ಮಡಿಕೇರಿ: ಯುವ ಜನಾಂಗ ಹೆಚ್ಚು ಉತ್ಸಾಹದಿಂದ ಭಾಗವಹಿಸಿ ಹಿಂದಿನ ಜಾನಪದ ಸಾಹಿತ್ಯವನ್ನು ಕರಗತ ಮಾಡಿಕೊಂಡು ಸಮಾಜಕ್ಕೆ ಪರಿಚಯಿಸುವ ಕೆಲಸವಾಗಬೇಕು ಹಾಗೂ ವಿದ್ಯಾರ್ಥಿ ದಿಶೆಯಲ್ಲಿ ಸಂಗೀತದ ಆಸಕ್ತಿ ಬೆಳಸಿಕೊಳ್ಳಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕುಶಾಲನಗರದ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಗಿರಿಜನ ಉಪ ಯೋಜನೆಯಡಿ ಗುರು ಶಿಷ್ಯ ಪರಂಪರೆ ತರಬೇತಿ ಮೂಲಕ ಸಂಗೀತ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತಮ ಯೋಜನೆಗಳ ಮೂಲಕ ಸಾಹಿತ್ಯ ಸಂಸ್ಕೃತಿಗೆ ಪೂರಕವಾಗಿ ಮನರಂಜನೆ ನೀಡುತ್ತಾ ಬರುತ್ತಿದೆ ಎಂದರು. ಶಿಕ್ಷಣದ ಜತೆಗೆ ಮೌಲ್ಯವರ್ಧಿತ ಜೀವನ ಮಟ್ಟ ಕಾಯ್ದುಕೊಳ್ಳಲು ನಾವು ಸಂಗೀತದ ಕಡೆಗೆ ಗಮನಹರಿಸಬೇಕು ಎಂದು ಸಾಗರ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಗ್ರಾಮೀಣ ಸೊಗಡಿನ ಜಾನಪದ ಕಲೆ, ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಕಲೆಯನ್ನು ಅಳವಡಿಸಿಕೊಂಡು ಕಲೆಯು ಒಂದು ಜೀವನದ ಅವಿಭಾಜ್ಯ ಅಂಗ ವಾಗಬೇಕೆಂದರು.
ಮುಖ್ಯ ಅತಿಥಿಯಾದ ಆಹಾರ ಸಂರಕ್ಷಣ ಅಭಿಯಾನದ ಸಂಚಾಲಕ ಎನ್.ಕೆ. ಮೋಹನ್‌ಕುಮಾರ್ ಮಾತನಾಡಿ, ಹಿಂದಿನ ಶಿಕ್ಷಣ ಬಹಳ ಕಷ್ಟದಾಯಕವಾಗಿದ್ದು, ನಾವೆಲ್ಲರೂ ಕಷ್ಟಪಟ್ಟು ಶಿಕ್ಷಣ ಪಡೆಯುತ್ತಿದ್ದು, ಓದಲು ಇಂದು ಅನೇಕ ಉತ್ತಮ ಸೌಕರ್ಯಗಳು ಇವೆ. ಅವುಗಳ ಸದುಪ ಯೋಗವಾಗಬೇಕೆಂದರು.
ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ವಾರ್ಡನ್ ಮಧು ಅವರು ಮಾತನಾಡಿ, ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅನೇಕ ಉತ್ತಮ ಗುಣಗಳನ್ನು ಅಳವಡಿಸಿ ಕೊಳ್ಳಬೇಕೆಂದರು. ಅದರಲ್ಲೂ ಸಾಂಸ್ಕೃತಿಕ ವಿಕಾಸ ಮೂಲಕ ತಮ್ಮ ಕಲೆಯನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ ಎಂದರು ಪ್ರಾಸ್ತಾವಿಕ ನುಡಿಯಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ ಸ್ವಾಗತಿಸಿ ವಂದಿಸಿದರು. ಗುರು-ಶಿಷ್ಯ ಪರಂಪರೆ ಕಾರ್ಯ ಕ್ರಮದ ಶಿಕ್ಷಕ ಷಡಾಕ್ಷರಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.