ನಾರಾಯಣ ರಾಯರ ಮಗ ಮಹಾಬಲ, ಮಹಾಬಲನ ಮಗ ಸೀತಾರಾಮ. ಸೀತಾರಾಮನ ಮಗ ಪ್ರವೀಣ. ಪ್ರವೀಣನ ಮಗ ಪ್ರಣವ. ಈ ಮಾಣಿಯ ಉಪನಯನಕ್ಕೆ ಹೋಗಲು ಮುಖ್ಯ ಕಾರಣ ಈ ಮನೆಗೆ ಸುಮಾರು ಎಪ್ಪತ್ತು ವರ್ಷಗಳ ನಂತರ ನನ್ನ ಭೇಟಿ. ಆಗಲೇ ಅಲ್ಲಿಯ ವೈಭವ ನೋಡಿ ನಾನು ಮೈಮರೆತಿದ್ದೆ. ದೊಡ್ಡ ಮನೆ. ಮನೆ ತುಂಬ ಹೆಂಗಸರು-ಮಕ್ಕಳು. ಹಟ್ಟಿ ತುಂಬ ದನಕರುಗಳು, ಎತ್ತುಕೋಣಗಳು. ಮನೆಯ ಸುತ್ತ ಹಾಡಿ, ಕಾಡು, ಗದ್ದೆಗಳು. ಎಲ್ಲರಿಗೂ ಕೈತುಂಬ ಕೆಲಸ. ಅಲ್ಲಿ ಕಾಫಿ ಲೋಟದಲ್ಲಿ ಕುಡಿಯುವುದಲ್ಲ, ಚೆಂಬಿನಲ್ಲಿ. ಒಂದು ಚೆಂಬು ಕಾಫಿ ಅಂದ್ರೆ ಈಗಿನ ಸಣ್ಣ ಲೋಟದಲ್ಲಿ ಏಳೆಂಟು ಲೋಟ. ಅವಲಕ್ಕಿ ಉಪ್ಪಿಟ್ಟಿನ ರಾಶಿ. ಆರಾಮವಾಗಿ ಅಷ್ಟನ್ನೂ ತಿಂದು, ಕುಡಿದು ಅರಗಿಸಿಕೊಳ್ಳುವ ಜಾಯಮಾನದವರು ಆ ಮನೆಯಲ್ಲಿದ್ದ ಜನಗಳು. ಅಷ್ಟೂ ದುಡಿಮೆ. ಒಂದು ನಿಮಿಷ ಸುಮ್ಮನೆ ಕುಳಿತುಕೊಳ್ಳುವವರಲ್ಲ. ಎರಡು-ಮೂರು ಸಣ್ಣಪುಟ್ಟ ಕೆರೆಗಳು, ಮೂರು-ನಾಲ್ಕು ಬಾವಿಗಳು, ಹರಿಯುವ ತೋಡು. ಸುತ್ತಮುತ್ತಲೂ ಹಸಿರು ವೃಕ್ಷರಾಶಿ. ಅದು ಆಗಿನ ಚಿತ್ರಣ. ಈಗಿನ ಚಿತ್ರಣವೂ ಅದೇ! ಹಟ್ಟಿಯಲ್ಲಿ ಎತ್ತುಕೋಣಗಳಿಲ್ಲ. ದನಕರುಗಳು ಮಾತ್ರ. ಹಳೆಮನೆಗೆ ಹೊಸ ಅವತಾರ. ಹಿಂದಿಗಿಂತಲೂ ಸ್ವಲ್ಪ ದೊಡ್ಡದೇ! ಕೂಡುಕುಟುಂಬ. ಎಲ್ಲರೂ ಒಟ್ಟಾದರೆ ನೂರಿಪ್ಪತ್ತು ಜನ. ಅಷ್ಟು ಜನರೂ ಉಳಿದುಕೊಳ್ಳಬಹುದಾದ ಮನೆ. ಕರೆಂಟು, ಪಂಪ್‌ಸೆಟ್, ರೇಡಿಯೋ, ಟಿವಿ ಎಲ್ಲ ಆಧುನಿಕ ಸೌಲಭ್ಯಗಳೂ ಅಲ್ಲಿ.
“ಉಪನಯನಕ್ಕೆ ಎಷ್ಟು ಜನ ಆಗಬಹುದು?’- ನನ್ನ ಪ್ರಶ್ನೆ.
