Advertisement

ಹಣ ಉಳಿಸಿ ಲಾಭ ಗಳಿಸಿ

12:45 PM Mar 05, 2018 | Team Udayavani |

ಯಾವುದೇ ಕ್ಷೇತ್ರದಲ್ಲಿ ಆಗಲಿ ಯಶಸ್ಸಿಗಿರುವ ಸರಳ ಸೂತ್ರವೇ ನಿರಂತರತೆ. ಇದನ್ನೇ ಈಗ ಸಸ್ಟೇನೆಬಿಲಿಟಿ ಎಂದು ಉದ್ಯಮಿಗಳು, ಉದ್ಯಮಕ್ಕೆ ಅನ್ವಯಿಸಿ ಹೇಳುತ್ತಿದ್ದಾರೆ. ಅಂದರೆ ಅದು ಉಳಿಯಬೇಕು. ಹಣ ಉಳಿಸಬೇಕು ಎನ್ನುವುದು ಕೇವಲ ಒಂದೋ ಎರಡೋ ತಿಂಗಳು ಮಾಡಿ ಮುಗಿಸುವುದಲ್ಲ. ಬದಲಾಗಿ ಅದು ಜೀವನ ಕ್ರಮ ಆಗಬೇಕು. ಇದೊಂದು
ರೀತಿಯಿಂದ ಆರ್ಥಿಕ ಶಿಸ್ತು. ಆರ್ಥಿಕ ಶಿಸ್ತಿಗೆ ನಿರಂತರ ಬದಟಛಿತೆ ಬೇಕು. ಇದು ಸ್ವಯಂ ಶಿಸ್ತು. ನಮಗೆ ನಾವೇ ಪಾಲಿಸಬೇಕಾದ ಶಿಸ್ತು. ಈ ಶಿಸ್ತು ನಮ್ಮ ಓದು, ಉದ್ಯೋಗ, ಸಂಪಾದನೆ ಯಾವುದನ್ನೂ ಅವಲಂಬಿಸಿರುವುದಿಲ್ಲ. ಇದು ಆಂತರಿಕವಾದ ಶಿಸ್ತು ಕೂಡ. ಈ ಮಾತನ್ನು ಉದಾಹರಣೆ ಮೂಲಕವೇ ತಿಳಿಸುವೆ.

Advertisement

ಸುಮಾರು 25 ವರ್ಷಗಳ ಹಿಂದಿನ ಘಟನೆಯನ್ನು ನಾಗಮ್ಮ ಹೇಳತೊಡಗಿದಳು. ಅವಳು ಇದ್ದದ್ದು ಚೆನ್ನಪಟ್ಟಣದ ಹತ್ತಿರದ ಹಳ್ಳಿಯಲ್ಲಿ, ಮದುವೆ ಆಗಿದ್ದು ಸರ್ಕಾರಿ ಆಸ್ಪತ್ರೆಯ ಅಂಬುಲೆನ್ಸ್‌ ಡ್ರೆ„ವರ್‌ ಒಬ್ಬರನ್ನು. ಆಂಬುಲೆನ್ಸ್‌ ಡ್ರೈವರ್‌ ಅಂದ ಮೇಲೆ ಕೇಳಬೇಕೆ? ಆತ ನಿತ್ಯವೂ ಆಸ್ಪತ್ರೆಗೆ ಹೋಗಬೇಕು. ಕೆಲಸ ಇದ್ದರೂ ಇರಬಹುದು, ಇಲ್ಲದೆಯೂ ಇರಬಹುದು.
ಒಮ್ಮೊಮ್ಮೆ ರಾತ್ರಿ ಹೊತ್ತು ಕೆಲಸ ಇರುತ್ತದೆ. ಹೇಳಲು ಆಗುವುದಿಲ್ಲ. ಹಾಗಾಗಿ ಆಸ್ಪತ್ರೆಯ ಕಾಂಪೋಂಡಿನಲ್ಲಿಯೇ ಇವರಿಗೆ ಉಳಿಯುವ ವ್ಯವಸ್ಥೆ ಮಾಡಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ಹೆಣ್ಣುಮಕ್ಕಳಿಗೆ ಓದಿಸಬೇಕು. ಒಂದು ಮನೆ ಕಟ್ಟಿಕೊಳ್ಳಬೇಕು, ಬಂಗಾರ ಮಾಡಿಸಬೇಕು. ಹೀಗೆ ಮಧ್ಯಮ ವರ್ಗದ, ಕೆಳ ಮಧ್ಯಮವರ್ಗದ ಎಲ್ಲ ಮಹಿಳೆಯರಿಗೂ
ಇಂಥದೇ ಕನಸು ನಾಗಮ್ಮಳಿಗೂ ಇತ್ತು. ಇರಲೇ ಬೇಕು ಬಿಡಿ. ಆದರೆ ನಾಗಮ್ಮ ಕೇವಲ ಕನಸು ಕಾಣಲಿಲ್ಲ. ಅವಳು ಹೇಗೆ ತನ್ನ ಬದುಕನ್ನು ರೂಪಿಸಿಕೊಂಡಳು ಎಂಬುದನ್ನೇ ನಾನು, ನಾಗಮ್ಮ ಹೇಳಿದ್ದನ್ನೇ ಅವಳದೇ ಮಾತಿನಲ್ಲಿ ಹೇಳುತ್ತಿದ್ದೇನೆ.

