Advertisement

ಟ್ರೈಕೋಡರ್ಮಾ ಬಳಸಿ ಹಣ ಉಳಿಸಿ

10:24 AM Mar 09, 2020 | mahesh |

ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬಾಧಿಸುವ ರೋಗಗಳಿಗೆ ಕಾರಣವಾದ ರೋಗಾಣುಗಳು ಬೀಜ, ಮಣ್ಣು, ಕೀಟ, ನೀರು ಮತ್ತು ಗಾಳಿಯ ಮೂಲಕ ಪಸರಿಸುತ್ತವೆ. ಇದನ್ನು ತಡೆಗಟ್ಟಲು ವಿವಿಧ ರೀತಿಯ ಬೇಸಾಯ ಪದ್ಧತಿ, ರಾಸಾಯನಿಕ, ಜೈವಿಕ ಹಾಗೂ ಇತರ ರೋಗನಾಶಕ ವಸ್ತುಗಳನ್ನು ಬಳಸುವುದು ಸಾಮಾನ್ಯ. ಆದರೆ ಅತಿ ಮತ್ತು ಅಸಮರ್ಪಕ ರಾಸಾಯನಿಕ ರೋಗನಾಶಕ ಬಳಕೆಯಿಂದಾಗಿ ದುಷ್ಪರಿಣಾಮ ಉಂಟಾಗುತ್ತಿದೆ. ಸಸ್ಯಗಳಿಗೆ ತಗಲುವ ರೋಗಗಳ ನಿರ್ವಹಣೆಯಲ್ಲಿ ಸಾವಯವ ಪದ್ಧತಿ ಹೆಚ್ಚು ಪರಿಣಾಮಕಾರಿ. ಇದರಲ್ಲಿ ಜೈವಿಕ ವಿಧಾನಗಳನ್ನು ಬಹಳ ಹಿಂದಿನಿಂದಲೂ ಅಳವಡಿಸಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಇಂದು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ತೀವ್ರವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಜೈವಿಕ ವಿಧಾನವನ್ನು ಕ್ರಮಬದ್ಧವಾಗಿ ಅಳವಡಿಸಿ ರೋಗ ನಿರ್ವಹಣೆ ಮಾಡುವುದು ಸೂಕ್ತ. ಈ ದಿಸೆಯಲ್ಲಿ ಟ್ರೈಕೋಡರ್ಮಾ ಎಂಬ ಶಿಲೀಂಧ್ರ ಸಾಮಾನ್ಯವಾಗಿ ಎಲ್ಲ ಪ್ರದೇಶದ ಮಣ್ಣಿನಲ್ಲಿ ಬದುಕುತ್ತಿದೆ. ಇದೊಂದು ಪರಿಸರಸ್ನೇಹಿ ಜೈವಿಕ ರೋಗನಾಶಕವಾಗಿದೆ.

Advertisement

ತಯಾರಿಸುವ ವಿಧಾನ
ರೈತರು ಶಿಲೀಂಧ್ರ ಉತ್ಪಾದನೆಗೆ ಮೊದಲು ಶುದ್ಧವಾಗಿ ಸಂಸ್ಕರಿಸಿದ ಮೂಲ ಶಿಲೀಂಧ್ರ (ಮದರ ಕಲ್ಚರ್‌)ವನ್ನು ಸಿದ್ದಪಡಿಸಿಕೊಳ್ಳಬೇಕು. ಮದರ್‌ ಕಲ್ಚರ್‌ಅನ್ನು ಕೃಷಿ ವಿಶ್ವವಿದ್ಯಾಲಯದ ಜೀವಾಣು ಶಾಸ್ತ್ರ ವಿಭಾಗ ಅಥವಾ ಸಸ್ಯರೋಗ ಶಾಸ್ತ್ರ ವಿಭಾಗದಲ್ಲಿ ಸಿಗುತ್ತದೆ. ಇದನ್ನು ಲಭ್ಯವಿರುವ ಮೂಲ ರೂಪದಲ್ಲಿ ತಂದುಕೊಂಡು ತಿಪ್ಪೆಗೊಬ್ಬರ, ಬೆಳೆಗಳ ತ್ಯಾಜ್ಯಗಳೊಂದಿಗೆ ಸೇರಿಸಬೇಕು. ಇದರಿಂದ ಇವುಗಳ ಸಂಖ್ಯೆ ಜಾಸ್ತಿಯಾಗುತ್ತದೆ. ಒಂದು ಕೆ.ಜಿ. ಟ್ರೈಕೋಡರ್ಮಾ ಪುಡಿಯನ್ನು ಒಂದು ಟನ್‌ ಸಾವಯವ ಪದಾರ್ಥಕ್ಕೆ ಪದರಿನ ರೀತಿಯಲ್ಲಿ ಸೇರಿಸಿ ಕಾಂಪೋಸ್ಟ್‌ ತಯಾರಿಸಬಹುದು.

