Advertisement

ಸಾರಿಗೆ ಬಸ್‌ ಬಳಸಿ ಪರಿಸರ ಉಳಿಸಿ: ವಿನಯ

11:53 AM Jul 21, 2017 | |

ಧಾರವಾಡ: ಸಾರ್ವಜನಿಕರು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಹೆಚ್ಚು ಪ್ರಯಾಣಿಸುವ ಮೂಲಕ ಸಂಚಾರ ದಟ್ಟಣೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಿಸಲು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ಇಲ್ಲಿನ ನಗರ ಸಾರಿಗೆ ನಿಲ್ದಾಣ (ಸಿಬಿಟಿ)ದಲ್ಲಿ ವಾಕರಸಾಸಂ ಹಮ್ಮಿಕೊಂಡಿದ್ದ ಬಸ್‌ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಪ್ರತಿ ತಿಂಗಳು 20ನೇ ತಾರೀಖೀನಂದು ಬಸ್‌ ದಿನ ಆಚರಿಸಲು ಮುಂದಾಗಿರುವ ಸಂಸ್ಥೆಯ ಕ್ರಮ ಸ್ವಾಗತಾರ್ಹ. ವಾಕರಸಾಸಂ ಪ್ರತಿದಿನ 20 ಲಕ್ಷ ರೂ.ನಷ್ಟ ಅನುಭವಿಸುತ್ತಿದೆ. ಇದನ್ನು ತಪ್ಪಿಸಲು ಸಾರ್ವಜನಿಕರು ಅಧಿ ಕ ಪ್ರಮಾಣದಲ್ಲಿ ಸಾರಿಗೆ ಸಂಸ್ಥೆಯ ವಾಹನಗಳನ್ನು ಬಳಸಲು ಮುಂದಾಗಬೇಕು.

ಸುರಕ್ಷತೆ ಮತ್ತು ಸಂಚಾರ ದಟ್ಟಣೆ ನಿಯಂತ್ರಣಕ್ಕೂ ಇದು ಸಹಕಾರಿಯಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಅನಗತ್ಯ ದ್ವಿಚಕ್ರ ವಾಹನಗಳನ್ನು ಕೊಡಿಸುವ ಪ್ರವೃತ್ತಿ ಕೈಬಿಡಬೇಕು ಎಂದು ಮನವಿ ಮಾಡಿದರು. ಹಿರಿಯ ಸಾಹಿತಿ ಡಾ| ಗಿರಡ್ಡಿ ಗೋವಿಂದರಾಜ ಮಾತನಾಡಿ, ಧಾರವಾಡ ನಗರದ ಎಲ್ಲ ಬಡಾವಣೆಗಳಿಗೂ ಸಂಪರ್ಕ ಕಲ್ಪಿಸುವ ಒಂದು ಉಂಗುರ ಮಾದರಿ ಸಂಚಾರ (ರಿಂಗ್‌) ಬಸ್‌ ಆರಂಭಿಸಬೇಕು ಎಂದು ಸಲಹೆ ನೀಡಿದರು.

ವಾಕರಸಾಸಂ ಅಧ್ಯಕ್ಷ ಸದಾನಂದ ಡಂಗನವರ್‌ ಮಾತನಾಡಿ, ಪರಿಸರ ಸಮತೋಲನ ಇಂದಿನ ಅವಶ್ಯಕತೆಯಾಗಿದೆ. ಶುದ್ಧ ಪರಿಸರ ನಿರ್ವಹಣೆ ಹಾಗೂ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಖಾಸಗಿ ವಾಹನಗಳ ಬಳಕೆ ಪ್ರಮಾಣ ಇಳಿಮುಖವಾಗಬೇಕಿದೆ. 

ಈ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸಲು ಸಂಸ್ಥೆ ಪ್ರತಿ ತಿಂಗಳು 20ನೇ ತಾರೀಖೀನಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಬಸ್‌ ದಿನ ಚರಿಸುವ ನಿರ್ಣಯ ಕೈಗೊಂಡಿದೆ ಎಂದರು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬೈಲೂರಿನ ನಿಜಗುಣಾನಂದ ಸ್ವಾಮೀಜಿ, ಬಸವರಾಜ ದೇವರು, ಫಾದರ್‌ ಪ್ರಸಾದ್‌ ಡಿಸೋಜ ಸಾನ್ನಿಧ್ಯ ವಹಿಸಿದ್ದರು.

Advertisement

ನಾಡೋಜ ಡಾ| ಪಾಟೀಲ ಪುಟ್ಟಪ್ಪ, ಸಾಹಿತಿ ಡಾ| ಗುರುಲಿಂಗ ಕಾಪಸೆ, ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಆರ್‌.ಡಿ.ಹುದ್ದಾರ್‌, ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ಬಿ.ನಾಯಕ, ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ. ಹಿರೇಮಠ, ಮುಖಂಡರಾದ ದಾನಪ್ಪ ಕಬ್ಬೇರ, ಇಸ್ಮಾಯಿಲ್‌ ತಮಟಗಾರ, ಮನೋಜ ಕರ್ಜಗಿ ಇದ್ದರು. ಕೊನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲ ಗಣ್ಯರು ಸಾರಿಗೆ ಸಂಸ್ಥೆ ಬಸ್‌ನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿದರು.  

Advertisement

Udayavani is now on Telegram. Click here to join our channel and stay updated with the latest news.

Next