Advertisement

ಪುರಾತನ ಈಜುಕೊಳದ ಜಾಗ ಉಳಿಸಿ

03:21 PM Feb 28, 2021 | Team Udayavani |

ಮಧುಗಿರಿ: ಸ್ವತಂತ್ರ ಪೂರ್ವದಲ್ಲಿ ಗ್ರಾಮೀಣ ಕ್ರೀಡಾ ಉತ್ತೇಜನಕ್ಕಾಗಿ ನಿರ್ಮಿಸಿದ್ದ ಪುರಾತನ ಈಜುಕೊಳ,ಹಿಂದಿನ ಪುರಸಭೆಯಿಂದ ನಾಶವಾಗಿದೆ. ಆ ಜಾಗದಲ್ಲಿ ಮತ್ತೆ ಈಜುಕೊಳ ನಿರ್ಮಿಸದೆ ಪುರಸಭೆ ಕೋಟ್ಯಂತರ ಬೆಲೆ ಬಾಳುವ ಭೂಮಿಯನ್ನು ನಿರ್ಲಕ್ಷಿಸಿದೆ. ಇದರಿಂದ ಈಜುಕೊಳದ ಜಾಗ ಪುರಸಭೆ ಕೈ ತಪ್ಪಲು ಷಡ್ಯಂತ್ರ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ.

Advertisement

ಮಾಸ್ತಿ ವೆಂಕಟೇಶ ಅಯ್ನಾಂಗಾರ್‌ 1939ರಲ್ಲಿ ಮತ್ತೆ ತುಮಕೂರಿಗೆ ಜಿಲ್ಲಾಧಿಕಾರಿಯಾಗಿ ಬಂದ ನಂತರ, ಮಧುಗಿರಿಯ ನಂಟು ಉಳಿಸಲು ಪಟ್ಟಣದ ಆರಂಭದಲ್ಲೇ “ಪಬ್ಲಿಕ್‌ ಸ್ವಿಮ್ಮಿಂಗ್‌ ಪೂಲ್‌’ ಎಂದು ಸಾರ್ವಜನಿಕರ ಬಳಕೆಗೆ ಈಜುಕೊಳ ಸ್ಥಾಪಿಸಿ, ಮಧುಗಿರಿ ಇತಿಹಾಸಕ್ಕೆ ಸಾಕ್ಷಿ ನೀಡಿದರು. ಆದರೆ, ಕಳೆದ ಐದು ವರ್ಷ ಹಿಂದಿನ ಪುರಸಭೆ ಆಡಳಿತದಿಂದ ಪಾರಂಪಾರಿಕ ಪಟ್ಟಿಯಲ್ಲಿದ್ದ ಈಜುಕೊಳವನ್ನು ನಾಶಗೊಳಿಸಲು ಅಥವಾಪುನರ್‌ ನಿರ್ಮಿಸಲು, ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯದೆ ನೆಲಸಮಗೊಳಿಸಲಾಗಿದೆ.

