Advertisement
ಭಟ್ಕಳ ತಾಲೂಕಿನ ಹೆಬಳೆ ಗ್ರಾಪಂ ವ್ಯಾಪ್ತಿಯ ತೆಂಗಿನಗುಂಡಿ ಬಂದರಿನಲ್ಲಿ ನಿರ್ಮಿಸಿದ್ದ ವೀರ ಸಾವರ್ಕರ್ ಕಟ್ಟೆಯನ್ನು ಗ್ರಾಪಂ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿದ್ದರಿಂದ ಆಕ್ರೋಶ ವ್ಯಕ್ತವಾಗಿದ್ದು, ಮೊದಲಿದ್ದ ಸ್ಥಳದಲ್ಲೇ ಗ್ರಾಪಂ ಸದಸ್ಯರು, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಕಟ್ಟೆಯನ್ನು ಮರು ನಿರ್ಮಿಸಿದ್ದಾರೆ.
ಗ್ರಾಪಂ ಅಧಿಕಾರಿಗಳು ಜಾಮಿಯಾಬಾದ್ ರಸ್ತೆ ನಾಮಫಲಕ ತೆರವು ಮಾಡಲು ಒಪ್ಪದಿದ್ದಾಗ ಬಿಜೆಪಿ ಸದಸ್ಯರು ತಮ್ಮ ಕಾರ್ಯಕರ್ತರ ಜತೆಗೂಡಿ ತೆಂಗಿನಗುಂಡಿ ಬಂದರಿನಲ್ಲಿ ಪುನಃ ವೀರ ಸಾರ್ವಕರ್ ನಾಮಫಲಕ ಅಳವಡಿಸಲು ಕಟ್ಟೆ ಕಟ್ಟಲು ಮುಂದಾದರು. ಇದಕ್ಕೆ ಪೊಲೀಸರು ತಡೆಯೊಡ್ಡಿದರು. ಆಗ ಪೊಲೀಸರು ಹಾಗೂ ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮುಖಂಡ ಗೋವಿಂದ ನಾಯ್ಕ, ಶ್ರೀಕಾಂತ ನಾಯ್ಕ ಮತ್ತಿತರರು ಬಿಜೆಪಿ ಗ್ರಾಪಂ ಸದಸ್ಯರು ಲಿಖೀತವಾಗಿ ನೀಡಿರುವ 6 ಅನ ಧಿಕೃತ ನಾಮ ಫಲಕವವನ್ನು ಒಂದು ವಾರದ ಒಳಗೆ ಗ್ರಾಪಂ ಅಧಿಕಾರಿಗಳು ತೆರವು ಮಾಡಿದರೆ ನಾವು ಸ್ವಯಂ ಪ್ರೇರಣೆಯಿಂದ ಈ ಕಟ್ಟೆಯನ್ನೂ ತೆರವುಗೊಳಿಸುತ್ತೇವೆ. ಆದರೆ ಅನಧಿಕೃತ ನಾಮಫಲಕ ತೆರವು ಮಾಡದೇ ಹೋದಲ್ಲಿ ಇದೇ ಕಟ್ಟೆಯಲ್ಲಿ ವೀರ ಸಾರ್ವಕರ್ ನಾಮಫಲಕ ಮರು ಸ್ಥಾಪಿಸುವುದಾಗಿ ತಿಳಿಸಿದರು. ಏನಿದು ವಿವಾದ?
ತೆಂಗಿನಗುಂಡಿ ಬಂದರಿನಲ್ಲಿ 2022ರಲ್ಲಿ ಸಾರ್ವಜನಿಕರು ನೀಡಿದ ಮನವಿ ಮೇರೆಗೆ ಗ್ರಾಪಂನಲ್ಲಿ ಈ ಬಗ್ಗೆ ಚರ್ಚಿಸಿ ಅನಂತರ ಧ್ವಜಕಟ್ಟೆ ನಿರ್ಮಿಸಿ ವೀರ ಸಾವರ್ಕರ್ ಫಲಕ ಅಳವಡಿಸಲಾಗಿತ್ತು. ಆದರೆ ಜ.27ರಂದು ಗ್ರಾಪಂ ಅಧಿಕಾರಿಗಳು ಯಾರಿಗೂ ಮಾಹಿತಿ ನೀಡದೆ ಈ ಕಟ್ಟೆ ತೆರವುಗೊಳಿಸಿದ್ದಾರೆ. ಈ ಬಗ್ಗೆ ಗ್ರಾಪಂ ಪಿಡಿಒ ಸೇರಿ ಅಧಿಕಾರಿಗಳನ್ನು ಕೇಳಿದರೆ ಸರಿಯಾದ ಮಾಹಿತಿ ನೀಡಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಪಂ ಸದಸ್ಯರು, ಹಿಂದೂ ಸಂಘಟನೆಗಳ ಪ್ರಮುಖರು, ಬಿಜೆಪಿ ಕಾರ್ಯಕರ್ತರು ಮಂಗಳವಾರ ಗ್ರಾಪಂ ಎದುರು ಧರಣಿ ನಡೆಸಿದರು. ಇಲ್ಲಿರುವ ಧ್ವಜಕಟ್ಟೆ ತೆರವುಗೊಳಿಸುವಂತೆ ಯಾರೂ ಮನವಿ ನೀಡಿಲ್ಲ. ಆದರೂ ಪಿಡಿಒ ಒತ್ತಡಕ್ಕೆ ಮಣಿದು ಏಕಾಏಕಿ ಕಟ್ಟೆ ತೆರವುಗೊಳಿಸಿದ್ದಾರೆ. ಗ್ರಾಪಂ ಅಧ್ಯಕ್ಷರು, ಸದಸ್ಯರ ಗಮನಕ್ಕೆ ತಾರದೆ ಕಟ್ಟೆ ತೆರವುಗೊಳಿಸಿದ್ದು ಸರಿಯಲ್ಲ. ಹೆಬಳೆ ಗ್ರಾಪಂ ವ್ಯಾಪ್ತಿಯಲ್ಲಿ ಇದೇ ರೀತಿ ಅನೇಕ ನಾಮಫಲಕಗಳಿವೆ. ಅದನ್ನೂ ತೆರವುಗೊಳಿಸಲಿ ಅಥವಾ ಮೊದಲಿದ್ದ ಸ್ಥಳದಲ್ಲೇ ಕಟ್ಟೆ ನಿರ್ಮಿಸಲಿ ಎಂದು ಪಟ್ಟು ಹಿಡಿದರು.