ರೋಗನಾಶಕ ಗುಣಗಳು
ಇದು ಅನೇಕ ಪ್ರಭೇಧ‌ಗಳನ್ನು ಹೊಂದಿದ್ದು ಮಣ್ಣಿನಲ್ಲಿ, ಗಿಡದ ಬೇರುವಲಯದಲ್ಲಿ ಯಥೇತ್ಛವಾಗಿ ಕಂಡುಬರುತ್ತದೆ. ಇದು ಹಸಿರು ಬಿಳಿ ಬಣ್ಣ ಹೊಂದಿದ್ದು ಇವುಗಳು ರೋಗಕಾರಕ ಶಿಲೀಂಧ್ರಗಳ ಮೇಲೆ ಪರಾವಲಂಬಿಯಾಗಿ ಬೆಳೆದು ಅವುಗಳಿಗೆ ಆಹಾರ ಮತ್ತು ಸ್ಥಳ ಸಿಗದ ಹಾಗೆ ಮಾಡಿ ಅವುಗಳ ಸಂಖ್ಯೆ, ಸಂತಾನೋತ್ಪತ್ತಿ ಕಡಿಮೆ ಮಾಡುತ್ತದೆ. ಮಣ್ಣಿನಲ್ಲಿರುವ ಆ್ಯಂಟಿಬಯೋಟಿಕ್‌ ವಸ್ತುಗಳಾದ ಡಮರ್ನ್, ವಿರಿಡಿನ್‌, ಗ್ಲೆ„ಯೋಟಾಕ್ಸಿನ್‌, ಟ್ರೈಕೋಡರ್ಮಾ, ಅಸಿಟಾಲ್ಡಿಹೈಡ್‌ ಮತ್ತು ಅನೇಕ ಕಿಣ್ವಗಳನ್ನು ಬಿಡುಗಡೆ ಮಾಡಿ ಬೀಜ ಮತ್ತು ಹಣ್ಣಿನಿಂದ ಹರಡುವ ಅನೇಕ ರೋಗಾಣುಗಳನ್ನು ನಿರ್ವಹಣೆ ಮಾಡುತ್ತದೆ. ರೋಗಕಾರಕ ದುಂಡಾಣು ಹಾಗೂ ಜಂತುಗಳನ್ನು ನಿಯಂತ್ರಿಸುತ್ತದೆ.

ಟ್ರೈಕೋಡರ್ಮಾದಿಂದ ವಿವಿಧ ರೋಗಗಳ ನಿರ್ವಹಣೆ
1. ಟೊಮೆಟೋ, ಬದನೆ: ಸಾಯುವ/
ಸ್ಕಿರೋಶಿಯಂ ರೋಗಕ್ಕೆ 5 ಗ್ರಾಂ ಪ್ರತಿ ಕೆ.ಜಿ. ಬೀಜಕ್ಕೆ .
2. ಕಬ್ಬು: ಕೆಂಪು ಕೊಳೆರೋಗ-10 ಗ್ರಾಂ ಪ್ರತಿ ಕೆ.ಜಿ. ಬೀಜಕ್ಕೆ .
3. ಕರಿಮೆಣಸು: ಸೊರಗು ರೋಗ-5 ಗ್ರಾಂ ಪ್ರತಿ ಕೆ.ಜಿ. ಬೀಜಕ್ಕೆ.
4. ಎಲ್ಲ ಬೆಳೆಗಳಿಗೆ: ಸಿಡಿ ರೋಗ-5 ಗ್ರಾಂ ಪ್ರತಿ ಕೆ.ಜಿ. ಬೀಜಕ್ಕೆ.

