Advertisement
ಚಿಕ್ಕಂದಿನಲ್ಲಿಯೇ ಸಂಗೀತದೊಡನೆ ಬೆರೆತು, ಅಭ್ಯಾಸಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರಲ್ಲಿ ಇವರು ಒಬ್ಬರು. ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ಸ್ಯಾಕ್ಸೋಫೋನ್ ನ್ನು ಕೈಗೆತ್ತಿಕೊಂಡವರು. ಸಂಪೂರ್ಣವಾಗಿ ವಾದನವನ್ನು ಕರಗತಮಾಡಿಕೊಂಡರು. ಉಡುಪಿ ಜಿಲ್ಲೆಯ ಅಲೆವೂರು ರಾಘವ ಶೇರಿಗಾರ್ ಮೋಹಿನಿ ದಂಪತಿಯ ಮಗಳು ಕುಮಾರಿ ದೀಕ್ಷಾ. ಬಿ.ಎ., ಎಂ.ಎ ಅರ್ಥಶಾಸ್ತ್ರ ಮುಗಿಸಿ ಬಿ.ಎಡ್. ಕಲಿಯುತ್ತಿದ್ದಾರೆ.
ಆಕಾಶವಾಣಿಯ ಕೊಳಲು ಕಲಾವಿದರಾದ ಉಡುಪಿ ಕೆ.ರಾಘವೇಂದ್ರ ರಾವ್‌ರವರ ನೆಚ್ಚಿನ ಶಿಷ್ಯೆಯಾಗಿದ್ದಾರೆ. ಅಂತೆಯೇ ಮೊದಲ ಎರಡು ವರ್ಷದ ಸಂಗೀತ ವಾದನ ಅಭ್ಯಾಸವನ್ನು ಅಲೆವೂರು ಸುಂದರ ಶೇರಿಗಾರ್‌ರವರ ಬಳಿ ಕಲಿತಿರುವರು. ವಾದನ ಅಭ್ಯಾಸವನ್ನು ವಿದುಷಿ ಮಾಧವ ಭಟ್ ಇವರ ಬಳಿ ಕಲಿಯುತ್ತಿದ್ದಾರೆ. ಈಗಾಗಲೇ ಉಡುಪಿಯ ನಾನಾ ಭಾಗಗಳಲ್ಲಿ ದೀಕ್ಷಾರವರು ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮವನ್ನು ನೀಡಿದ್ದಾರೆ. ಅಲ್ಲದೇ ಮಂಗಳೂರು, ಮೂಡುಬಿದಿರೆ, ಬೆಂಗಳೂರು, ಮೈಸೂರು, ಹಾಸನ, ಬಳ್ಳಾರಿ, ಕೋಲಾರ, ಹುಬ್ಬಳ್ಳಿ, ಕುಮಟಾ, ಹೊನ್ನಾವರ, ಯಲ್ಲಾಪುರ, ಗೋವಾ ಅಲ್ಲದೇ ತಮಿಳುನಾಡು, ಮುಂಬಯಿ ಹಾಗೂ ಕೇರಳದ ನಾನಾ ಕಡೆಗಳಲ್ಲಿ ಕಾರ್ಯಕ್ರಮವನ್ನು ನೀಡಿರುತ್ತಾರೆ. ಒಟ್ಟಾರೆಯಾಗಿ 8 ಸಾವಿರಕ್ಕಿಂತಲೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.
Related Articles
2008ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇದೇ ವರ್ಷ ಕನ್ನಡ ಸಾಂಸ್ಕೃತಿಕ ಇಲಾಖೆ ಶ್ರೀ ಚಕ್ರೇಶ್ವರಿ ದೇವಸ್ಥಾನ ಕೋಡಿ ಕನ್ಯಾನ ಸಾಸ್ತಾನ ಇಲ್ಲಿನ ಸಾಧನ ಪ್ರಶಸ್ತಿ ಪತ್ರವನ್ನು ಗಳಿಸಿರುತ್ತಾರೆ. ಭಾರತ ಸರಕಾರದಿಂದ ಸ್ಯಾಕ್ಸೋಫೋನ್ ವಾದನಕ್ಕಿರುವ ಪ್ರಶಸ್ತಿ ಪತ್ರವನ್ನು ಪಡೆದಿರುತ್ತರೆ. 2010ರಲ್ಲಿ ಬೆಂಗಳೂರಿನಲ್ಲಿ ನೀಡಿದ ಧಾರ್ಮಿಕ ಕಾರ್ಯಕ್ರಮಕ್ಕೆ ಸ್ಯಾಕ್ಸೋಫೋನ್ ವಾದನದಲ್ಲಿ ನಾದ ವೈಭವ ಬಿರುದು ಪಡೆದಿದ್ದಾರೆ. 2010 ರಲ್ಲಿ ತಾಲೂಕು ಮಟ್ಟದ ಪ್ರೌಢ ಶಾಲಾ ವಿಭಾಗದ ವಾದ್ಯ ಸಂಗೀತದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ, ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಜಿಲ್ಲಾಮಟ್ಟದ ವರೆಗೂ ಪ್ರತಿನಿಧಿಸಿದ್ದಾರೆ. ಉಡುಪಿಯ ಶ್ರೀಕೃಷ್ಣ ಮಠ ಶ್ರೀ ಅದಮಾರು ಮಠದ ಸ್ವಾಮೀಜಿಯವರ ಪರ್ಯಾಯ ಮಹೋತ್ಸವಕ್ಕೆ ನೀಡದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಗೋವಾದಲ್ಲಿ ನಡೆದ ನೇಶನಲ್ ಕಲ್ಚರಲ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಅರ್ಹತಾಪತ್ರವನ್ನು ಪಡೆದುಕೊಂಡಿದ್ದಾರೆ. ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು ನಡೆಸಿದ 2017 ನೇ ಸಾಲಿನ ವಾದ್ಯ ಸಂಗೀತ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯಲ್ಲೇ ಈಕೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
Advertisement
ಅಖಿಲೇಶ್ ನಗುಮುಗಮ್