ಶ್ಯಾನುಭೋಗ ಕುಟುಂಬದಿಂದ ಭೂಮಿ ದಾನ: ಮೈಸೂರು ಮಹಾರಾಜರ ಕಾಲದಲ್ಲಿ ಈ ಜಾಗವನ್ನು ಹಿಂದೆ ಪಟ್ಟಣದ ಶ್ಯಾನುಭೋಗ ಎಂ.ಪಿ.ಶಿವರಾಂ, ಎಂ.ಪಿ.ಸತೀಶ್‌, ಎಂ.ಪಿ.ಮಂಜುಳಾ ಕುಟುಂಬದ ಹಿರಿಯರಿಂದ ದಾನ ಪಡೆದು 1939ರಲ್ಲಿ ನಿರ್ಮಿಸಿದ್ದರು. ಅವರು ದಾನ ನೀಡುವಾಗ ಈ ಜಾಗದಲ್ಲಿ ಈಜುಕೊಳ ನಿರ್ಮಿಸಲು ಮಾತ್ರ ಒಪ್ಪಿದ್ದು, ಬೇರೆ ಉದ್ದೇಶಕ್ಕಾಗಿ ಬಳಸುವಂತಿಲ್ಲ. ಬಳಸಿದರೆ ಮತ್ತೆ ಆ ಜಾಗ ಕುಟುಂಬಕ್ಕೆ ವಾಪಸ್‌ ನೀಡುವಂತೆ ಬರೆದುಕೊಟ್ಟಿದ್ದರು ಎನ್ನಲಾಗಿದೆ. ಆದರೆ, ಹಿಂದಿನ ಪುರಸಭೆ ಆಡಳಿತ ಈಜುಕೊಳ ನಿರ್ಮಿಸದೆ, ವೃಥಾ ಕಾಲಹರಣ ನಡೆಸಿ ಮೂಲ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ಪುರಸಭೆಗೆ ಆಸ್ತಿ ತಪ್ಪಿಸುವ ಹುನ್ನಾರ ನಡೆಸಲಾಗಿತ್ತು ಎನ್ನಲಾಗಿದೆ.

ವಾಣಿಜ್ಯ ಮಳಿಗೆಗೆ ಸಿದ್ಧತೆ: ಕಳೆದ ಅವಧಿಯಲ್ಲಿ ಈಜುಕೊಳ ನೆಲಸಮಗೊಳಿಸಿದ ಪುರಸಭೆ, ಇಲ್ಲಿ ಮತ್ತೆ ಈಜುಕೊಳ ನಿರ್ಮಿಸುತ್ತೇವೆಂದು ತಿಳಿಸಿ ತಂತಿಬೇಲಿ ಹಾಕಿದ್ದರು. ಆಗ ಜಾಗದ ಮೂಲ ಮಾಲೀಕರು ಇಲ್ಲಿ ಬೇರೆ ಉದ್ದೇಶಕ್ಕೆ ಜಾಗ ಬಳಸುವಂತಿಲ್ಲ. ಬಳಸಿದರೆ, ನಾವು ಕೋರ್ಟ್‌ ಮೆಟ್ಟಿಲೇರುವುದಾಗಿ ಎಚ್ಚರಿಸಿದ್ದು,ಪುರಸಭೆ ಮೇಲೆ ನಂಬಿಕೆಯಿಲ್ಲದೆ ದಾವೆ ಹೂಡಿದ್ದಾರೆ. ಅದರಂತೆ ಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಧೀಶ ಸಾಗರ ಗುರುಗೌಡ ಪಾಟೀಲ ಆದೇಶ ಹೊರಡಿಸಿದ್ದು,ಸ್ಥಳವನ್ನು ವಾಣಿಜ್ಯ ಹಾಗೂ ಇತರೆ ಉದ್ದೇಶಕ್ಕೆ ಬಳಕೆ ಮಾಡಬಾರದು. ಈಜುಕೊಳ ಮಾತ್ರ ನಿರ್ಮಿಸುವಂತೆ ಪ್ರತಿಬಂದಕಾಜ್ಞೆ ಹೊರಡಿಸಿದ್ದಾರೆ. ಆದರೆ, ಈ ಜಾಗ ದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು ಪುರಸಭೆ ಚಿಂತಿಸಿದೆ ಎನ್ನಲಾಗಿದೆ.

