ಮುಂಬಯಿ, ಜು. 2: ಕೋವಿಡ್ ಸೋಂಕಿನ ಹಿನ್ನೆಲೆ ನಗರದಲ್ಲಿ ಹೆಚ್ಚುತ್ತಿರುವ ಸಾವಿನ ಪ್ರಕರಣಗಳನ್ನು ಕಡಿಮೆ ಮಾಡಲು ಮುಂಬಯಿ ಮನಪಾ “ಸೇವ್ ಲೈವ್ಸ್’ ಎಂಬ ಯೋಜನೆಯನ್ನು ರೂಪಿಸಿದೆ.
ಕೋವಿಡ್ ಹಿನ್ನೆಲೆ ಮುಂಬಯಿಯ ಸಾವಿನ ಪ್ರಮಾಣ ಜೂನ್ 30ರ ವೇಳೆಗೆ ಶೇ. 5.86ರಷ್ಟಿದೆ. ರಾಜ್ಯದ ಸರಾಸರಿ ಸಾವಿನ ಪ್ರಮಾಣ ಶೇ. 4.49ರಷ್ಟಿದ್ದು, ಇದು ದೇಶದ ಸರಾಸರಿ ಸಾವಿನ ಪ್ರಮಾಣ ಶೇ. 2.9ಕ್ಕಿಂತ ಅಧಿಕವಿದೆ ಎಂದು ಮಹಾರಾಷ್ಟ್ರ ಸರಕಾರದ ವೈದ್ಯಕೀಯ ಶಿಕ್ಷಣ ಮತ್ತು ಔಷಧ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸೇವ್ ಲೈವ್ಸ್ ಕಾರ್ಯತಂತ್ರವು ತೀವ್ರ ಸೋಂಕಿತರ ಮೇಲೆ ಹೆಚ್ಚಿನ ಮೇಲ್ವಿಚಾರಣೆಯನ್ನು ಮಾಡುತ್ತದೆ. ಇದರಲ್ಲಿ ಘಟಕದ ಮುಖ್ಯಸ್ಥ ಮತ್ತು ಆಸ್ಪತ್ರೆಯ ಮುಖ್ಯಸ್ಥರ ವೀಡಿಯೋ ಕಣ್ಗಾವಲೂ ಸೇರಿದೆ. ಕೋವಿಡ್ -19 ಸಾವಿನ ಪ್ರಕರಣಗಳಲ್ಲಿ ಲೆಕ್ಕಪರಿಶೋಧನೆ ನಡೆಯಲಿರುವುದಲ್ಲದೆ ಕಾರಣಗಳನ್ನು ನಿರ್ಧರಿಸಲು ವೀಡಿಯೋ ತುಣುಕನ್ನು ವಿಧಿವಿಜ್ಞಾನವಾಗಿ ಪರಿಶೀಲಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಾಗಿ ಮಧ್ಯಾಹ್ನ 1ರಿಂದ ಸಂಜೆ 5ರ ವರೆಗೆ ಹಲವಾರು ಸಾವುಗಳು ಸಂಭವಿಸಿವೆ ಎಂದು ಬಿಎಂಸಿ ಗಮನಿಸಿದೆ. ತೀವ್ರ ಸೋಂಕಿತರಿಗೆ ಆಮ್ಲಜನಕದ ಬೆಂಬಲದ ಸಂಪರ್ಕವನ್ನು ಕಡಿತಗೊಳಿಸಿದಾಗ ಮತ್ತು ಶೌಚಾಲಯಕ್ಕೆ ಹೋಗಲು ಬಿಟ್ಟಾಗ ಕುಸಿದು ಬಿದ್ದು ಸಾವನ್ನಪ್ಪಿದ ಪ್ರಕರಣಗಳು ಹೆಚ್ಚಿವೆ ಎಂದು ತಿಳಿಸಿದೆ.
ಸೇವ್ ಲೈವ್ಸ್ ಕಾರ್ಯತಂತ್ರದ ಭಾಗವಾಗಿ, ಮುಂಬಯಿ ಮಹಾನಗರ ಪಾಲಿಕೆಯು ಪ್ರತಿ ಹಾಸಿಗೆಗೆ ಒಂದು ಬೆಡ್‌ಪಾನ್ ಮತ್ತು ಹತ್ತಿರದ ಪ್ರತಿ ನಾಲ್ಕು ಹಾಸಿಗೆಗಳಿಗೆ ಒಂದು ಕಮೋಡ್ ಅನ್ನು ಇಡಲು ನಿರ್ಧರಿಸಿದೆ. ರಾತ್ರಿಯ ಸಮಯದಲ್ಲಿ ಶೌಚಾಲಯವನ್ನು ಬಳಸಲು ಬಯಸುವ ರೋಗಿಗಳೊಂದಿಗೆ ಸಹಕರಿಸುವಂತೆ ಎಲ್ಲ ಆರೋಗ್ಯ ಸಿಬಂದಿಗೆ ಸೂಚನೆ ನೀಡಲಾಗಿದೆ. ಔಷಧಿಗಳು, ಡೋಸೇಜ್, ಸಮಯ, ಆಹಾರ, ಇತ್ಯಾದಿಗಳಿಂದ ಆರೋಗ್ಯ ಸಿಬಂದಿ ಪ್ರತಿ ರೋಗಿಗೆ ವೈಯಕ್ತಿಕವಾಗಿ ಚೆಕ್ ಬಾಕ್ಸ್ ಗಳ ಮೂಲಕ ಸರಿಯಾದ ಪ್ರೋಟೋಕಾಲ್ ಅನ್ನು ನಿರ್ವಹಿಸಬೇಕು. ಸಂಬಂಧಪಟ್ಟ ರೋಗಿಯ ಚಿಕಿತ್ಸೆಯನ್ನು ನವೀಕರಿಸಬೇಕು ಎಂದು ಬಿಎಂಸಿ ಆದೇಶಿಸಿದೆ.
ಏಪ್ರಿಲ್ ಮಧ್ಯದಲ್ಲಿ ಮಹಾರಾಷ್ಟ್ರ ಸರಕಾರವು 9 ವೈದ್ಯರ ಕಾರ್ಯಪಡೆ ಸ್ಥಾಪಿಸಿ ರಾಜ್ಯದಲ್ಲಿ ಹೆಚ್ಚಿನ ಮಾರಣಾಂತಿಕ ಕಾರಣ ಗಳನ್ನು ಪರೀಕ್ಷಿಸಲು ಮತ್ತು ಅದನ್ನು ಕಡಿಮೆ ಮಾಡಲು ಕ್ರಮಗಳನ್ನು ಸೂಚಿಸಿದೆ. ಆ ಸಮಯದಲ್ಲಿ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ. 6 ಅನ್ನು ದಾಟಿದೆ ಎನ್ನಲಾಗಿದೆ.