Advertisement

ಕೃಷಿ ಅಧಿಕಾರಿ ವರ್ತನೆಗೆ ಸದಸ್ಯರ ಆಕ್ರೋಶ

11:04 AM Feb 13, 2019 | Team Udayavani |

ಸವಣೂರು: ಕೃಷಿ ಹೊಂಡದ ಫಲಾನುಭವಿಗಳ ಪಟ್ಟಿಯನ್ನು ಸಾಮಾನ್ಯ ಸಭೆಗೆ ತರುವಂತೆ ಹಿಂದಿನ ಕೆಡಿಪಿ ಸಭೆಯಲ್ಲಿ ತಾಕೀತು ಮಾಡಿದ್ದರೂ ಏಕೆ ತಂದಿಲ್ಲ ಎಂದು ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ಕೃಷಿ ಇಲಾಖೆ ಅಧಿಕಾರಿ ಪ್ರದೀಪ ಕಿವಟೆ ಅವರಿಗೆ ತರಾಟೆ ತೆಗೆದುಕೊಂಡರು.

Advertisement

ಪಟ್ಟಣದ ತಾಪಂ ಕಚೇರಿ ಸಭಾಭವನದಲ್ಲಿ ಮಂಗಳವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ವರದಿ ಓದಲು ಮುಂದಾದ ಕೃಷಿ ಇಲಾಖೆ ಅಧಿಕಾರಿಗೆ ಮಾಹಿತಿ ತೆಗೆದುಕೊಂಡು ಬರಲು ಕಟ್ಟುನಿಟ್ಟಾಗಿ ಸೂಚನೆ ನೀಡಿದರೂ, ಮಾಹಿತಿ ಇಲ್ಲದೇ ಏಕೆ ಬರುತ್ತೀರಿ? ತಾಪಂ ಸಭೆ ಎಂದರೆ ನಿಮಗೆ ಉಡಾಫೆ ಮಾತಾಗಿದೆ. ನೀವು ಸಭೆಗೆ ತಲೆನೋವಾಗಿದ್ದೀರಿ ಎಂದು ಆಕೋಶ ವ್ಯಕ್ತಪಡಿಸಿದರು. ಅಧಿಕಾರಿ ಮತ್ತೂ ಆಯ್ತು ಸರ್‌, ತಂದು ತೋರಿಸುತ್ತೇನೆ ಎಂದು ಉದಾಸೀನದ ಉತ್ತರ ನೀಡಲು ಮುಂದಾದ ಕೂಡಲೇ ಗರಂ ಆದ ಸದಸ್ಯ ಬಸವರಾಜ ಕೋಳಿವಾಡ, ನಿಮಗೆ ಬೇಕಾದ ಫಲಾನುಭವಿಗಳನ್ನು ಆಯ್ಕೆಗೊಳಿಸಿದ್ದೀರಿ, ಅದಕ್ಕೆ ನೀವು ಪಟ್ಟಿ ತಂದಿಲ್ಲ. ನಿಮ್ಮಿಂದಾಗಿ ಎಷ್ಟೋ ರೈತರು ಯೋಜನೆಯ ಪ್ರಯೋಜನದಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಎಷ್ಟೇ ಹೇಳಿದರೂ ಪ್ರತಿ ಸಭೆಗೂ ಮಾಹಿತಿ ಇಲ್ಲದೇ ಹಾಜರಾಗುವ ಮೂಲಕ ಸಭೆಗೆ ಅವಮಾನ ಮಾಡುತ್ತಿದ್ದಾರೆ. ಈ ಕುರಿತು ಅವರ ಮೇಲೆ ಕ್ರಮ ಕೈಗೊಳ್ಳಲು ಅಧ್ಯಕ್ಷರ ಅಪ್ಪಣೆಯ ಮೇರೆಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ತೋಟಗಾರಿಕಾ ಇಲಾಖೆ ಅಧಿಕಾರಿಗೆ ತಾಪಂ ಅಧ್ಯಕ್ಷ ತೆಂಗಿನ ಸಸಿಗಳ ವಿತರಣೆಗೆ ಫಲಾನುಭವಿಗಳನ್ನು ಆಯ್ಕೆ ಮಾಡದೇ ಮುಂಚಿತವಾಗಿ ಬಿಲ್‌ ತಯಾರಿಸಿ ಇಲಾಖೆಗೆ ಹೇಗೆ ಕಳುಹಿಸಿಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ಪ್ರಶ್ನೆಗೆ ಉತ್ತರಿಸಲಾಗದೇ ಅಧಿಕಾರಿ ಸುಮ್ಮನೆ ನಿಂತುಕೊಂಡರು. ಉಪಾಧ್ಯಕ್ಷೆ ಜಯಶೀಲ ರೊಟ್ಟಿಗವಾಡ ಮಾತನಾಡಿ, ಒಳ್ಳೆಯ ಸಸಿಗಳನ್ನು ತರಿಸಿ ವಿತರಣೆ ಮಾಡುವಂತೆ ಸೂಚನೆ ನೀಡಿದರು.

