ಪ್ರಸ್ತುತ ಸಂದರ್ಭದಲ್ಲಿ ಬ್ಯಾಂಕ್ ವ್ಯವಹಾರ, ಹಣಕಾಸಿಗೆ ಸಂಬಂಧಿಸಿದಂತೆ ನಾನಾ ಬದಲಾವಣೆಗಳು ಆಗಿವೆ, ಆಗುತ್ತಿವೆ. ಹೂಡಿಕೆ ಮಾಡಲಿಚ್ಛಿಸುವ ಹಿರಿಯ ನಾಗರಿಕರಿಗೆ ಸದ್ಯದ ಮಟ್ಟಿಗೆ ಇರುವ ಮೂರು ಆಯ್ಕೆಗಳೆಂದರೆ ಸೀನಿಯರ್ ಸಿಟಿಝನ್ ಸೇವಿಂಗ್ಸ್ ಸ್ಕೀಮ್, ಪೋಸ್ಟ್ ಆಫೀಸ್ ಮಂತ್ಲಿ ಇನ್ ಕಂ ಸ್ಕೀಂ ಮತ್ತು ಪ್ರಧಾನಮಂತ್ರಿ ವಯ ವಂದನಾ ಯೋಜನ. ಈ ಮೂರರಲ್ಲಿ ಯಾವುದು ಒಳ್ಳೆಯದು?
ಸೀನಿಯರ್ ಸಿಟಿಝನ್ ಸೇವಿಂಗ್ಸ್ ಸ್ಕೀಮ್: ಹಿರಿಯ ನಾಗರಿಕರು ಈ ಯೋಜನೆಯಡಿ 15 ಲಕ್ಷದ ವರೆಗೂ ಹೂಡಿಕೆ ಮಾಡ ಬಹುದಾಗಿದೆ. ಈ ಸ್ಕೀಮ್ 5 ವರ್ಷಕ್ಕೆ ಮೆಚೂರ್ ಆಗುವುದು. ನಂತರ ಖಾತೆದಾರರು ಇಚ್ಛಿಸಿದಲ್ಲಿ 3 ವರ್ಷಗಳ ಅವಧಿಗೆ ಸ್ಕೀಮನ್ನು ವಿಸ್ತರಿಸಬಹುದಾಗಿದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿಯನ್ನು ಇಳಿಸಿದ್ದರೂ ಈ ಯೋಜನೆ ಯಲ್ಲಿ ಶೇ.7.45ರಷ್ಟು ಬಡ್ಡಿ ದೊರೆ ಯು ತ್ತಿದೆ. ಹಿರಿಯ ನಾಗರಿಕರಿಗೆ ಮೀಸಲಿ ರುವ ಇತರೆ ಯಾವುದೇ ಯೋಜನೆಗಳಿಗೆ ಹೋಲಿಸಿದರೂ ಇದು ಉತ್ತಮ ಹೂಡಿಕೆ ಯೋಜನೆ ಎನ್ನಬಹುದು.
ಪೋಸ್ಟ್ ಆಫೀಸ್ ಮಂತ್ಲಿ ಇನ್ ಕಂ ಸ್ಕೀಂ: ಈ ಯೋಜನೆ ತನ್ನ ಖಾತೆದಾರರಿಗೆ ಈಗ ಶೇ. 6.60 ಬಡ್ಡಿ ನೀಡುತ್ತದೆ. ಹೂಡಿಕೆ ನಡೆಸಲು ಬೇಕಾದ ಕನಿಷ್ಠ ಮೊತ್ತ 1,000 ರೂ. ಹೂಡಿಕೆ ನಡೆಸಬಹು ದಾದ ಗರಿಷ್ಠ ಮೊತ್ತ 4.5 ಲಕ್ಷ ರೂ. ಜಂಟಿ ಖಾತೆಯಾ ದರೆ 9 ಲಕ್ಷದವರೆಗೂ ಹೂಡಿಕೆ ನಡೆಸಬ ಹುದು. ಹಿರಿಯ ನಾಗರಿಕರು ಯಾವ ಪೋಸ್ಟ್ ಆಫೀಸಿನಲ್ಲಿ ಈ ಯೋಜನೆ ತೆರೆಯಬೇಕು ಅಂದುಕೊಳ್ಳುತ್ತಿದ್ದಾರೋ, ಅದೇ ಪೋಸ್ಟ್ ಆಫೀಸಿನಲ್ಲಿ ಮೊದಲು ಸೇವಿಂಗ್ಸ್ ಖಾತೆಯನ್ನು ತೆರೆಯಬೇಕು. ಯೋಜನೆಯಿಂದ ಬರುವ ತಿಂಗಳ ಬಡ್ಡಿ, ಆ ಸೇವಿಂಗ್ಸ್ ಖಾತೆಗೆ ಜಮೆಯಾಗುವುದು. ಈ ಯೋಜನೆಯಲ್ಲಿ ಸೇರುವ ಬಡ್ಡಿಗೆ ತೆರಿಗೆ ವಿಧಿಸಲಾಗುವುದು.
