Advertisement

ಇಂಧನ ಉಳಿತಾಯ ಮಾಡಿ ಆರ್ಬಿಟರ್‌ ಆಯಸ್ಸು ಹೆಚ್ಚಳ

01:37 AM Sep 12, 2019 | Team Udayavani |

ನವದೆಹಲಿ: ಸಾಮಾನ್ಯವಾಗಿ ಒಂದು ವರ್ಷ ಚಂದ್ರನ ಕಕ್ಷೆಯಲ್ಲಿ ಸುತ್ತುವ ನಿರೀಕ್ಷೆಯಿದ್ದ ಚಂದ್ರಯಾನ 2 ಆರ್ಬಿಟರ್‌ನ ಆಯಸ್ಸನ್ನು ಇಸ್ರೋ ವಿಜ್ಞಾನಿಗಳು 7 ವರ್ಷಗಳವರೆಗೆ ಹೆಚ್ಚಳ ಮಾಡಿದ್ದಾರೆ. ಆರ್ಬಿಟರ್‌ನಲ್ಲಿ ಇನ್ನೂ 500 ಕಿಲೋ ಇಂಧನ ಉಳಿದಿರುವುದರಿಂದಾಗಿ 7 ವರ್ಷ ಆರ್ಬಿಟರ್‌ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ.

Advertisement

ಭೂಮಿಯ ಕಕ್ಷೆಗೆ ಆರ್ಬಿಟರ್‌ ಅನ್ನು ಜಿಎಸ್‌ಎಲ್ವಿ ಕಳುಹಿಸಿದ ನಂತರ ಒಂದೊಂದೇ ಹಂತದಲ್ಲಿ ಕಕ್ಷೆ ಬದಲಿಸಿಕೊಂಡು ಚಂದ್ರನ ಕಕ್ಷೆಗೆ ತಲುಪಿದೆ. ಪ್ರತಿ ಬಾರಿ ಕಕ್ಷೆ ಬದಲಿಸುವಾಗಲೂ ಆರ್ಬಿಟರ್‌ನಲ್ಲಿ ಇರುವ ಇಂಧನವನ್ನೇ ಬಳಸಲಾಗಿದೆ. ಆದರೆ ಪ್ರತಿ ಬಾರಿಯೂ ಕನಿಷ್ಠ ಅಗತ್ಯ ಇಂಧನ ಬಳಸಲಾಗಿದೆ. ಅಲ್ಲದೆ, ಯಾವುದೇ ಸಮಸ್ಯೆಯಿಲ್ಲದೇ ಆರ್ಬಿಟರ್‌ ಚಂದ್ರನ ಕಕ್ಷೆ ಸೇರಿರುವುದರಿಂದ ಹೆಚ್ಚು ಇಂಧನ ಬಳಸುವ ಅಗತ್ಯ ಇಸ್ರೋ ವಿಜ್ಞಾನಿಗಳಿಗೆ ಉಂಟಾಗಿಲ್ಲ. ಉಡಾವಣೆಗೂ ಮುನ್ನ ಇದರಲ್ಲಿ 1697 ಕಿಲೋ ಇಂಧನವನ್ನು ತುಂಬಿಸಲಾಗಿತ್ತು. ಈಗ ಇದರಲ್ಲಿ ಸುಮಾರು 500 ಕಿಲೋ ಇಂಧನವಿದೆ. ಹೀಗಾಗಿ ಇದು ಒಟ್ಟು 7 ವರ್ಷಗಳವರೆಗೆ ಕೆಲಸ ಮಾಡಬಹುದು ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ.

ಸಂಪರ್ಕ ತಪ್ಪಿದ್ದು 400 ಮೀ. ದೂರದಲ್ಲಿ! ಸೆ.7ರಂದು ಚಂದ್ರಯಾನ 2 ಚಂದ್ರನ ಮೇಲೆ ಇಳಿಯುತ್ತಿದ್ದಾಗ ಸಂಪರ್ಕ ತಪ್ಪಿರುವುದು ತಿಳಿದೇ ಇದೆ. ಆದರೆ ಚಂದ್ರನಿಂದ 2.1 ಕಿಮೀ ಎತ್ತರದಲ್ಲಿರುವಾಗ ಇಸ್ರೋ ಸಂಪರ್ಕವನ್ನು ವಿಕ್ರಮ್‌ ಲ್ಯಾಂಡರ್‌ ಕಳೆದುಕೊಂಡಿತು ಎಂದು ಎಲ್ಲರೂ ಭಾವಿಸಿದ್ದಾರೆ. ವಾಸ್ತವವಾಗಿ ಲ್ಯಾಂಡರ್‌ ಸಂಪರ್ಕ ಕಳೆದುಕೊಂಡಿದ್ದು, 335 ಮೀ. ಎತ್ತರದಲ್ಲಿ ಇದ್ದಾಗ ಎಂಬುದು ಇಸ್ರೋ ಪ್ರಕಟಿಸಿರುವ ಇಸ್‌ಟ್ರಾಕ್‌ನ ಮಾನಿಟರುಗಳ ವರದಿ ಪರಿಶೀಲಿಸಿದಾಗ ತಿಳಿದುಬರುತ್ತದೆ. ಆದರೆ 2.1 ಕಿ.ಮೀ ದೂರದವರೆಗೂ ಎಲ್ಲವೂ ಸರಿ ಇತ್ತು. ನಂತರದಲ್ಲಿ ನಮ್ಮ ಸಂಪರ್ಕವನ್ನು ವಿಕ್ರಮ್‌ ಕಡಿದುಕೊಂಡಿತು ಎಂದು ಅದೇ ದಿನ ಇಸ್ರೋ ಮುಖ್ಯಸ್ಥ ಕೆ.ಶಿವನ್‌ ಹೇಳಿದ ಹಿನ್ನೆಲೆಯಲ್ಲಿ ಈ ಗೊಂದಲ ನಿರ್ಮಾಣವಾಗಿದೆ. ಮಾನಿಟರ್‌ನ ಚಿತ್ರಣ ಗಮನಿಸಿದರೆ, 2.1 ಕಿ.ಮೀವರೆಗೆ ಸರಿಯಾಗಿಯೇ ಸಾಗುತ್ತಿದ್ದ ಲ್ಯಾಂಡರ್‌ ಅಲ್ಲಿಂದ ಪಥದಲ್ಲಿ ವ್ಯತ್ಯಯ ತೋರಿಸಿದೆ. ಆದರೆ 335 ಮೀ. ಬಳಿ ಇದು ತನ್ನ ಸಂಪರ್ಕ ಕಡಿದುಕೊಂಡಿರುವುದು ತಿಳಿದು ಬರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next