ಉಪಯೋಗಿಸುವ ವಿಧಾನ
- ಪ್ರತಿ ಕೆ.ಜಿ. ಬೀಜಕ್ಕೆ 4-5 ಗ್ರಾಂ ಟ್ರೈಕೋಡರ್ಮಾ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಅನಂತರ 1ರಿಂದ 2 ಗಂಟೆಗಳವರೆಗೆ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು.

Advertisement

- ಎರಡು ಕೆ.ಜಿ. ಟ್ರೈಕೋಡರ್ಮಾ ಪುಡಿಯನ್ನು 50 ಕೆ.ಜಿ. ಕಳಿತ ತಿಪ್ಪೆಗೊಬ್ಬರದೊಂದಿಗೆ ಬೆರೆಸಿ ಬಿತ್ತುವ ಮುಂಚೆ ಅಥವಾ ಬಿತ್ತನೆ ಸಮಯ ದಲ್ಲಿ ಹೊಲದ ಮಣ್ಣಿನಲ್ಲಿ ಸೇರಿಸಬೇಕು.

- 10ರಿಂದ 15 ಗ್ರಾಂ ಟ್ರೈಕೋಡರ್ಮಾ ಪುಡಿಯನ್ನು ಪ್ರತಿ 4 ಕೆ.ಜಿ. ಸಾರಿಸಿದ ತಿಪ್ಪೆಗೊಬ್ಬರದೊಂದಿಗೆ ಬೆರೆಸಿ ಗಿಡದ ಸುತ್ತಲೂ ಉಂಗುರದಾಕಾರದಲ್ಲಿ ಮಣ್ಣಿನಲ್ಲಿ ಸೇರಿಸಿ ಅನಂತರ ನೀರು ನೀಡಬೇಕು.

- 10 ಗ್ರಾಂ ಟ್ರೈಕೋಡರ್ಮಾ ಪುಡಿಯನ್ನು ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಸಿ, ಗಿಡ ಅಥವಾ ತುಂಡುಗಳನ್ನು 30 ನಿಮಿಷ ಅದ್ದಿ ನಾಟಿ ಮಾಡಬೇಕು.

- ಪ್ರತಿ ಲೀಟರ್‌ ನೀರಿಗೆ 5ರಿಂದ 10 ಗ್ರಾಂನಷ್ಟು ಟ್ರೈಕೋಡರ್ಮಾ ಬೆರೆಸಿ ತಯಾರಿಸಿದ ದ್ರಾವಣವನ್ನು ಸಿಂಪಡಣೆ ಮಾಡಬೇಕು.

ಮುಂಜಾಗ್ರತಾ ಕ್ರಮಗಳು
ಜೈವಿಕ ರೋಗನಾಶಕವನ್ನು ಬಳಸುವಾಗ ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಪದಾರ್ಥಗಳಾದ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ, ಕಾಂಪೋಸ್ಟ್‌, ಎರೆಹುಳ ಗೊಬ್ಬರ ಇದ್ದರೆ ಅವುಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿರುತ್ತವೆ. ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಕಾಪಾಡುವುದರಿಂದ ಜೈವಿಕ ಕ್ರಿಯೆ ಉತ್ತಮಗೊಳ್ಳುತ್ತದೆ. ರಾಸಾಯನಿಕ ಪೀಡೆನಾಶಕಗಳ ಜತೆಗೆ ಬೆರೆಸಿ ಉಪಯೋಗಿಸಬಾರದು. ಜೈವಿಕ ರೋಗನಾಶಕಗಳ ಡಬ್ಬಿಯನ್ನು ತಂಪಾದ ಹಾಗೂ ಒಣ ಪ್ರದೇಶದಲ್ಲಿ ಶೇಖರಿಸಿ ಇಡಬೇಕು. ಶೇಖರಣೆ ಮಾಡುವಾಗ ರಾಸಾಯನಿಕ ಗೊಬ್ಬರ, ರೋಗನಾಶಕ, ಕೀಟನಾಶಕದೊಂದಿಗೆ ಸೇರಿಸಬಾರದು. ಬೀಜೋಪಚಾರ ಮಾಡಿದ ಬೀಜಗಳನ್ನು ನೇರವಾದ ಬಿಸಿಲಿನಿಂದ ರಕ್ಷಿಸಿ ನೆರಳಿನಲ್ಲಿ ಒಣಗಿಸಿ ಬಿತ್ತುವುದರಿಂದ ಉತ್ತಮ ರೋಗರಹಿತ ಮೊಳಕೆ ಉಂಟಾಗುತ್ತದೆ. ತಯಾರಿಸಿದ 6 ತಿಂಗಳೊಳಗೆ ಜೈವಿಕ ರೋಗನಾಶಕ ಉಪಯೋಗಿಸಿದರೆ ಹೆಚ್ಚಿನ ಲಾಭವಾಗುವುದು.

