Advertisement

ಶಾಲಾ ಪಠ್ಯದಲ್ಲಿ ‘ಮಣ್ಣಿನ ಸಂರಕ್ಷಣೆ’ಯ ಕುರಿತ ಪಾಠ ಸೇರ್ಪಡೆ : ಬಿ.ಸಿ. ನಾಗೇಶ್

05:33 PM Jun 19, 2022 | Team Udayavani |

ಬೆಂಗಳೂರು:  ಭೂಮಿ ಮೇಲಿನ ಜೀವ ಸಂಕುಲದ ಉಳಿವಿಗೆ ಅತ್ಯಗತ್ಯವಾಗಿರುವ ಮಣ್ಣು ಹಾಗೂ ‘ಮಣ್ಣಿನ ಸಂರಕ್ಷಣೆ’ಯ ಮಹತ್ವದ ಕುರಿತು ಶಾಲಾ ಪಠ್ಯದಲ್ಲಿ ಮುಂಬರುವ ವರ್ಷಗಳಲ್ಲಿ ಪಾಠವನ್ನು ಸೇರ್ಪಡೆ ಮಾಡಲು ಪ್ರಯತ್ನಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು.

Advertisement

ಈಶ ಫೌಂಡೇಶನ್‌ವತಿಯಿಂದ ಭಾನುವಾರ (ಜೂನ್.19) ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಮಣ್ಣು ಉಳಿಸಿ’ಕಾರ್ಯಕ್ರಮದಲ್ಲಿ ಸಚಿವ ನಾಗೇಶ್ ಅವರು ಮಾತನಾಡಿದರು.

‘ಅತಿಯಾದ ಕೀಟನಾಶಕ, ರಾಸಯನಿಕಗಳ ಬಳಕೆಯಿಂದ ದಿನದಿಂದ ದಿನಕ್ಕೆ ಮಣ್ಣು ಹಾಳಾಗುತ್ತಿದೆ. ಹೀಗಾಗಿ, ಜೀವ ಸಂಕುಲದ ಉಳಿವಿಗೆ ಮಣ್ಣಿನ ಅಗತ್ಯತೆ ಕುರಿತು ದೇಶ-ವಿದೇಶಗಳಲ್ಲಿ ಜಾಗೃತಿ ಮೂಡಿಸುವ ಮಹತ್ವದ ಕಾರ್ಯವನ್ನು ಈಶ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಅವರು ಮಾಡುತ್ತಿದ್ದಾರೆ. ಇದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಮರೆತಿರುವ ಜವಾಬ್ದಾರಿಯನ್ನು ಇಡೀ ಜಗತ್ತಿಗೆ ಜ್ಞಾಪಿಸುವ ಪ್ರಯತ್ನವನ್ನು ಸದ್ಗುರು ಅವರು ಮಾಡುತ್ತಿದ್ದಾರೆ. ನೆಲ, ಜಲ ಸಂರಕ್ಷಣೆಯ ಭಾಗವಾಗಿ ಮಣ್ಣಿನ ಸಂರಕ್ಷಣೆಯು ಪ್ರತಿಯೊಬ್ಬರು ಜವಾಬ್ದಾರಿಯಾಗಿದೆ’ ಎಂದು ಸಚಿವರು ನುಡಿದರು.

ಇದನ್ನೂ ಓದಿ : ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರು ಪಾಲು

‘ಇತರ ಎಲ್ಲ ದೇಶಗಳಿಗಿಂತ ನಮ್ಮ ಭಾರತ ವಿಭಿನ್ನ ಮತ್ತು ವಿಶೇಷವಾದ ರಾಷ್ಟ್ರವಾಗಿದೆ. ಪಂಚಭೂತಗಳು ದೇವರು ಎಂದು ನಂಬಿರುವ ದೇಶ ನಮ್ಮದು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಸಾವಯವ ಕೃಷಿಗೆ ಉತ್ತೇಜನ ನೀಡಿದ್ದರು. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕೂಡ ಮಣ್ಣಿನ ಫಲವತ್ತತೆ ಉಳಿಸಿಕೊಳ್ಳುವುದು ಹಾಗೂ ಸಾವಯವ ಕೃಷಿಗೆ ಉತ್ತೇಜನ ನೀಡುತ್ತಿದೆ’ ಎಂದು ಸಚಿವ ನಾಗೇಶ್ ಹೇಳಿದರು.

Advertisement

‘ನೆಲ, ಜಲ, ಪರಿಸರ ಸಂರಕ್ಷಣೆ, ಮಣ್ಣಿನ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನಗಳು ಆಗಬೇಕೆಂದು ಸದ್ಗುರು ಅಭಿಪ್ರಾಯಪಟ್ಟಿದ್ದರು. ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಣ್ಣಿಗೆ ಹೆಚ್ಚಿನ ಮಹತ್ವ ನೀಡಬೇಕಿದೆ. ಮುಂಬರುವ ವರ್ಷಗಳಲ್ಲಿ ಪಠ್ಯ ಪುಸ್ತಕದಲ್ಲಿ ಮಣ್ಣಿನ ಸಂರಕ್ಷಣೆ ಕುರಿತು ಪಾಠವನ್ನು ಸೇರಿಸುವ ಪ್ರಯತ್ನ ಮಾಡಲಾಗುವುದು’ ಎಂದು ಸಚಿವ ನಾಗೇಶ್ ನುಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಸಚಿವರಾದ ಡಾ.ಕೆ. ಸುಧಾಕರ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next