Advertisement

ಕಮಿಷನ್‌-ಲೂಟಿಯಿಂದ ರಾಜ್ಯ ಉಳಿಸಿ: ಸೋನಿಯಾ ಕರೆ

11:49 PM May 06, 2023 | Team Udayavani |

ಹುಬ್ಬಳ್ಳಿ: “ಬಿಜೆಪಿ ಸರಕಾರದ ಕಮಿಷನ್‌, ಲೂಟಿಯಿಂದ ಕರ್ನಾಟಕ ವನ್ನು ಉಳಿಸಬೇಕಾಗಿದೆ. ರಾಜ್ಯದ ಅಸ್ಮಿತೆಗೆ ಧಕ್ಕೆ ತರುವ, ಪ್ರಧಾನಿ ನರೇಂದ್ರ ಮೋದಿ ಆಶೀರ್ವಾದ ಇಲ್ಲವೆಂದರೆ ನೋಡಿ ಎಂದು ಕನ್ನಡಿಗರಿಗೆ ಧಮಕಿ ಹಾಕುವ ಬಿಜೆಪಿಯನ್ನು ಕಿತ್ತೂಗೆಯ ಬೇಕು” ಎಂದು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ನೀಡಿದರು.

Advertisement

ನಗರದಲ್ಲಿ ಶನಿವಾರ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ-ಕನ್ನಡಿಗರ ಪ್ರೀತಿ ಯನ್ನು ನಾನೆಂದೂ ಮರೆಯಲಾರೆ. ಈ ಹಿಂದೆ ಲೋಕಸಭೆ ಚುನಾವಣೆಗೆ ಬಳ್ಳಾರಿಯಿಂದ ಸ್ಪರ್ಧಿಸಿದಾಗ ಇಲ್ಲಿನ ಜನತೆ ತೋರಿದ ಪ್ರೀತಿ, ನನ್ನನ್ನು ಗೆಲ್ಲಿ ಸಿದ್ದು ಅವಿಸ್ಮರಣೀಯ ಎಂದರು.

ಅಸ್ಮಿತೆಗೆ ಸವಾಲು

ರಾಜ್ಯದಲ್ಲಿ ಜನವಿರೋಧಿ, ಅಹಂ ಕಾರದಿಂದ ವರ್ತಿಸುವ, ಕಮಿಷನ್‌ ದಂಧೆಯಲ್ಲಿ ತೊಡಗಿರುವ ಭ್ರಷ್ಟ ಬಿಜೆಪಿ ಸರಕಾರವಿದೆ. ಲೂಟಿ ಹೊಡೆಯುವುದೇ ಅವರ ಕಾಯಕ. “ಕರ್ನಾಟಕಕ್ಕೆ ಮೋದಿ ಅವರ ಆಶೀರ್ವಾದ ಇಲ್ಲವಾದರೆ ಸೌಲಭ್ಯಗಳು ಸಿಗದು ನೋಡಿ” ಎಂದು ಬಿಜೆಪಿ ನಾಯಕರು ಧಮಕಿ ಹಾಕುತ್ತಿರುವುದು, ಹೆದರಿಸುತ್ತಿರುವುದು ಕನ್ನಡಿಗರ ಅಸ್ಮಿತೆಗೆ ಸವಾಲು ಹಾಕುವಂತಿದೆ. ಕುವೆಂಪು ನೆಲಕ್ಕೆ, ಪುರಾತನವಾದ ಇಲ್ಲಿನ ಪರಂಪರೆಗೆ ಬಿಜೆಪಿ ಅಪಮಾನ ಮಾಡುತ್ತಿದೆ. ಕನ್ನಡಿಗರು ಅಸಹಾಯಕ ರಲ್ಲ, ಹೆದರುವವರೂ ಅಲ್ಲ ಎಂದರು.

ಕರ್ನಾಟಕ ಮಾಹಿತಿ-ತಂತ್ರಜ್ಞಾನ, ಹೈನೋದ್ಯಮ, ಕೃಷಿ, ಪರಂಪರೆಗೆ ಹೆಸರಾಗಿದೆ. ಇಲ್ಲಿನ ಗೌರವ ಕಾಪಾಡುವ ಕೆಲಸ ಆಗಬೇಕಾಗಿದೆ. “ನಂದಿನಿ’ ಕರ್ನಾ ಟಕ-ಕನ್ನಡಿಗರ ಅಸ್ಮಿತೆಯಾಗಿದ್ದು, ಅದನ್ನೇ ಕಣ್ಮರೆಯಾಗಿಸಲು ಬಿಜೆಪಿ ನಾಯಕರು ಹುನ್ನಾರ ನಡೆಸಿದ್ದಾರೆ ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದರು.