ಪ್ರಧಾನಮಂತ್ರಿ ವಯ ವಂದನಾ ಯೋಜನೆ: ಈ ಪೆನ್ಶನ್ ಯೋಜನೆಯನ್ನು ಎಲ್‌ಐಸಿಯಿಂದ ಖರೀದಿಸಬಹುದಾಗಿದೆ. ಪಾಲಿಸಿಯ ಅವಧಿ 10 ವರ್ಷಗಳು. 31 ಮಾರ್ಚ್ 2020ಕ್ಕೂ ಮೊದಲು ಖರೀದಿಸಿದವರಿಗೆ, ಶೇಕಡಾ 7.40 ರಿಟರ್ನ್ಸ್ ಸಿಗಲಿದೆ. ಹಿರಿಯ ನಾಗರಿಕರು ಈ ಯೋಜನೆಯಲ್ಲಿ ತಾವು ಹೂಡಿರುವಮೊತ್ತಕ್ಕೆ ಅನುಗುಣವಾಗಿ, ಪ್ರತಿ ತಿಂಗಳು ಕನಿಷ್ಠ 1,000 ರೂ., ಗರಿಷ್ಠ 10,000 ಪೆನ್ಶನ್ ಅನ್ನು ಡ್ರಾ ಮಾಡಿಕೊಳ್ಳಬಹುದು.ಸೀನಿಯರ್ ಸಿಟಿಝನ್ ಸೇವಿಂಗ್ಸ್ ಸ್ಕೀಮ್ ಮತ್ತು ಪ್ರಧಾನ ಮಂತ್ರಿ ವಯ ವಂದನಾ ಯೋಜನೆಗಳ ಬಡ್ಡಿ ಆದಾಯ ಶೇ. 7.40, ಪೋಸ್ಟ್ ಆಫೀಸ್ ಇನ್ ಕಂ ಸ್ಕೀಮ್ ಶೇ. 6.6 ಬಡ್ಡಿ ನೀಡುತ್ತದೆ.
ಹೀಗಾಗಿ, ಬಡ್ಡಿ ಆದಾಯವನ್ನು ಗಣನೆಗೆ ತೆಗೆದುಕೊಂಡರೆ ಸೀನಿಯರ್ ಸಿಟಿಝನ್ ಸೇವಿಂಗ್ಸ್ ಸ್ಕೀಮ್ ಮತ್ತು ಪ್ರಧಾನಮಂತ್ರಿ ವಯ ವಂದನಾ ಯೋಜನೆಗೆ ಮೊದಲ ಪ್ರಾಶಸ್ತ್ಯ ನೀಡಬಹುದು. ಸೀನಿಯರ್ ಸಿಟಿಝನ್ ಸೇವಿಂಗ್ಸ್ ಸ್ಕೀಮ್‌ಗೆ ಹೋಲಿಸಿದರೆ, ವಯ ವಂದನಾ ಯೋಜನೆಯು ಹೆಚ್ಚಿನ ಲಾಕ್ ಇನ್ ಅವಧಿಯನ್ನು ಹೊಂದಿದೆ. ಗ್ರಾಹಕರು ತಮಗೆ ಸೂಕ್ತ ಎನಿಸುವುದನ್ನು ಆರಿಸಿಕೊಳ್ಳಬಹುದು. ಪ್ರಧಾನ ಮಂತ್ರಿ ಪೆನ್ಶನ್ ಯೋಜನೆಯು ವಾರ್ಷಿಕ ರಿಟರ್ನ್ಸ್ ನೀಡಿದರೆ, ಸೀನಿಯರ್ ಸಿಟಿಝನ್ ಸ್ಕೀಮ್ ಮೂರು ತಿಂಗಳಿಗೊಮ್ಮೆ ರಿಟರ್ನ್ಸ್ ನೀಡುತ್ತದೆ.
ಇದಲ್ಲದೆ ಬ್ಯಾಂಕುಗಳಲ್ಲಿ ಫೀಕ್ಸೆಡ್ ಡೆಪಾಸಿಟ್ ಮಾಡಿಯೂ ಇಡಬಹುದಾಗಿದೆ. ಕೆಲ ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಶೇ. 7.7ರ ತನಕವೂ ಬಡ್ಡಿಯನ್ನು ನೀಡುತ್ತವೆ. ಹೀಗಾಗಿ, ಎಫ್.ಡಿ. ಆಯ್ಕೆಯನ್ನೂ ಪರಿಶೀಲಿಸಬಹುದು. ಒಂದೇ ಬ್ಯಾಂಕ್‌ನ ಎಫ್ಡಿ ಖಾತೆಯಲ್ಲಿ 5 ಲಕ್ಷ ರೂ. ತನಕದ ಮೊತ್ತ ಇಟ್ಟರೆ, ಅದಕ್ಕೆ ವಿಮೆಯ ಭದ್ರತೆಯೂ ಲಭಿಸುತ್ತದೆ.