ಆಸ್ಪತ್ರೆಯ ಕಾಂಪೌಂಡಿನಲ್ಲಿಯೇ ನಮಗೆ ಮನೆ ಕೊಟ್ಟಿದ್ದರು. ನಾವು ಆ ಮನೆಗೆ ಬಾಡಿಗೆ ಕೊಡಬೇಕಾಗಿರಲಿಲ್ಲ. ಎಲ್ಲರೂ ಬಾಡಿಗೆ ಉಳೀತು ಬಿಡು ಎನ್ನುತ್ತಿದ್ದರು. ನಾನು ಬಾಡಿಗೆ ಕೊಡಬೇಕೆಂದು ಇದ್ದಿದ್ದರೆ ಪ್ರತಿ ತಿಂಗಳೂ ಕೊಡುತ್ತಿರಲಿಲ್ಲವಾ? ಹಾಗೆ ಎಂದು ಭಾವಿಸಿ ಪ್ರತಿ ತಿಂಗಳು ಬಾಡಿಗೆ ಕಟ್ಟಿದ ಹಾಗೆ ಎಂದು ಆರ್‌.ಡಿ. ಕಟ್ಟಿದೆ. ನಾವು ಬಾಡಿಗೆಯನ್ನು ಎಷ್ಟು ಕಷ್ಟವಾದರೂ ಕಟ್ಟುತ್ತೇವೆ. ಯಾಕೆಂದರೆ ಆಮೇಲೆ ಮನೆಯ ಮಾಲೀಕ ಬಂದು ನಮ್ಮನ್ನು ಹೊರಗೆ ಹಾಕಿ ಬಿಡಬಹುದೆಂಬ ಭಯದಿಂದ. ನಾವೂ ಹಾಗೆ ಮಾಡಿದೆವು. ಎಷ್ಟೇ ಕಷ್ಟವಾದರೂ ತಿಂಗಳು ತಿಂಗಳೂ ಆರ್‌.ಡಿ. ಕಟ್ಟುವುದನ್ನು ನಿಲ್ಲಿಸಲೇ
ಇಲ್ಲ. ಅಷ್ಟೇ ಅಲ್ಲ, ಹೇಗೆ ಬಾಡಿಗೆಯವರು ವರ್ಷ ವರ್ಷ ಹೆಚ್ಚಿಗೆ ಮಾಡುತ್ತಾರೆ ಅಲ್ಲವಾ ಹಾಗೆ ನಾನೂ ಕಟ್ಟುವ ಹಣ ಹೆಚ್ಚಿಗೆ ಮಾಡುತ್ತಾ ಬಂದೆ. ಹೆಚ್ಚಿಗೆ ಹಣವನ್ನು ಕಟ್ಟ ಬೇಕಾಗಿ ಬಂದಾಗ ನಮ್ಮ ಯಜಮಾನರು ಬಿಡುವಿನ ವೇಳೆಯಲ್ಲಿ ಆಟೋ ಓಡಿಸತೊಡಗಿದರು.