“ಸುಮಾರು ಒಂದು ಸಾವಿರದಿಂದ ಒಂದೂಕಾಲು ಸಾವಿರ’ ಸೀತಾರಾಮನ ಉತ್ತರ.
ಬಂದವರಿಗೆಲ್ಲ ಕಬ್ಬಿನ ಹಾಲು. ಎಷ್ಟು ಕುಡಿಯಲು ಸಾಧ್ಯವೋ ಅಷ್ಟು. ಊಟ ಒಂದೇ ಪಂಕ್ತಿಯಲ್ಲಲ್ಲ. ಮೂರು ಪಂಕ್ತಿ. ಆಮೇಲೂ ಜನ ಇದ್ದೇ ಇದ್ದರು. ಇಷ್ಟು ಜನರಿಗೆ ನೀರಿನ ವ್ಯವಸ್ಥೆ ಹೇಗೆ?
ನಮಗೆ ಅದೊಂದು ಸಮಸ್ಯೆಯೇ ಅಲ್ಲ. ನಮ್ಮ ಎಲ್ಲ ಕೆರೆಗಳೂ, ಬಾವಿಗಳೂ ಬತ್ತುವುದಂತಿಲ್ಲ. ಅಜ್ಜನ ಕಾಲದಿಂದಲೂ ಒಂದು ಮರವನ್ನು ನಾವು ಕಡಿದಿಲ್ಲ. ಇನ್ನೂ ಹೆಚ್ಚು ಮರಗಳನ್ನು ಬೆಳೆಸಿದ್ದೇವೆ. ಮನೆಯ ಹಳೆಯ ತಲೆಗಳು ಸತ್ತಾಗ ಒಂದು ನಾಲ್ಕೈದು ಮಾವಿನ ಮರಗಳನ್ನು ಕಡಿದಿರಬಹುದು- ಹೆಣ ಸುಡಲು. ಆಮೇಲೆ ಎಲ್ಲ ಮರಗಿಡಗಳನ್ನು ಮಕ್ಕಳಂತೆ ಸಾಕಿದ್ದೇವೆ- ನೀರನ್ನು ಯಾವತ್ತೂ ಪೋಲು ಮಾಡಿಲ್ಲ. ಎಷ್ಟು ಬೇಕೋ ಅಷ್ಟನ್ನೇ ಉಪಯೋಗಿಸುತ್ತೇವೆ. ನಮಗೆ ನೀರಿನ ಸಮಸ್ಯೆ ಎಂಬುದು ಈವರೆಗೆ ಬಂದಿಲ್ಲ. ನೀರು ಧಾರಾಳವಾಗಿದೆ.
ಈ ಬೇಸಿಗೆಯಲ್ಲಿ ಯಾವ ಪೇಪರ್ ನೋಡಿದರೂ ಅದರಲ್ಲಿ ನೀರಿನ ಸುದ್ದಿಯೇ ಸುದ್ದಿ. ಕೆರೆಬಾವಿ ಎಲ್ಲ ಬತ್ತಿದೆ. ಹೊಳೆಯಲ್ಲಿ ಹೂಳು ತುಂಬಿದೆ. ನೀರಿನ ಹರಿವೇ ಇಲ್ಲ. ಎಲ್ಲರ ಮನೆಯಲ್ಲೂ ನೀರಿನ ಬಗ್ಗೆಯೇ ಮಾತುಕತೆ. ಮಳೆ ಯಾವಾಗ ಬಂದೀತಪ್ಪಾ ಎಂದು ಆಕಾಶ ನೋಡುವವರೇ ಜಾಸ್ತಿ. ಬೊಂಡಾಭಿಷೇಕ, ವಿಶೇಷ ಪೂಜೆ. ಆ ದೇವರಾದರೂ ಏನು ಮಾಡಿಯಾನು. ನೀರನ್ನು ಸಿಕ್ಕಾಪಟ್ಟೆ ಉಪಯೋಗಿಸಿ, ಹಾಳು ಮಾಡಿ, ಈಗ ನೀರಿಲ್ಲ ಎಂದರೆ ಏನು ಮಾಡುವುದು? ಇದ್ದ ನೀರನ್ನೇ ಜಾಗ್ರತೆಯಾಗಿ ಉಪಯೋಗಿಸಿದರೆ ಆಗದೇ? ಇವರಿಗೆಲ್ಲ ಬುದ್ಧಿ ಬರುವುದು ಯಾವಾಗ? ಹೊಳೆ ತಿರುಗಿಸುತ್ತೇವೆ, ಕೆರೆ ತೋಡುತ್ತೇವೆ, ಬಾವಿ ತೋಡಲು ಸಾಲ ಕೊಡುತ್ತೇವೆ, ಲಾರಿಯಲ್ಲಿ ನೀರು ಸಪ್ಲೆ„ ಮಾಡುತ್ತೇವೆ. ಒಟ್ಟಾರೆ ನಿಮ್ಮನ್ನು ನೀರಿನಲ್ಲಿ ಮುಳುಗಿಸುತ್ತೇವೆ ಎಂಬ ಆಶ್ವಾಸನೆ ಬರುತ್ತಲೇ ಇರುತ್ತದೆ ನಮ್ಮ ನಾಯಕರಿಂದ. ನಮಗೇ ಇದ್ದ ನೀರನ್ನು ಸರಿಯಾಗಿ ಉಪಯೋಗಿಸಲು ಬಾರದಿದ್ದರೆ ಏನು ಮಾಡಿ ಏನು ಪ್ರಯೋಜನ?