ಟ್ರೈಕೋಡರ್ಮಾ ಬಳಕೆ ಮಾಡುವುದರಿಂದ ಅತ್ಯಂತ ಅಪಾಯಕಾರಿ ರೋಗವನ್ನುಂಟುಮಾಡುವ , ಮಣ್ಣಿನಲ್ಲಿ ವಾಸಿಸುವ, ಹರಡುವ ವಿವಿಧ ಬೇರು, ಸೊರಗು ರೋಗವನ್ನುಂಟು ಮಾಡುವ ಶಿಲೀಂಧ್ರಗಳನ್ನು ನಿರ್ವಹಣೆ ಮಾಡಬಹುದು. ಇದರಲ್ಲಿ ಸುಮಾರು 18ರಿಂದ 20 ಪ್ರಭೇದಗಳಿವೆ. ಅವುಗಳಲ್ಲಿ “ಟ್ರೈಕೋಡರ್ಮಾ ವಿರಿಡೆ’ ಮತ್ತು “ಟ್ರೈಕೋಡರ್ಮಾ ಹಾಜರಿಯಾನಂ’ನ್ನು ಪ್ರಮುಖ ಜೈವಿಕ ರೋಗನಾಶಕವನ್ನಾಗಿ ಬಳಸಲಾಗುತ್ತಿದೆ.

ಸಾವಯವ ಮಹತ್ವ ತಿಳಿದ ಮೇಲೆ ಹಲವು ಪರಿಸರಪೂರಕ ಮಾರ್ಗೋಪಾಯಗಳು ರೈತರ ಜಮೀನಿನಲ್ಲಿ ಸಂಶೋಧನೆಗೊಂಡವು. ಮಣ್ಣಿನಿಂದ ಬರುವ ರೋಗಗಳಿಂದ ಬೆಳೆಗಳಿಗೆ ಹೆಚ್ಚಿನ ಹಾನಿ ಉಂಟಾಗುತ್ತದೆ. ರೋಗಗಳು ಬಂದ ಅನಂತರ ಹತೋಟಿ ಮಾಡುವುದಕ್ಕಿಂತ ರೋಗ ಬರದಂತೆ ಮುನ್ನೆಚ್ಚರಿಕೆ ಕೈಗೊಳ್ಳುವುದು ಸೂಕ್ತ. ಇದರಿಂದ ಬರುವ ರೋಗಗಳನ್ನು ನಿಯಂತ್ರಿಸಲು “ಟ್ರೈಕೋಡರ್ಮಾ’ ಎಂಬ ಸೂಕ್ಷ್ಮಾಣುಜೀವಿಗಳನ್ನು ಉಪಯೋಗಿಸಲಾಗುತ್ತಿದೆ. ರೈತರು ತಮ್ಮ ಅಗತ್ಯಕ್ಕೆ ತಕ್ಕಂತೆ ಇದನ್ನು ಅಭಿವೃದ್ಧಿಪಡಿಸಿಕೊಂಡು ತಮ್ಮ ಜಮೀನಿನಲ್ಲಿ ಉಪಯೋಗಿಸಬಹುದಾಗಿದೆ.

– ಜಯಾನಂದ ಅಮೀನ್‌, ಬನ್ನಂಜೆ

Advertisement

Udayavani is now on Telegram. Click here to join our channel and stay updated with the latest news.

Next