ಫುಡ್ ಸೇವಿಸುವತ್ತ ಗಮನ ಹರಿಸಿದಿರಿ ಎಂದಾದಲ್ಲಿ ಅವರೂ ನಿಮ್ಮ ಹಾದಿಯನ್ನೇ ತುಳಿಯುತ್ತಾರೆ. ಆದ್ದರಿಂದ ನೀವು ಜಂಕ್‌ಫುಡ್ ಸೇವಿಸುವ ಹವ್ಯಾಸ ಬಿಟ್ಟು ಬಿಟ್ಟಲ್ಲಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮ.
- ನಮ್ಮ ನಡವಳಿಕೆ, ಸುತ್ತಮುತ್ತಲಿನ ಪರಿಸರ ಮಕ್ಕಳ ಆಹಾರ ಪದ್ಧತಿಯ ಮೇಲೆ ಪರಿಣಾಮ ಬೀರುತ್ತವೆ. ಮನೆಯಲ್ಲಿಯೇ ತಯಾರಿಸಲಾಗುವ ಆಹಾರ ವಸ್ತುಗಳನ್ನೇ ನಾವು ಹೆಚ್ಚಾಗಿ ನೆಚ್ಚಿಕೊಂಡರೆ ಮಕ್ಕಳೂ ನಮ್ಮ ಆರೋಗ್ಯ ಪೂರ್ಣ ಹವ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಸಾಧ್ಯ.
- ಮಕ್ಕಳು ಹೇಳಿದ್ದು ಕೇಳಬೇಕು ಎನ್ನುವುದಕ್ಕಾಗಿ ಹಲವಾರು ಬಾರಿ ಹಿರಿಯರು ಅವರಿಗೆ ಚಾಕೋಲೇಟ್‌ನಂತ ವಸ್ತುಗಳನ್ನು ನೀಡುವುದಾಗಿ ಆಮಿಷವನ್ನು ಒಡ್ಡುತ್ತಾರೆ.ಇದನ್ನೆ ಹವ್ಯಾಸವನ್ನಾಗಿ ಬೆಳೆಸಿಕೊಳ್ಳುವ ಸಂಭವವಿರುವುದರಿಂದ ಈ ಬಗ್ಗ ಎಚ್ಚರಿಕೆ ಅತ್ಯಗತ್ಯ.
ಈ ಎಲ್ಲ ಕ್ರಮಗಳನ್ನು ಅನುಸರಿಸಿದರೆ ನಮ್ಮ ಮಕ್ಕಳನ್ನು ಜಂಕ್‌ಫುಡ್‌ನಿಂದ ದೂರವಿರಿಸುವುದು, ಅವರಿಗೆ ಅರೋಗ್ಯಪೂರ್ಣ ಆಹಾರ ಪದ್ಧತಿಯ ಬಗ್ಗೆ ಅರಿವು ಮೂಡಿಸಲು ಸಾಧ್ಯ.
-ಭುವನ ಬಾಬು,ಪುತ್ತೂರು