ಅದರಿಂದಲೂ ದೊರೆತ ಹಣವನ್ನು ನಾನು ಆರ್‌.ಡಿ. ಕಟ್ಟಿದೆ. ಕಳೆದ 25 ವರ್ಷದಲ್ಲಿ ನಾನು ಕಟ್ಟಿದ ಹಣ ನನ್ನ ಸಂಸಾರವನ್ನು ಹೇಗೆ ಕಾಯುತ್ತಿದೆ ಎಂದÃ,ೆ ನೋಡಿ ನನ್ನ ಇಬ್ಬರು ಹೆಣ್ಣು ಮಕ್ಕಳು ಇಂಜನೀಯರ್‌ಗಳಾಗಿದ್ದಾರೆ. ಇದೇ ಊರಲ್ಲಿ ನಾವು ಮೂರಂತಸ್ತಿನ ಮನೆ ಮಾಡಿದ್ದೇವೆ. ಅಂದರೆ ಮೂರು ಮನೆ ಕಟ್ಟಿದ್ದೇವೆ. ಮುಂದೆ ನಮಗೆ ಹಾಗೂ ನಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಆಗತ್ತೆ ಅಂತಾ. ಅವರು ಬೇಕಾದರೆ ಇದನ್ನು ಬಾಡಿಗೆಗೆ ಕೊಟ್ಟರೂ ಆಗತ್ತೆ. ನಮ್ಮ ಸಂಬಂಧಿಕರು, ನಮ್ಮ ಹಾಗೆ ಸಣ್ಣ ಕೆಲಸದಲ್ಲಿ ಇರುವವರು, ಮನೆಯಲ್ಲಿ ಒಬ್ಬರೇ ದುಡಿಯುವವರು ಎಲ್ಲರೂ ಈಗ ನನ್ನನ್ನು ಕೇಳುತ್ತಾರೆ. ಹೇಗೆ ಇದನ್ನೆಲ್ಲ ಮಾಡಿದೆ ಅಂತಾ? ಅವರಿಗೆಲ್ಲಾ ಆಶ್ಚರ್ಯ. ನಾನು ಮಾಡಿದ್ದು ತುಂಬಾ ಸಿಂಪಲ್‌; ಖರ್ಚು ಕಡಿಮೆ ಮಾಡಿದೆ. ಯಾವುದಕ್ಕೆ ಬೇಕೋ ಅದಕ್ಕಷ್ಟೆ ಖರ್ಚು ಮಾಡಿದೆ. ಉಳಿದದ್ದನ್ನು ಉಳಿಸಿದೆ. ಉಳಿಸಿದ್ದನ್ನು
ಮತ್ತೆ ಬೆಳೆಸಿದೆ. ಪ್ರತಿ ತಿಂಗಳೂ ಇಷ್ಟು ಹಣ ಉಳಿಸಲೇ ಬೇಕು ಎಂದು ನಿರ್ಧರಿಸಿ ಹಾಗೇ ಮಾಡುತ್ತ ಬಂದೆ. ಇಷ್ಟು ಹೇಳಿ ನಾಮ್ಮ ಮಾತು ನಿಲ್ಲಿಸಿದಳು. ಇಷ್ಟು ಹೊತ್ತುತಾನೊಬ್ಬಳೇ ಮಾತನಾಡುತ್ತಿರುವುದಕ್ಕೆ ಸಂಕೋಚ ಪಡುತ್ತ, ನಾನು ಯಾರೂ ಮಾಡದೇ ಹೋದದ್ದೇನೂ ಮಾಡಲಿಲ್ಲ ಎಂದಳು.

ಎಷ್ಟೋ ಜನರಿಗೆ ನಿಶ್ಚಿತ ಆದಾಯ ಇರುತ್ತದೆ. ಬೇಕಾದಷ್ಟು ಓದಿರುತ್ತಾರೆ. ಸಂಬಳವೂ ಚೆನ್ನಾಗಿಯೇ ಇರುತ್ತದೆ ಹೀಗಿದ್ದೂ ನಾಗಮ್ಮಳಿಗಿರುವ ಸ್ವಯಂ ಶಿಸ್ತು ಇಲ್ಲದೇ ಇರುವುದರಿಂದಲೇ ಅವರು ಮನೆಯನ್ನಾಗಲೀ, ನಿವೃತ್ತಿಗಾಗಿ ಏನಾದರೂ
ಯೋಜನೆಯನ್ನಾಗಲೀ ರೂಪಿಸಿಕೊಳ್ಳದೇ ಹೋಗುತ್ತಾರೆ. ಇಷ್ಟಂತೂ ನಿಜ ನಾವು ಉಳಿಸಿದರೆ ಅದು ನಮ್ಮನ್ನು ಕಷ್ಟ ಕಾಲದಲ್ಲಿ ಉಳಿಸುತ್ತದೆ.ಕಷ್ಟ ಕಾಲದಲ್ಲಿ ಯಾರ ಮುಂದೆ ಕೈ ಒಡ್ಡಬಾರದು ಎಂಬುದೇ ನಿಮ್ಮ ನಿರ್ಧಾರ ಆಗಿದ್ದರೆ, ಈಗ ಕೈ ಬಿಗಿ ಹಿಡಿದು ಖರ್ಚು ಮಾಡಲೇ ಬೇಕು.

Advertisement

– ಸುಧಾಶರ್ಮ ಚವತ್ತಿ

Advertisement

Udayavani is now on Telegram. Click here to join our channel and stay updated with the latest news.

Next