ಮುಂಬೈ: ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್ ಗಳು ಆಂಗ್ಲ ಬೌಲರ್ ಗಳಿಗೆ ನರಕ ದರ್ಶನ ಮಾಡಿದ್ದಾರೆ. ಸಿಕ್ಸರ್, ಬೌಂಡರಿಗಳ ಸುರಿಮಳೆಗೈದ ಹರಿಣಗಳ ಬ್ಯಾಟರ್ ಗಳು ವಾಂಖೆಡೆ ಸ್ಟೇಡಿಯಂನಲ್ಲಿ ರನ್ ರಾಶಿ ಪೇರಿಸಿದ್ದಾರೆ.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 399 ರನ್ ಗಳಿಸಿತು.
ಮೊದಲ ಓವರ್ ನಲ್ಲಿ ಡಿಕಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ದ.ಆಫ್ರಿಕಾಗೆ ರೀಜಾ ಹೆಂಡ್ರಿಕ್ಸ್ ಮತ್ತು ಡ್ಯೂಸನ್ 121 ರನ್ ಜೊತೆಯಾಟವಾಡಿ ಆಧರಿಸಿದರು. ರೀಜಾ ಹೆಂಡ್ರಿಕ್ಸ್ 85 ರನ್ ಗಳಿಸಿದರೆ, ವಾನ್ ಡರ್ ಡ್ಯೂಸನ್ 60 ರನ್ ಗಳಿಸಿದರು. ಹಂಗಾಮಿ ನಾಯಕ 42 ರನ್ ಗಳಿಸಿದರು.
ಒಂದು ಹಂತದಲ್ಲಿ 36.3 ಓವರ್ ಗಳಲ್ಲಿ 243 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಹೆನ್ರಿಕ್ ಕ್ಲಾಸೆನ್ ಮತ್ತು ಮ್ಯಾಕ್ರೊ ಯಾನ್ಸನ್ ಅದ್ಭುತ ಜೊತೆಯಾಟದಿಂದ ನೆರವಾದರು. ಹೊಡೆಬಡಿ ಹೊಡೆತಗಳಿಂದ ಪ್ರೇಕ್ಷಕರನ್ನು ರಂಜಿಸಿದ ಜೋಡಿ 151 ರನ್ ಜೊತೆಯಾಟವಾಡಿದರು. ಕ್ಲಾಸನ್ ಕೇವಲ 67 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ನೆರವಿನಿಂದ 109 ರನ್ ಬಾರಿಸಿದರು.
ಮತ್ತೊಂದೆಡೆ ಮನಬಂದಂತೆ ಚಚ್ಚಿದ ಯಾನ್ಸನ್ ಕೇವಲ 42 ಎಸೆತಗಳಲ್ಲಿ 75 ರನ್ ಬಾರಿಸಿದರು. ಯಾನ್ಸನ್ ಏಳು ಸಿಕ್ಸರ್ ಬಾರಿಸಿ ಮಿಂಚಿದರು. ಕೊನೆಯ ಹತ್ತು ಓವರ್ ಗಳಲ್ಲಿ 143 ರನ್ ಹರಿದು ಬಂತು.
ಏಕದಿನದಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಗಳಿಸಿದ ಅತಿ ಹೆಚ್ಚು ರನ್ ಇದಾಗಿದೆ.