ಸುಮಲತಾ, ಪ್ರೌಢಶಾಲೆಯೊಂದರಲ್ಲಿ ಟೀಚರ್. ಇಷ್ಟಪಟ್ಟು ಆಯ್ದುಕೊಂಡ ವೃತ್ತಿಯಾದ್ದರಿಂದ ಅದರಲ್ಲಿ ಅವರಿಗೆ ಸಂತೃಪ್ತಿಯಿದೆ. ಮದುವೆಯಾಗಿ ಎರಡು ಮಕ್ಕಳಿದ್ದರೂ, ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನಲ್ಲಿ ಸಮತೋಲನ ಕಾಯ್ದುಕೊಂಡು, ಅವರ ಮಟ್ಟಿಗೆ ಅವರು ಸುಖೀ. ವರ್ಷಗಳು ಉರುಳುತ್ತಾ ನಿವೃತ್ತಿಯ ವಯಸ್ಸು ಸಮೀಪಿಸುತ್ತಿದ್ದಂತೆ, ಪ್ರಶ್ನೆಯೊಂದು ಅವರನ್ನು ಕಾಡತೊಡಗಿದೆ- ಇಷ್ಟು ವರ್ಷಗಳಲ್ಲಿ ನನಗಾಗಿ ನಾನು ಏನು ಮಾಡಿಕೊಂಡಿದ್ದೇನೆ, ನನ್ನೊಂದಿಗೆ ನಾನು ಎಷ್ಟು ಸಮಯ ಕಳೆದಿದ್ದೇನೆ? ಈ ಪ್ರಶ್ನೆ ಎದುರಾದಾಗೆಲ್ಲಾ ಅವರಿಗೆ ಪಶ್ಚಾತ್ತಾಪವಾಗುತ್ತದೆ. ಶಾಲಾ ಕಾಲೇಜು ದಿನಗಳಲ್ಲಿ ನೃತ್ಯ, ಹಾಡು, ನಾಟಕಗಳಲ್ಲಿ ಮುಂದಿರುತ್ತಿದ್ದ ತಾನು, ಮದುವೆ, ವೃತ್ತಿ, ಮಕ್ಕಳು ಅಂತ ತನ್ನತನವನ್ನೇ ಕಳೆದುಕೊಂಡೆನಾ? ಅಂತ ನಿಟ್ಟುಸಿರಾಗುತ್ತಾರೆ.
*ಸಿಂಚನಾ ಆಗ ತಾನೇ ಡಿಗ್ರಿ ಮುಗಿಸಿದ್ದಳು. ಕೆಲಸಕ್ಕೆ ಹೋಗಬೇಕೆನ್ನುವ ಹಂಬಲದಲ್ಲಿದ್ದಳು. ಆದರೆ, ಮನೆಯವರು “ಮದುವೆಯಾದ್ಮೇಲೆ ಕೆಲಸಕ್ಕೆ ಸೇರು’ ಎಂದುಬಿಟ್ಟರು. ಮನೆಯವರ ಮಾತನ್ನು ಪಾಲಿಸಿದಳು ಸಿಂಚನಾ. ಕಾಲಿಟ್ಟ ಮನೆ ಕೂಡು ಕುಟುಂಬ. ಮನೆಯ ಎಲ್ಲ ಜವಾಬ್ದಾರಿಗಳನ್ನು ಕಲಿತು, ನಿಭಾಯಿಸಿ, ಎಲ್ಲರ ಕಣ್ಮಣಿಯಾದಳು ಅವಳು. ಒಂದರ ಹಿಂದೊಂದರಂತೆ ಮಕ್ಕಳಾದವು. ಅವುಗಳ ಲಾಲನೆ ಪಾಲನೆಯಲ್ಲಿ ಸಮಯ ಕಳೆದು, ಕೆಲಸಕ್ಕೆ ಹೋಗಬೇಕೆನ್ನುವ ಆಸೆ ಕಮರಿ ಹೋಯ್ತು. ಕಾಲ ಮೀರಿದ ಮೇಲೆ ಚಿಂತಿಸಿ ಪ್ರಯೋಜನವೇನು?
ಈ ಎರಡು ಉದಾಹರಣೆಗಳನ್ನೇ ನೋಡಿ. ನೀವೂ ಇದೇ ತಪ್ಪು ಮಾಡುತ್ತಿದ್ದೀರ? ಉದ್ಯೋಗದಲ್ಲಿರಲಿ ಅಥವಾ ಗೃಹಿಣಿಯೇ ಆಗಿರಲಿ, ನಮ್ಮ ನಮ್ಮ ಹವ್ಯಾಸಗಳನ್ನು ಯಾವತ್ತೂ ಬಿಡಬಾರದು. “ಅಯ್ಯೋ, ಟೈಮೇ ಸಿಗೋಲ್ಲ. ಇವನ್ನೆಲ್ಲ ಎಲ್ಲಿಂದ ಮುಂದುವರಿಸೋದು’, “ಮುಂದೆ ಸಮಯ ಸಿಕ್ಕಾಗ ಇವನ್ನೆಲ್ಲ ಮಾಡಿದರಾಯ್ತು…’ ಅಂದುಕೊಂಡರೆ, ಮುಂದೊಮ್ಮೆ ಹವ್ಯಾಸಗಳೆಲ್ಲ ಧುತ್ತೆಂದು ಎದುರುಗೊಂಡು, ನಿನಗೆ ಸಮಯ ಸಿಕ್ಕಲೇ ಇಲ್ಲವಾ ಅಂತ ಅಣಕಿಸಬಹುದು. ಅದಕ್ಕೋಸ್ಕರ, ಎಷ್ಟೇ ಬ್ಯುಸಿ ಇದ್ದರೂ, ದಿನದ ಅಲ್ಪ ಸಮಯವನ್ನಾದರೂ ನಿಮಗೋಸ್ಕರ ಮೀಸಲಿಡಿ.
ಹವ್ಯಾಸಗಳಿರೋದು ಕೇವಲ ಟೈಮ್ ಪಾಸ್‌ಗಷ್ಟೇ ಅಲ್ಲ. ಉತ್ತಮ ಹವ್ಯಾಸಗಳು ನಮ್ಮ ದೇಹ-ಮನಸ್ಸನ್ನು ರಿಫ್ರೆಶ್ ಮಾಡುವ ಔಷಧಗಳು. ದಿನದ ಜಂಜಾಟಗಳಿಂದ ನಮಗೆ ಕೆಲಮಟ್ಟಿಗಾದರೂ ಮುಕ್ತಿ ನೀಡಬಲ್ಲ ಶಕ್ತಿಯುಳ್ಳವು. ಮನಸ್ಸಿಗೆ ಇಷ್ಟವಾಗುವ ಹವ್ಯಾಸ ಯಾವುದೇ ಆಗಿರಲಿ, ಅದನ್ನು ಮುಂದುವರಿಸಿಕೊಂಡು ಹೋಗೋಣ. ಇನ್ನೊಬ್ಬರಿಗಾಗಿ ಬದುಕುವ ನಡುವೆಯೇ ನಿಮ್ಮ ಬಗ್ಗೆಯೂ ನಿಮಗೆ ಪ್ರೀತಿ ಇರಲಿ.
ಸುಪ್ರೀತಾ ವೆಂಕಟ್