ಗದಗ: ಹಸಿರೇ ಉಸಿರು ಎಂಬಂತೆ ಪರಿಸರ ಉಳಿದರೆ ನಾವು ಉಳಿಯುತ್ತೇವೆ. ಪರಿಸರ ಹಾಳಾದರೆ ಸಕಲ ಜೀವರಾಶಿಗಳೂ ಅಳಿಯುತ್ತವೆ. ಹೀಗಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಕುರಿತು ಕಾಳಜಿ ವಹಿಸಬೇಕು ಎಂದು ಜ| ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಕಪ್ಪತ್ತಗುಡ್ಡ ಹೋರಾಟ ಸಮಿತಿ, ಪರಿಸರ ಸಂರಕ್ಷಣಾ ಸಮಿತಿ, ಜನಸಂಗ್ರಾಮ ಪರಿಷತ್, ಸಮಾಜ ಪರಿವರ್ತನಾ ಸಮುದಾಯ, ಕಪ್ಪತ್ತಗುಡ್ಡ ಸಂರಕ್ಷಣಾ ವೇದಿಕೆ, ಉತ್ತರ ಕರ್ನಾಟಕ ಮಹಾಸಭಾ ಆಶ್ರಯದಲ್ಲಿ ನಗರದ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಕಪ್ಪತ್ತಗುಡ್ಡ ಉಳಿಸಿ, ಬೆಳೆಸಿ, ಬಳಸಿ ಅಭಿಯಾನದ ಅಂಗವಾಗಿ ಕಪ್ಪತ್ತಗುಡ್ಡ ಜಾಗೃತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜಕಾರಣಿಗಳು, ಬಂಡವಾಳ ಶಾಹಿಗಳು ಪರಿಸರ ಸಂಪತ್ತು ನಿರಂತರವಾಗಿ ಲೂಟಿ ಹೊಡೆದು, ತಮ್ಮ ಒಡಲು ತುಂಬಿಕೊಂಡಿದ್ದಾರೆ. ಆದ್ದರಿಂದ ನಾವು ಅಂತಹ ಬಂಡವಾಳ ಶಾಹಿಗಳಿಗೆ ಹೋರಾಟದ ಮೂಲಕ ಎಚ್ಚರಿಕೆ ನೀಡಿ, ಸಂಪತ್ಭರಿತ ಕಪ್ಪತ್ತಗುಡ್ಡವನ್ನು ಉಳಿಸಿಕೊಳ್ಳಬೇಕಿದೆ. ಕಪ್ಪತ್ತಗುಡ್ಡದಲ್ಲಿರುವ ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟು, ಇಲ್ಲಿ ನೆಲೆಯೂರಲು ಪ್ರಯತ್ನಿಸಿದ ಅನೇಕ ಕಂಪನಿಗಳನ್ನು ಈ ಭಾಗದ ಜನರು ಲಿಂ.ತೋಂಟದ ಶ್ರೀಗಳ ನೇತೃತ್ವದಲ್ಲಿ ಹೋರಾಟದ ಮೂಲಕ ಹಿಮ್ಮೆಟ್ಟಿಸಿರುವುದು ಶ್ಲಾಘನೀಯ.
ಕಪ್ಪತ್ತಗುಡ್ಡ ವನ್ಯ ಜೀವಿಧಾಮ ಆಗುವುದರಿಂದ ಈ ಭಾಗದ ಜನರು, ಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆಯಿಲ್ಲ. ಬದಲಾಗಿ ಅಲ್ಲಿನ ಪರಿಸರ, ಪ್ರಾಣಿಗಳಿಗೆ, ಸಸ್ಯಗಳ ಸುರಕ್ಷತೆ ಹೆಚ್ಚುತ್ತದೆ. ಪರಿಸರ ವಿನಾಶದಿಂದ ನಿರಂತರ ಬರಗಾಲ ಕಾಡುತ್ತಿದೆ. ಜಾಗತಿಕ ಮಟ್ಟದಲ್ಲಿ ತಾಪಮಾನ ಏರಿಕೆಯಾಗುತ್ತಿದೆ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಎಲ್ಲರೂ ಪರಿಸರ ರಕ್ಷಣೆಗೆ ಮುಂದಾಗಬೇಕು. ಸುರಿಯುವ ಅಲ್ಪಸ್ವಲ್ಪ ಮಳೆ ನೀರನ್ನೂ ಸದ್ಬಳಕೆ ಮಾಡಿ ಕೊಳ್ಳಬೇಕು. ಓಡುವ ನೀರನ್ನು ನಡೆಸಬೇಕು. ಹರಿಯುವ ನೀರನ್ನು ನಿಲ್ಲಿಸಬೇಕು. ನಿಂತ ನೀರನ್ನು ಇಂಗಿಸುವ ಕೆಲಸವಾಗಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದು ನೀರಿನ ಮಹತ್ವವನ್ನು ತಿಳಿಸಿದರು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಮಾತನಾಡಿ, ಮಾನವನ ದುರಾಸೆಯಿಂದ ಇಂದು ಕಪ್ಪತ್ತಗುಡ್ಡ ಅಳಿವಿನ ಅಂಚಿನಲ್ಲಿದೆ. ರಾಜ್ಯದಲ್ಲಿ ಈ ಹಿಂದೆ ಗಣಿ ಮಾಫಿಯಾವನ್ನು ಮಾತ್ರ ನೋಡಿದ್ದೆವು. ಈಗ ಅದಕ್ಕಿಂತ ಭಯಾನಕವಾದ ಮರಳು ಮಾಫಿಯಾ ತಲೆ ಎತ್ತಿದೆ. ತುಂಗಭದ್ರ ನದಿ ತಟದಲ್ಲಿ ಅವ್ಯಾಹತವಾಗಿ ಮರಳುಗಾರಿಕೆ ನಡೆಯುತ್ತಿದೆ. ಪರಿಸರ ರಕ್ಷಣೆ, ಹಸಿರು ಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಮುಂದಾಗಬೇಕು ಎಂದು ಸಲಹೆ ನೀಡಿದರು. ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ ಮಾತನಾಡಿದರು. ವೇದಿಕೆ ಮೇಲೆ ಎಸ್.ಬಸವರಾಜ, ರವಿಕಾಂತ ಅಂಗಡಿ, ಸುಧೀರ ಶೆಟ್ಟಿ, ಸಿ.ಎಸ್.ಅರಸನಾಳ, ಡಾ|ಕೊಟ್ರೇಶ, ರಾಚಪ್ಪ, ಚಂದ್ರಕಾಂತ ಚೌವ್ಹಾಣ ಉಪಸ್ಥಿತರಿದ್ದರು.