ಮಂಡ್ಯ: ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯ ಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಡೀಸಿ ಕಚೇರಿ ಎದುರು ಜಮಾಯಿ ಸಿದ ಪ್ರತಿಭಟನಾಕಾರರು, ಡೀಸಿ ಡಾ.ಎಂ.ವಿ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.
ಅಗತ್ಯ ಕ್ರಮವಹಿಸಿ: ರಾಷ್ಟ್ರ, ರಾಜ್ಯ ಮತ್ತು ಜಿಲ್ಲೆಯ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡಿರುವ ಮೈಷುಗರ್ ಕಾರ್ಖಾನೆ ಜಿಲ್ಲೆಯ ಜೀವನಾಡಿಯಾಗಿದ್ದು, ಸರ್ಕಾರಿ ಸೌಮ್ಯದಲ್ಲಿಯೇ ಉಳಿಸಿಕೊಳ್ಳಬೇಕು. ಸರ್ಕಾರವೇ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು. ಮೈಷುಗರ್, ಪಿಎಸ್‌ಎಸ್‌ಕೆ ಹಾಗೂ ಖಾಸಗಿ ಕಾರ್ಖಾ ನೆಗಳ ವ್ಯಾಪ್ತಿಯ ಕಬ್ಬನ್ನು ಜುಲೈ ಆರಂಭದಲ್ಲೇ ನುರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ತಕ್ಷಣ ಬಾಕಿ ಹಣ ನೀಡಿ: ಕಳೆದ ಸಾಲಿನ ಕಬ್ಬು ಕಟಾವು, ಸಾಗಾಣಿಕೆ ವೆಚ್ಚವನ್ನು ಕೂಡಲೇ ನೀಡಬೇಕು. ಜಿಲ್ಲೆಯ ಕಾರ್ಖಾನೆ ಗಳು ರೈತರ ಕಬ್ಬಿನ ಬಾಕಿ ಹಣಕ್ಕೆ ಬಡ್ಡಿಯನ್ನು ಸೇರಿಸಿ ತಕ್ಷಣ ನೀಡಬೇಕು. ಕೇಂದ್ರ ನಿಗದಿ ಪಡಿಸಿದ ಎಫ್‌ಆರ್‌ಪಿ ದರದಂತೆ ರಾಜ್ಯ ಸರ್ಕಾರ ಸಕಾಲದಲ್ಲಿ ರೈತರಿಗೆ ಹಣ ಪಾವತಿಸಬೇಕು. ಆನ್‌ಲೈನ್ ಮೂಲಕ ಷೇರುದಾರರ ಸಭೆ ನಡೆಸಲು ಹೊರಟಿರುವ ಸರ್ಕಾರದ ಕ್ರಮವು ಅವೈಜ್ಞಾನಿವಾಗಿದೆ. ಈ ಕ್ರಮವನ್ನು ರದ್ದು ಮಾಡಬೇಕು. ಮೈಷುಗರ್ ಕಾರ್ಖಾನೆಯನ್ನು ಒ ಅಂಡ್ ಎಂ ಅಥವಾ ಗುತ್ತಿಗೆ ಮೂಲಕ ಖಾಸಗೀಕರಣ ಮಾಡಲು ಜಿಲ್ಲೆಯ ಸಂಸದರು ಹಾಗೂ ಕೆಲವು ರಾಜಕಾರಣಿಗಳು ಹುನ್ನಾರ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅವ್ಯವಹಾರದ ತನಿಖೆಯಾಗಲಿ: ಒ ಅಂಡ್ ಎಂ ಅಥವಾ ಗುತ್ತಿಗೆಯಂತಹ ಯಾವುದೇ ಪ್ರಯತ್ನವೂ ಖಾಸಗೀಕರಣದ ಮೊದಲ ಹೆಜ್ಜೆಯಾಗಿದೆ. ಅಂತಹ ಪ್ರಕ್ರಿಯೆಯನ್ನು ಕೈ ಬಿಡಬೇಕು. ರೈತರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಕಾರ್ಖಾನೆಯನ್ನು ಚಾಲನೆ ಮಾಡಲು ಅಗತ್ಯ ಇರುವ ಹಣಕಾಸು ಮತ್ತು ಸಿಬ್ಬಂದಿಗಳನ್ನು ಸರ್ಕಾರ ನೇಮಿಸಬೇಕು. ಈವರೆಗೆ ಮೈಷುಗರ್ ಕಾರ್ಖಾನೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿದರು.
ಸಾವಿರಾರು ಕೋಟಿ ರೂ. ಮೌಲ್ಯದ ಕಾರ್ಖಾನೆಯನ್ನು ಖಾಸಗಿ ವ್ಯಕ್ತಿಗಳಿಗೆ ಮೂರು ಕಾಸಿಗೆ ಮಾರುವ ಹುನ್ನಾರವೇ ಗುತ್ತಿಗೆ, ತುಂಡುಗುತ್ತಿಗೆ ನೀಡುವುದರ ಹಿಂದಿನ ಉದ್ದೇಶವೇನು, ಖಾಸಗಿ ಕಾರ್ಖಾನೆ ಗಳಲ್ಲವೂ ಕೋಟ್ಯಂ ತರ ರೂ. ಕಬ್ಬಿನ ಬಾಕಿ ಉಳಿಸಿಕೊಂಡಿವೆ ಎಂದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ, ಸಂಘಟನಾ ಕಾರ್ಯದರ್ಶಿ ಸುನಂದಾ , ರೈತ ಮುಖಂಡರಾದ ಚಂದ್ರಶೇಖರ್, ಮುದ್ದೇಗೌಡ, ಹೆಮ್ಮಿಗೆ ಚಂದ್ರಶೇಖರ್, ಕೆ.ಬೋರಯ್ಯ, ಸುಧೀರ್ ಕುಮಾರ್, ದಸಂಸ ಮುಖಂಡ ಶ್ರೀನಿವಾಸ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.