ರಿಷಭ್ ಶೆಟ್ಟಿ ನಿರ್ದೇಶನದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು -ಕೊಡುಗೆ ರಾಮಣ್ಣ ರೈ’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಹಿಟ್ ಆಗಿದ್ದು, ಅದೇ ಖುಷಿಯಲ್ಲಿ ಚಿತ್ರತಂಡ ತೇಲಾಡುತ್ತಿದೆ.
ಜೊತೆಗೆ ಬಿಡುಗಡೆಯಾಗುತ್ತಿರುವ ಟೆನ್ಶನ್. ಸ್ವಲ್ಪ ಖುಷಿ, ಸ್ವಲ್ಪ ಟೆನ್ಶನ್‌ನೊಂದಿಗೆ ಚಿತ್ರತಂಡದವರು ಮಾಧ್ಯಮದವರಿಗೆ ಮುಖಾಮುಖೀಯಾಯಿತು.
ಅಂದು ಅನಂತ್ ನಾಗ್, ಪ್ರಮೋದ್ ಶೆಟ್ಟಿ, ನಿರ್ದೇಶಕ ರಿಷಭ್ ಶೆಟ್ಟಿ, ಸಂಭಾಷಣೆ ಬರೆದಿರುವ ರಾಜ್ ಬಿ ಶೆಟ್ಟಿ, ಸಂಗೀತ ಸಂಯೋಜಿಸಿರುವ ವಾಸುಕಿ ವೈಭವ್ ಮುಂತಾದವರು ಚಿತ್ರದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅನಂತ್ ನಾಗ್ ಅವರು ಮಾತನಾಡಿ, “ಈ ಚಿತ್ರದಲ್ಲಿ ಕನ್ನಡದ ಮೇಲಿನ ಪ್ರೀತಿ, ಕಳಕಳಿ ಮತ್ತು ಅಭಿಮಾನ ಇದೆ. ಈ ಚಿತ್ರವು ಗಂಭೀರವಾದ ವಿಷಯವೊಂದನ್ನು ಚರ್ಚಿಸುತ್ತದೆ. ಅದರ ಜೊತೆಗೆ ಹಾಸ್ಯಮಯ ಸನ್ನಿವೇಶಗಳು ಈ ಚಿತ್ರದಲ್ಲಿವೆ. ರಿಷಭ್ ಸಾಕಷ್ಟು ಪರಿಶ್ರಮ ಹಾಕಿ ಈ ಚಿತ್ರವನ್ನು ಮಾಡಿದ್ದಾರೆ. ಇನ್ನು ಈ ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿದೆ’ಎಂದು ಅನಂತ್ ನಾಗ್ ಹೇಳಿದರು.
ಕೊಡಗಿನಲ್ಲಿ ಪ್ರವಾಹವಾಗುತ್ತಿರುವ ಈ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುತ್ತಿರುವುದು ಮನಸ್ಸಿಗೆ ಕಷ್ಟವಾಗುತ್ತಿದ್ದರೂ,
ಬಿಡುಗಡೆ ಮಾಡುವ ಅನಿವಾರ್ಯತೆ ಇದೆ ಎಂದರು. ಅದರ ಜೊತೆಗೆ ನಿರಾಶ್ರಿತರಿಗೆ ಸಾಧ್ಯ ವಾದಷ್ಟು ಸಹಾಯ
ಮಾಡುವುದಾಗಿಯೂ ಹೇಳಿಕೊಂಡರು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಮುಂತಾದ ಕಡೆ 85ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ.
ಈ ಚಿತ್ರದ ಹಿನ್ನೆಲೆ ಮತ್ತು ಪರಿಸರ ವಿಭಿನ್ನವಾಗಿದೆ’ ಎಂದು ಹೇಳಿಕೊಂಡರು. ವಾಸುಕಿ ವೈಭವ್‌ಗೆ ತಾನು ಸಂಯೋಜಿಸಿದ ಹಾಡುಗಳು ಯಶಸ್ವಿಯಾಗಿರುವುದರ ಬಗ್ಗೆ ಬಹಳ ಖುಷಿ ಇದೆ. ಇನ್ನು ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡುವ ಅವರು, ಕ್ಲೈಮ್ಯಾಕ್ಸ್ ಬಗ್ಗೆ ಥ್ರಿಲ್ ಆಗಿದ್ದಾರೆ. ಇನ್ನು ರಾಜ್ ಬಿ. ಶೆಟ್ಟಿ ಮಾತನಾಡಿ ಕನ್ನಡ ಭಾಷೆ ಯಾಕೆ ಮುಖ್ಯ ಎಂಬುದನ್ನು ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ ಎಂದು ಹೇಳಿದರು.