ನನಗೊಂದು ಚಹಾ ಕುಡಿಯಬೇಕಿತ್ತು. ಹೊಟೇಲಿಗೆ ಹೋದೆ. ಒಂದು ದೊಡ್ಡ ಗ್ಲಾಸಿನಲ್ಲಿ ನೀರು ತಂದು ನನ್ನ ಮುಂದಿಟ್ಟು “”ಏನು ಬೇಕು?” ಎಂದ ಮಾಣಿ. “”ನನಗೆ ಈ ನೀರು ಬೇಡ. ಇದನ್ನು ಒಳಗೇ ಇಡು. ನೀರು ಬೇಕು ಎಂದವರಿಗೆ ಕೊಡು” ಎಂದೆ.
ನೀರು ತೆಗೆದುಕೊಂಡು ಹೋಗಿ ಒಂದು ಚಾ ತಂದುಕೊಟ್ಟ. ಬಿಲ್ಲೂ ಕೊಟ್ಟ. ಅದು ಊಟದ ಸಮಯ. ಪಕ್ಕದಲ್ಲೊಬ್ಬರು ಪ್ಲೇಟ್ ಊಟ ತರಿಸಿಕೊಂಡು ಊಟ ಮಾಡುತ್ತಿದ್ದರು. ನೋಡಿದೆ. ದೊಡ್ಡ ಸ್ಟೀಲ್ ಬಟ್ಟಲು. ಅದರಲ್ಲಿ ಸುತ್ತ ಒಂಬತ್ತು ತಟ್ಟೆಗಳಲ್ಲಿ ಸಾರು, ಹುಳಿ, ಮೊಸರು- ಇತ್ಯಾದಿ ಇತ್ಯಾದಿ. ಒಂದು ಚಮಚ. ನೀರಿನ ಒಂದು ಲೋಟ. ಒಂದು ಊಟಕ್ಕೆ ಇಷ್ಟು ತಟ್ಟೆ , ಬಟ್ಟಲುಗಳು! ಇಷ್ಟನ್ನು ತೊಳೆಯಲು ಎಷ್ಟು ನೀರು ಬೇಕು? ಬಾಳೆಎಲೆ ಹಾಕಿ ಊಟ ಬಡಿಸಿದರೆ ಈ ತಟ್ಟೆ-ಬಟ್ಟಲುಗಳನ್ನು ತೊಳೆಯುವ ಕೆಲಸ ಇರೋಲ್ಲ. ಅಷ್ಟು ನೀರನ್ನು ಉಳಿಸಬಹುದು ಅಲ್ಲವೇ? “”ನಮಗೆ ನೀರಿನ ಸಮಸ್ಯೆ ಇಲ್ಲ. ಈ ತಟ್ಟೆ ಬಟ್ಟಲುಗಳನ್ನು ತೊಳೆ ಯಲು ನಾವು ನೀರು ಉಪಯೋಗಿಸೋಲ್ಲ. ಒದ್ದೆ ಬಟ್ಟೆಯಲ್ಲಿ ಅವನ್ನು ಒರೆಸಿ ಇಡುತ್ತೇವೆ”- ಒಂದು ಮೂಲೆಯಿಂದ ಕ್ಷೀಣವಾದ ಸ್ವರವೊಂದು ಕೇಳಿಬಂತು.
ಕು. ಗೋ.