Advertisement
ಸವಣೂರು ತಾಲೂಕು ಪಂಚಾಯತ್ ಕಾರ್ಯಾಲಯದ ಸಭಾಭವನದಲ್ಲಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ, ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಬರಗಾಲನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಅನುದಾನದ ಕೊರತೆಯಿಲ್ಲ. ಕುಡಿಯುವ ನೀರಿನ ಸಮಸ್ಯೆ ಇರುವ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಆಳಗೊಳಿಸುವುದು ಮತ್ತು ಕೊಳವೆ ಬಾವಿಗಳನ್ನು ಕೊರೆಯಿಸಿ ಕಾರ್ಯ ಕೈಗೊಳ್ಳುವ ಮೂಲಕ ಎಲ್ಲ ರೀತಿಯಿಂದ ಬರಗಾಲ ಸಮರ್ಪಕವಾಗಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದರು.
Related Articles
Advertisement
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ ಕಿವಟೆ ಇಲಾಖೆ ಪ್ರಗತಿ ವಿವರಿಸುತ್ತಿದ್ದಂತೆ ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ಮಧ್ಯ ಪ್ರವೇಶಿಸಿ, ಈ ಅಧಿಕಾರಿಗೆ ಏನು ಮಾಹಿತಿಯೇ ಇರುವುದಿಲ್ಲ. ಪ್ರತಿ ಸಭೆಯಲ್ಲಿ ಎಸ್‌ಸಿ, ಎಸ್‌ಟಿ ಫಲಾನುಭವಿಗಳ ಮಾಹಿತಿ ಕೇಳಿದರೂ ಏನು ಗೊತ್ತಿಲ್ಲ. ಆಮೇಲೆ ಕೊಡುತ್ತೇನೆ ಎಂದು ಹೇಳುತ್ತಾರೆ. ಇಲಾಖೆ ಜಿಲ್ಲಾ ಅಧಿಕಾರಿಗಳು ಹೇಳಿದರೂ ಮಾಹಿತಿ ನೀಡಿಲ್ಲ. ಇಂತಹ ಅ ಧಿಕಾರಿ ನಮಗೆ ಬೇಡ; ಬೇರೆ ಕಡೆ ಹಾಕಿಸಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಜಯಶೀಲಾ ರೊಟ್ಟಿಗವಾಡ ಧ್ವನಿಗೂಡಿಸಿ ಈ ಅಧಿಕಾರಿ ಯಾವುದೇ ಗ್ರಾಮಸಭೆಗಳಿಗೆ ಬರುವುದಿಲ್ಲ. ಸರ್ಕಾರದ ಯೋಜನೆಗಳ ಮಾಹಿತಿಗಳು ರೈತರಿಗೆ ಗೊತ್ತಾಗುತ್ತಿಲ್ಲ ಎಂದು ದೂರಿದರು.
ತಾಪಂ ಅಧ್ಯಕ್ಷರನ್ನು ಸಮಾಧಾನ ಪಡಿಸಿದ ಜಿಪಂ ಅಧ್ಯಕ್ಷರು, ‘ಯಾಕಪ್ಪ, ಸರ್ಕಾರದ ಯೋಜನೆಗಳ ಮತ್ತು ಫಲಾನುಭವಿಗಳ ಮಾಹಿತಿ ನೀಡಲಿಕ್ಕೆ ಏನು ತೊಂದರೆ’ ಎಂದು ತರಾಟೆ ತೆಗೆದುಕೊಂಡರು. ತಾಪಂ ಅಧ್ಯಕ್ಷರಿಗೇ ಮಾಹಿತಿ ನೀಡುತ್ತಿಲ್ಲವೆಂದರೆ ಇನ್ನು ಸಾಮಾನ್ಯ ಜನರಿಗೆ ಏನು ಮಾಹಿತಿ ನೀಡುವಿರಿ ಎಂದು ಪ್ರಶ್ನಿಸಿದರು. ಅಧ್ಯಕ್ಷರು, ಸದಸ್ಯರಿಗೆ ಸರ್ಕಾರದ ಅನುದಾನ ಮತ್ತು ಫಲಾನುಭವಿಗಳ ಮಾಹಿತಿ ನೀಡುವಂತೆ ಮತ್ತು ಎಂಜಿಎನ್‌ಆರ್‌ಇಜಿಎ ಯೋಜನೆಯಡಿ ಚೆಕ್ ಡ್ಯಾಂಗಳನ್ನು ಕಡ್ಡಾಯವಾಗಿ ನಿರ್ಮಿಸಲು ಸೂಚಿಸಿದರು.