ಈ ಸ್ಥಳದಲ್ಲಿ ಮಧುಗಿರಿ ಇತಿಹಾಸ ನೆನಪಿ ಸುವಂತೆ “ಸಾರ್ವಜನಿಕ ಈಜುಕೊಳ’ ನಿರ್ಮಿಸ ಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಈಜಲು ಹಣ ವಸೂಲಿ: ಸಾರ್ವಜನಿಕ ಈಜುಕೊಳಕ್ಕೆ ಮುಂದಾಗದ ಪುರಸಭೆ ಹಣ ಕೊಟ್ಟು ಈಜಲು ಪುರಸಭೆ ಆವರಣದಲ್ಲೇ ಕಳೆದ 5 ವರ್ಷದ ಹಿಂದೆಯೇ ಈಜುಕೊಳ ನಿರ್ಮಾಣ ಮಾಡಿದ್ದು, ಟೆಂಡರ್‌ ಕರೆಯದೆ ಹಣ ವಸೂಲಿಗೆ ಇಳಿದಿದೆ. ಯಾವುದೇ ಟಿಕೆಟ್‌ ನೀಡದೆ, ಹಣ ವಸೂಲಿ ಮಾಡಲಾಗುತ್ತಿದೆ. ನೂತನ ಅಧ್ಯಕ್ಷರು ಈ ಬಗ್ಗೆ ಗಮನ ಹರಿಸಿ, ಕ್ರಮವಹಿಸಬೇಕು ಎಂದು ತಿಳಿಸಿದೆ.

Advertisement

ಜಾಗವನ್ನು ಈಜುಕೊಳ ನಿರ್ಮಾಣಕ್ಕಾಗಿ ನೀಡಲಾಗಿದೆ. ನ್ಯಾಯಾಲಯದ ಯಾವುದೇ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಹಿಂದಿನವರು ಜಾಗ ಕಬಳಿಸಲು ಹುನ್ನಾರ ನಡೆಸಿದ್ದು, ಈ ರೀತಿ ಆಗಲು ಬಿಡುವುದಿಲ್ಲ. ಈ ಜಾಗದಲ್ಲಿ ಈಜುಕೊಳ ನಿರ್ಮಿಸುವ ಬಗ್ಗೆ ತೀರ್ಮಾನ ಕೈಗೊಂಡು, ಜಾಗ ಉಳಿಸಿಕೊಳ್ಳಲಾಗುವುದು. ತಿಮ್ಮರಾಜು, ಪುರಸಭೆ ಅಧ್ಯಕ್ಷ, ಮಧುಗಿರಿ

ಈಜುಕೊಳದ ಜಾಗವನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಸಾರ್ವಜನಿಕರ ಶಂಕೆಯಂತೆ ಯಾವುದೇ ಒಪ್ಪಂದಗಳಿಗೆ ಅವಕಾಶ ನೀಡಲ್ಲ. ಕಾನೂನಿನಡಿ ಅಧ್ಯಕ್ಷರು ಕೈಗೊಳ್ಳುವ ನಿರ್ಧಾರವನ್ನು ಅನುಮೋದಿಸುತ್ತೇನೆ. ಅಮರನಾರಾಯಣ್‌, ಸಿಒ, ಪುರಸಭೆ, ಮಧುಗಿರಿ

ಸಾರ್ವಜನಿಕ ಈಜುಕೊಳದಿಂದ ಉಚಿತವಾಗಿ ಗ್ರಾಮೀಣ ಭಾಗದ ಮಕ್ಕಳು ತಮ್ಮ ಈಜು ಪ್ರತಿಭೆ ಪ್ರದರ್ಶನಕ್ಕೆ ಅವಕಾಶವಿದೆ. ಹಿಂದಿನ ಪುರಸಭೆ ಆಡಳಿತದಂತೆ ಈಗಿನವರು ಈ ಆಸ್ತಿಯನ್ನು ನಿರ್ಲಕ್ಷವಹಿಸಿ ಕೈಬಿಟ್ಟರೇ, ಹೋರಾಟ ಕೈಗೊಳ್ಳಲಾಗುವುದು. ಕೇಬಲ್‌ ಸುಬ್ಬು, ಅಧ್ಯಕ್ಷರು, ಕನ್ನಡ ಗಡಿನಾಡು ರಕ್ಷಣಾವೇದಿಕೆ, ಮಧುಗಿರಿ

 

ಮಧುಗಿರಿ ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next