ಪಣಜಿ : ವೀಸಾ ನಿಯಮ ಉಲ್ಲಂಘನೆಗೈವ ವಿದೇಶೀ ಪ್ರಜೆಗಳನ್ನು ವಶಕ್ಕೆ ತೆಗೆದುಕೊಂಡು ಬಂಧನದಲ್ಲಿ ಇರಿಸುವ ಕೇಂದ್ರವನ್ನು (ಡಿಟೆನ್‌ಶನ್ ಸೆಂಟರ್) ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಇಂದು ಬುಧವಾರ ಉದ್ಘಾಟಿಸಿದರು.
ಇಲ್ಲಿಂದ ಸುಮಾರು 9 ಕಿ.ಮೀ. ದೂರದಲ್ಲಿರುವ ಮಾಪುಸಾ ಪಟ್ಟಣದಲ್ಲಿರುವ ಉಪ ಬಂಧೀಖಾನೆಯನ್ನು ಡಿಟೆನ್‌ಶನ್ ಕೇಂದ್ರವನ್ನಾಗಿ ಪರಿವರ್ತಿಸಲು ರಾಜ್ಯ ಸರಕಾರ 50 ಲಕ್ಷ ರೂ. ವ್ಯಯಿಸಿದೆ.
ಗೋವೆಯಲ್ಲಿ ವೀಸಾ ಅವಧಿ ಮುಗಿದು ಅಕ್ರಮ ವಾಸ್ತವ್ಯ ಮುಂದುವರಿಸಿರುವ ವಿದೇಶೀ ಪ್ರಜೆಗಳನ್ನು ವಶಕ್ಕೆ ತೆಗೆದುಕೊಂಡು ಇಲ್ಲಿ ಇರಿಸಲಾಗುವುದು.
ಈ ಡಿಟೆನ್‌ಶನ್ ಸೆಂಟರ್ ನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೋಣೆಗಳಿದ್ದು ಒಟ್ಟು 20 ಮಂದಿಯನ್ನು ಇಲ್ಲಿ ಇರಿಸಬಹುದಾಗಿದೆ ಎಂದು ಸಿಎಂ ಸಾವಂತ್ ಹೇಳಿದರು.
ಈ ಬಗೆಯ ಸೌಕರ್ಯ ದಿಲ್ಲಿಯಲ್ಲಿದ್ದು ಅನಂತರದಲ್ಲಿ ಇದನ್ನು ಹೊಂದಿರುವ ಗೋವಾ ದೇಶದ ಎರಡನೇ ರಾಜ್ಯವಾಗಿದೆ ಎಂದು ಸಿಎಂ ಹೇಳಿದರು.