Advertisement

ಹಿಂದೆಂದೂ ನೋಡಿಲ್ಲ

ದೇಶ-ಕರ್ನಾಟಕದಲ್ಲಿ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಧಕ್ಕೆಯುಂಟಾಗುತ್ತಿದೆ. ಬಿಜೆಪಿ ನಾಯಕರು ಪ್ರಜಾಪ್ರಭುತ್ವ, ಸಾಂವಿಧಾನಿಕ ಸಂಸ್ಥೆಗಳು ತಮ್ಮ ಜೇಬಿನಲ್ಲಿವೆ ಎಂಬಂತೆ ವರ್ತಿಸುತ್ತಿದ್ದಾರೆ. ಭಾರತದ ಇತಿಹಾಸದಲ್ಲಿಯೇ ಇಂತಹ ಕೇಂದ್ರ ಸರಕಾರವನ್ನು ನೋಡಿರಲಿಲ್ಲ. ರಾಹುಲ್‌ ಗಾಂಧಿಯವರು ನಡೆಸಿದ ಭಾರತ್‌ ಜೋಡೋ ಯಾತ್ರೆಯಿಂದ ಬಿಜೆಪಿ ದಿಗಿಲುಗೊಂಡಂತಿದೆ ಎಂದು ಸೋನಿಯಾ ಹೇಳಿದರು.

ಕಳ್ಳತನದಲ್ಲೇ ದಾಖಲೆ ಮಾಡಿದ ಬಿಜೆಪಿ: ರಾಹುಲ್‌

ಬೆಳಗಾವಿ: ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಕನಿಷ್ಠ 150 ಸ್ಥಾನಗ ಳನ್ನು ಗೆಲ್ಲಿಸಿ ಕೊಡದಿದ್ದರೆ ಮತ್ತೆ ಕಳ್ಳರು ನಮ್ಮ ಶಾಸಕರನ್ನು ಕದ್ದು ಸರಕಾರ ರಚಿಸುತ್ತಾರೆ. ಆಗ ಮತ್ತೆ ರಾಜ್ಯದಲ್ಲಿ ಕಳ್ಳರ ಸರಕಾರ ಬರ ಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದರು.

ಯಮಕನಮರಡಿ ಕ್ಷೇತ್ರದಲ್ಲಿ ಶನಿವಾರ ಕಾಂಗ್ರೆಸ್‌ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ವೇಳೆ ಮತ್ತೆ ಕಳ್ಳರ ಸರಕಾರ ಬಂದರೆ ಬಡ- ಮಧ್ಯಮ ವರ್ಗದ ಜನರ ಲೂಟಿ ಆಗಲಿದೆ. ಈ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು. ಬಿಜೆಪಿ ಕಳ್ಳತನದಲ್ಲಿ ದಾಖಲೆಯನ್ನೇ ಮಾಡಿದೆ. ಇಂತಹ ಕಳ್ಳರ ಸರಕಾರದಿಂದ ರಾಜ್ಯದಲ್ಲಿ ಲೂಟಿಯಾಗದೆ ಮತ್ತೇನು ಸಾಧ್ಯವಿದೆ ಎಂದು ಛೇಡಿಸಿದರು. ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ ರಾಹುಲ್‌, ಕರ್ನಾಟಕದಲ್ಲಿ ಮೇಲಿಂದ ಮೇಲೆ ಪ್ರವಾಸ ಮಾಡುತ್ತಿರುವ ಮೋದಿ ಅವರು ಇದುವರೆಗೆ ಎಲ್ಲಿಯೂ ಮುಂದಿನ 5 ವರ್ಷಗಳಲ್ಲಿ ಕರ್ನಾಟಕ ದಲ್ಲಿ ಏನು ಮಾಡುತ್ತೇವೆ ಎಂಬುದನ್ನು ಹೇಳಿಲ್ಲ ಎಂದರು.

ರಾಹುಲ್‌-ಪ್ರಿಯಾಂಕಾ ಜಂಟಿ ಪ್ರಚಾರ ಇಂದು

ಬೆಂಗಳೂರು: ಕಾಂಗ್ರೆಸ್‌ ನಾಯಕರಾದ ರಾಹುಲ್‌ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ರಾಜಧಾನಿ ಬೆಂಗಳೂರಿನ ಹಲವು ಕ್ಷೇತ್ರಗಳಲ್ಲಿ ರವಿವಾರ ರೋಡ್‌ ಶೋ ಹಾಗೂ ಪ್ರಚಾರ ಸಭೆಯಲ್ಲಿ ಭಾಗಿಯಾಗಿ, ಶಿವಾಜಿನಗರದಲ್ಲಿ ಜಂಟಿ ಪ್ರಚಾರ ನಡೆಸಲಿದ್ದಾರೆ. ರಾಹುಲ್‌ ಅವರು ಆನೇಕಲ್‌ ಪ್ರಚಾರ ಸಭೆ, ಬಳಿಕ ಪುಲಕೇಶಿನಗರದಲ್ಲಿ ರೋಡ್‌ ಶೋನಲ್ಲಿ ಭಾಗವಹಿಸಲಿದ್ದಾರೆ. ಪ್ರಿಯಾಂಕಾ ಮೂಲ್ಕಿಯಲ್ಲಿ ಪ್ರಚಾರದಲ್ಲಿ ಪಾಲ್ಗೊಂಡ ಅನಂತರ ಬೆಂಗಳೂರಿನ ಮಹದೇವಪುರದಲ್ಲಿ ರೋಡ್‌ ಶೋ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next