Advertisement

ವಲಯ ಅರಣ್ಯ ಅಧಿಕಾರಿ ವರದಿ ನೀಡಿ 2018-19 ನೇ ಸಾಲಿಗೆ ಎಸ್‌ಸಿಪಿ ಹಾಗೂ ಎಸ್‌ಟಿಪಿ ಯೋಜನೆಯಡಿ ಸವಣೂರು ತಾಲೂಕಿನ ಅರಣ್ಯಕ್ಕೆ ಹೊಂದಿದ ಅಂಚಿನ ಹಳ್ಳಿಗಳ ಫಲಾನುಭವಿಗಳಿಗೆ ಎಲ್‌ಪಿ ಗ್ಯಾಸ್‌ ವಿತರಣೆ ಕಾರ್ಯವಿದ್ದು, ಫಲಾನುಭವಿಗಳ ಆಯ್ಕೆಗಾಗಿ ಪಿಡಿಒಗಳಿಗೆ ಪತ್ರ ಬರೆಯಲಾಗಿದೆ ಎಂದರು. ಇದಕ್ಕೆ ತಾಪಂ ಅಧ್ಯಕ್ಷ ಪ್ರತಿಕ್ರಿಯೆ ನೀಡಿ, ತಾಪಂನಿಂದ ಆಯ್ಕೆಗೊಳಿಸಿದ ಫಲಾನುಭವಿಗಳಿಗೆ ನೀಡುವಂತೆ ಠರಾವು ಮಾಡಲು ಸೂಚಿಸಿದರು. ಇದಕ್ಕುತ್ತರಿಸಿದ ಅಧಿಕಾರಿ, ಇದನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದಾಗ, ಕೋಪಗೊಂಡ ಅಧ್ಯಕ್ಷ, ಹಾಗಾದರೆ, ನೀವೇಕೆ ಸಭೆಗೆ ಬಂದಿದ್ದೀರಿ? ಅವರನೇ ಕಳುಹಿಸಿ ಎಂದು ತರಾಟೆ ತೆಗೆದುಕೊಂಡರು.

ಸಹಕಾರ ಸಂಘಗಳ ರಾಜ್ಯ ಯೋಜನೆಯಡಿ ಸಂಘಗಳ ಪದಾಧಿಕಾರಿಗಳು ನೂತನ ಷೇರುದಾರರನ್ನಾಗಿ ಎಸ್‌ಸಿ, ಎಸ್‌ಟಿ ಹಾಗೂ ಅಲ್ಪ ಸಂಖ್ಯಾತರು ಸೇರಿದಂತೆ ವಿವಿಧ ಜನರನ್ನು ನೋಂದಾಯಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಹಕಾರ ಇಲಾಖೆಯ ಅಧಿಕಾರಿ ಎಸ್‌.ಬಿ. ಉಪ್ಪಿನ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ತಾಪಂ ಅಧ್ಯಕ್ಷ ಸುಬ್ಬಣ್ಣನವರ, ನೀವು ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ಯಾವ ಸಹಕಾರ ಸಂಘದವರು ಈ ಕುರಿತು ಆಕ್ಷೇಪ ವ್ಯಕ್ತ ಪಡಿಸುತ್ತಾರೋ ಅಂತವರ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಿಸಿ ನಾವು ನಿಮ್ಮೊಂದಿಗೆ ಬರುತ್ತೇವೆ ಎಂದರು.

ನಂತರ ಸಹಕಾರ ಸಂಘಗಳ ರಾಜ್ಯ ಯೋಜನೆಯಡಿ 2018-19ನೇ ಸಾಲಿನಲ್ಲಿ ತಾಲೂಕಿನ ವಿವಿಧ ಸಹಕಾರ ಸಂಘಗಳಲ್ಲಿ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು, ವಿಕಲಚೇತನರು ಸೇರಿದಂತೆ ವಿವಿಧ ಜಾತಿ, ಜನಾಂಗ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಹೊಸದಾಗಿ ಷೇರುದಾರರನ್ನಾಗಿ ನೋಂದಾಯಿಸಲು 626 ಜನರ ವಾರ್ಷಿಕ ಗುರಿಗೆ ಅನುಗುಣವಾಗಿ ಎಲ್ಲ ಸಹಕಾರಿ ಸಂಘಗಳಿಗೆ ಸಮನಾಗಿ ಹಂಚುವ ಮೂಲಕ ಆಯಾ ಗ್ರಾಮದಲ್ಲಿರುವ ವಿವಿಧ ಸಹಕಾರ ಸಂಘಗಳ ಸದಸ್ಯರನ್ನಾಗಿ ಆಯ್ಕೆಗೊಳಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಸಭೆಗೆ ವರದಿ ಸಲ್ಲಿಸಿದರು. ತಾಪಂ ಇಒ ಎಸ್‌ಎಂಡಿ ಇಸ್ಮಾಯಿಲ್‌, ತಾಪಂ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next