ಶಿಕ್ಷಣ ಇಲಾಖೆಯ ಶಾಲಾ ಕೊಠಡಿಗಳ ನಿರ್ಮಾಣ ಮತ್ತು ಕೊಠಡಿಗಳ ದುರಸ್ತಿ ಕಾಮಗಾರಿಗಳು ಸರಿಯಾಗಿ ಆಗುತ್ತಿರುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಶೀಲಿಸಬೇಕು ಎಂದು ಹೇಳಿದರು. ಜಿಪಂ ಮುಖ್ಯ ಲೆಕ್ಕಾಧಿಕಾರಿ ಜಾಫರ್‌ಷರೀಫ್ ಸುತಾರ ದುರಸ್ತಿ ಹಂತದಲ್ಲಿರುವ ಶಾಲಾ ಕೊಠಡಿಗಳ ಮಾಹಿತಿ ನೀಡುವ ಜೊತೆಗೆ ತಾಲೂಕಿನ ಗ್ರಾಪಂ ವ್ಯಾಪ್ತಿಯ ಶಾಲೆಗಳಲ್ಲಿ ಅವಶ್ಯವಿರುವ ಶೌಚಾಲಯಗಳ ನಿರ್ಮಾಣಕ್ಕೆ ಪ್ರಾಸ್ತಾವನೆ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ರೇಷ್ಮೆ ಇಲಾಖೆ ಅಧಿಕಾರಿ ನವಲಗುಂದ ಅವರು ಇಲಾಖೆ ಪ್ರಗತಿ ಮಾಹಿತಿ ನೀಡುತ್ತಿದ್ದಂತೆ ಜಿಪಂ ಸದಸ್ಯ ರಮೇಶ ದುಗ್ಗತ್ತಿ ಮಧ್ಯ ಪ್ರವೇಶಿಸಿ, ಏನ್ರಿ ನೀವು ಕೈ ಬರಹದ ಮಾಹಿತಿ ನೀಡುತ್ತಿದ್ದೀರಿ, ನಿಮ್ಮಲ್ಲಿ ಕಂಪ್ಯೂಟರ್ ವ್ಯವಸ್ಥೆ ಇಲ್ಲವೇ? ಎಂದು ಅ ಧಿಕಾರಿಯನ್ನು ತರಾಟೆ ತೆಗೆದುಕೊಂಡರು. ಅದಕ್ಕೆ ಉತ್ತರಿಸಿದ ಅಧಿಕಾರಿ ಸರ್, ಇಲಾಖೆಯಲ್ಲಿ ಕಂಪ್ಯೂಟರ್ ವ್ಯವಸ್ಥೆ ಇಲ್ಲ ಎಂದು ಉತ್ತರಿಸಿದರು. ಇದಕ್ಕೆ ಆಕ್ರೋಶಗೊಂಡ ಸದಸ್ಯ, ತಾಪಂ ಇಲಾಖೆಯಲ್ಲಿ ಕುಳಿತು ಕಂಪ್ಯೂಟರ್ ಮಾಹಿತಿ ತಯಾರಿಸಲೂ ಆಗುವುದಿಲ್ಲವೇ ಎಂದು ಗರಂ ಆದರು. ಜಿಪಂ ಮುಖ್ಯ ಲೆಕ್ಕಾಧಿಕಾರಿ ಜಾಫರ್‌ಷರೀಫ್ ಸುತಾರಿ ಮಧ್ಯ ಪ್ರವೇಶಿಸಿ ನಿಮ್ಮ ಇಲಾಖೆಯಲ್ಲಿ ಸಿಬ್ಬಂದಿಗಳ ಸಂಬಳವನ್ನೂ ಕೈ ಬರಹದ ಮೂಲಕವೇ ಮಾಡುತ್ತೀರಾ ಎಂದು ತರಾಟೆ ತೆಗೆದುಕೊಂಡು, ನಂತರ ನರೇಗಾ ಅನುದಾನದಲ್ಲಿ ಕಂಪ್ಯೂಟರ್ ನೀಡಲು ