ಬೀದರ: ಜೀವಕ್ಕೆ ಮೂಲ ಆಧಾರವಾದ ನೀರನ್ನು ಉಳಿಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಡಬೇಕಿದೆ. ಸರ್ಕಾರ ಸ್ವಚ್ಛಮೇವ ಜಯತೆ, ಜಲಾಮೃತದಂತಹ ಕಾರ್ಯಕ್ರಮಗಳ ಮೂಲಕ ಸ್ವಚ್ಛತೆ ಹಾಗೂ ನೀರು ಸಂರಕ್ಷಣೆ ಕಾರ್ಯ ಕೈಗೊಳ್ಳುತ್ತಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಮಹಾಂತೇಶ ಬೀಳಗೆ ಹೇಳಿದರು.
ನಗರದಲ್ಲಿ ಜಿಲ್ಲಾ ಪಂಚಾಯತ, ಕೃಷಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಶಾಹೀನ್ ಶಿಕ್ಷಣ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು ಕುರಿತ ಜನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಿಸರ್ಗದ ಉಳಿವಿಗಾಗಿ ವಿದ್ಯಾರ್ಥಿಗಳು ಜನಜಾಗೃತಿ ಮೂಡಿಸುತ್ತಿರುವುದು ಪ್ರಶಂಸನೀಯವಾಗಿದೆ. ವಿದ್ಯಾರ್ಥಿಗಳು ಇದೇ ರೀತಿ ಪರಿಸರ ಉಳಿಸಿ ಬೆಳೆಸುವ ಸಂಕಲ್ಪ ಮಾಡಬೇಕು ಎಂದರು.
ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ| ಅಬ್ದುಲ್ ಖದೀರ್ ಮಾತನಾಡಿ, ಈಚಿನ ವರ್ಷಗಳಲ್ಲಿ ಮಳೆ ಕೊರತೆ ಹೆಚ್ಚಾಗಿದೆ. ಹೀಗಾಗಿ ಬಿದ್ದಷ್ಟೂ ಮಳೆ ನೀರನ್ನು ಸಂಗ್ರಹಿಸಿ, ಮರು ಬಳಕೆ ಮಾಡಬೇಕಾಗಿದೆ. ಮಳೆ ನೀರು ಕೊಯ್ಲು ಕುರಿತು ಜಾಗೃತಿ ಆಂದೋಲನದ ಮಾದರಿಯಲ್ಲಿ ನಡೆಯಬೇಕಾಗಿದೆ. ಸಾರ್ವಜನಿಕರು ಕಟ್ಟಡಗಳಿಗೆ ಮಳೆ ನೀರು ಕೊಯ್ಲು ವಿಧಾನ ಅಳವಡಿಸಬೇಕು. ನೀರನ್ನು ಹಿತ ಮಿತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ಪರಿಸರ ಸಮತೋಲನ ಕಾಪಾಡಲು ಮನೆ, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಬೇಕು. ನಿಸರ್ಗ ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು. ಕಾಲೇಜು ವಿದ್ಯಾರ್ಥಿಗಳು ಪಾಕೇಟ್ ಮನಿ ಬಳಸಿ ನಿಸರ್ಗ ಜಾಗೃತಿ ಅಭಿಯಾನ ನಡೆಸಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿಯೇ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಏಕಕಾಲಕ್ಕೆ ಮಾನವ ಸರಪಳಿ ರಚಿಸಿ ನೀರು ಮಿತ ಬಳಕೆ ಹಾಗೂ ಮಳೆ ನೀರು ಕೊಯ್ಲು ಜಾಗೃತಿ ಮೂಡಿಸಿದರು. ಅಂಬೇಡ್ಕರ್ ವೃತ್ತದಿಂದ ಶಹಾಗಂಜ್ ಕಮಾನ್, ಗವಾನ್ ಚೌಕ್, ಚೌಬಾರಾ, ನಯಿ ಕಮಾನ್, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಭಗತ್‌ಸಿಂಗ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮಾರ್ಗವಾಗಿ ಮತ್ತೆ ಅಂಬೇಡ್ಕರ್ ವೃತ್ತದ ವರೆಗೆ ಮಾನವ ಸರಪಳಿ ರಚಿಸಿದರು. ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ನಿರ್ದೇಶಕ ಮಹಮ್ಮದ್ ಆರಿಫ್, ಕಾರ್ಯಕ್ರಮದ ಉಸ್ತುವಾರಿ ಮಹಮ್ಮದ್ ಖುರ್ಷಿದ್, ವಿವಿಧ ಇಲಾಖೆಗಳ ಅಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.