ಹೊಸಂಗಡಿ: ನಾವು ನಮ್ಮ ಮಾತೃ ಭಾಷೆಯನ್ನು ಗೌರವಿಸಬೇಕು. ಇದರಂತೆ ಉಳಿದ ಭಾಷೆಯನ್ನು ಕೂಡಾ ನಾವು ಗೌರವಿಸಬೇಕು. ಭಾಷೆ ಎಂದರೆ ಬರೀ ಅಕ್ಷರಗಳ ಜೋಡಣೆ ಅಲ್ಲ. ಭಾಷೆಗಳಲ್ಲಿ ಬಳಕೆಯ ಭಾಷೆ ಅದೇ ರೀತಿ ಬರೆಯುವ ಭಾಷೆ ಎಂಬುದಾಗಿ ವಿಂಗಡಿಸಬಹುದಾಗಿದೆ. ಎಲ್ಲಿದ್ದರೂ ಹೇಗಿದ್ದರೂ ನಾವು ನಮ್ಮ ಮಾತೃ ಭಾಷೆಗೆ ಆದ್ಯತೆ ನೀಡಬೇಕಾಗಿದೆ ಎಂಬುದಾಗಿ ನಿವೃತ್ತ ಅಧ್ಯಾಪಕ ಕೃಷ್ಣಪ್ಪ ಮಾಸ್ತರ್ ಹೇಳಿದರು.
ಅವರು ನಿರಂತರ ಕಲಿಕಾ ಕೇಂದ್ರ ಕುಂಜತ್ತೂರು ಹಾಗೂ ತೂಮಿನಾಡು ಅಂಗನವಾಡಿಯ ಆಶ್ರಯದಲ್ಲಿ ತೂಮಿನಾಡು ಅಂಗನವಾಡಿಯಲ್ಲಿ ಮಾತೃ ಭಾಷಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಸಂಯುಕ್ತ ರಾಷ್ಟ್ರ ಫೆಬ್ರವರಿ 21 ರಂದು ಮಾತೃ ಭಾಷಾ ದಿನವನ್ನಾಗಿ ಆಚರಿಸುತ್ತಿದೆ. ಭಾಷೆಗೂ ಸಂಸ್ಕೃತಿಗೂ ಬಹಳ ನಿಕಟ ಸಂಬಂಧವಿದೆ. ಒಂದು ಸಮಾಜದ ಸಾಂಸ್ಕೃತಿಕ ಹಿನ್ನೆಲೆಯು ಅದರ ಮಾತೃ ಭಾಷೆಗೆ ಮಾತ್ರ ಹೊಂದಿಕೊಂಡಿರುತ್ತದೆ. ತುಳು ಸಂಸ್ಕೃತಿ, ಬ್ಯಾರಿ ಸಂಸ್ಕೃತಿ ಮೊದಲಾದವುಗಳು ಅವುಗಳ ಮಾತೃ ಭಾಷೆಗೆ ಹೊಂದಿಕೊಂಡಿವೆ. ಭಾರತದಲ್ಲಿ ಹಲವಾರು ಭಾಷೆಗಳಿದ್ದರೂ ಚಾಲ್ತಿಯಲ್ಲಿರುವುದು ಕೆಲವೇ ಭಾಷೆ ಗಳಾಗಿವೆ ಎಂಬುದಾಗಿ ಅತಿಥಿಗಳಾಗಿ ಬಂದವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಹೆಲ್ತ್ ಇನ್‌ಸ್ಪೆಕ್ಟರ್ ರಂಜಿತ್, ಆಶಾ ವರ್ಕರ್ ಈಶ್ವರಿ, ಪ್ರೇರಕಿ ಹರಿಣಾಕ್ಷಿ, ಅಂಗನವಾಡಿ ಟೀಚರ್ ವನಿತಾ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.