Advertisement

ಸತ್ಯದಿಂದ ನಡೆಯುವುದೇ ಧರ್ಮ

11:26 AM Mar 21, 2019 | |

ಸ‌ವಣೂರು: ಧರ್ಮ ಪ್ರತಿಯೊಂದು ಜೀವರಾಶಿಗೆ ಸಂಬಂಧಿಸಿದ್ದು. ಧರ್ಮ ಯಾವುದೇ ಗ್ರಂಥ ಪುರಾಣವಲ್ಲ; ಅದು ದೈನಂದಿನ ಪ್ರತಿಯೊಬ್ಬನ ಕರ್ತವ್ಯ. ವ್ಯಕ್ತಿ ಸತ್ಯದಿಂದ ನಡೆದು ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಾನೋ ಅದೇ ಧರ್ಮ ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ರಾಜದೇಶಿಕೇಂದ್ರ ಭಗವತ್ಪಾದಂಗಳವರು ತಿಳಿಸಿದರು. ಜಗದ್ಗುರು ರೇಣುಕ ಮಂದಿರದಲ್ಲಿ ಬುಧವಾರ ಜರುಗಿದ ಜಗದ್ಗುರು ರೇಣುಕಾಚಾರ್ಯರ ಜಯಂತಿ, ಯುಗಮಾನೋತ್ಸವ, ಸಾಮೂಹಿಕ ವಿವಾಹ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

Advertisement

ಧರ್ಮ ವಿಷಯದಲ್ಲಿ ಗೊಂದಲ ಬೇಡ: ವಿದ್ಯಾವಂತರಾದವರಲ್ಲಿ ಮತ್ತೊಬ್ಬರನ್ನು  ಗೌರವಿಸುವಂತ ಗುಣಗಳಿರಬೇಕೆ ಹೊರತು ತೆಗಳುವಂತ ಗುಣಗಳು ಇರಬಾರದು. ಧರ್ಮದ ವಿಚಾರ ಬಳಸಿಕೊಂಡು ಗೊಂದಲ ಸೃಷ್ಟಿಸದೇ ವೀರಶೈವ ಲಿಂಗಾಯತ ಒಂದೇ, ವಿಶ್ವವೇ ನಮ್ಮ ಬಂಧು-ಬಳಗ ಎನ್ನುವ ಮನೋಭಾವನೆ ಬೆಳೆಸಿಕೊಳ್ಳಬೇಕು. ವೀರಶೈವ ಲಿಂಗಾಯತ ಧರ್ಮ ಪ್ರತ್ಯೇಕತೆ ವಿಷಯ ಮುಗಿದ ಅಧ್ಯಾಯ. ಅದರತ್ತ ಗಮನ ಕೊಡದಿರುವಂತಹ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ಥಿತಪ್ರಜ್ಞೆಯಿಂದ ಜೀವನ ನಡೆಸಿ: ಸತಿ-ಪತಿಗಳು ಸ್ಥಿತಪ್ರಜ್ಞೆಯಿಂದ ಜೀವನ ನಡೆಸಿದಲ್ಲಿ ಸಮರಸ
ಬದುಕು ಕಾಣಲು ಸಾಧ್ಯ. ಸಾಮೂಹಿಕ ವಿವಾಹದಲ್ಲಿ 11 ಜೊತೆ ವಿವಾಹ ಮಾಡಿ ಬಡವರ ಸುಮಾರು 22 ಲಕ್ಷ ಹಣ ಉಳಿಸಿದ ಕೀರ್ತಿ ಸ್ಥಳೀಯ ಸೇವಾ ಸಮಿತಿಗೆ ಸಲ್ಲುತ್ತದೆ ಎಂದರು. ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ದಂಪತಿಗಳು ಪರಸ್ಪರ ಹೊಂದಾಣಿಕೆ ಮನೋಭಾವನೆಯಿಂದ ಸುಖಕರ ಜೀವನ ನಡೆಸಬೇಕು ಎಂದರು.

ಬಂಕಾಪುರ ಅರಳಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು, ಗಂಜಿಗಟ್ಟಿಯ ಶಿವಲಿಂಗೇಶ್ವರ ಶಿವಾಚಾರ್ಯರು, ಹಿರೇಮಣಕಟ್ಟಿಯ ವಿಶ್ವಾರಾಧ್ಯ ಶಿವಾಚಾರ್ಯರು, ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯರು, ಕೂಡಲದ ಗುರುಮಹೇಶ್ವರ ಶಿವಾಚಾರ್ಯರು, ಹತ್ತಿಮತ್ತೂರಿನ ನಿಜಗುಣ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ರೇಣುಕಚಾರ್ಯ ಮಂದಿರದ ಸೇವಾ ಸಮಿತಿ ಅಧ್ಯಕ್ಷ ರವತಪ್ಪ ಬಿಕ್ಕಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಕೆಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಸ್‌. ವೈ. ಪಾಟೀಲ, ಎಪಿಎಂಸಿ ನಿರ್ದೇಶಕ ಮಹೇಶ ಸಾಲಿಮಠ, ಪುರಸಭೆ ಸದಸ್ಯ ಮಹೇಶ ಮುದಗಲ್‌, ಗಣ್ಯ ವರ್ತಕರಾದ ಪುಟ್ಟಯ್ಯ ಕಲ್ಮಠ, ಸುಭಾಸ ಗಡೆಪ್ಪನವರ, ಕರವೇ ಅಧ್ಯಕ್ಷ ಪರಶುರಾಮ ಈಳಗೇರ, ನಾಗರಾಜ ಬಾಳಿಕಾಯಿ ಇದ್ದರು. ಶಿಕ್ಷಕ ಬಸವರಾಜ ಚಳ್ಳಾಳ ಹಾಗೂ ಪ್ರವೀಣ ಚರಂತಿಮಠ ಕಾರ್ಯಕ್ರಮ ನಿರ್ವಹಿಸಿದರು.

Advertisement

ಮೆರವಣಿಗೆ
ಬುಧವಾರ ಪ್ರಾಥಃಕಾಲ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯ ಉತ್ಸವ ಹಾಗೂ ಉಜ್ಜಯಿನಿ ಜಗದ್ಗುರುಗಳ ಮೆರವಣಿಗೆ ಮತ್ತು 108 ಪೂರ್ಣಕುಂಭ ಮೇಳ ಪಟ್ಟಣದ ಬೀದಿಗಳಲ್ಲಿ ಸಂಚರಿಸಿ ವಾದ್ಯಗಳೊಂದಿಗೆ ರೇಣುಕಾಚಾರ್ಯ ಮಂದಿರ ತಲುಪಿತು. ನಂತರ ನಡೆದ ಸಾಮೂಹಿಕ ವಿವಾಹದಲ್ಲಿ 11 ನವ ದಂಪತಿ ಹೊಸ ಜೀವನಕ್ಕೆ ಕಾಲಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next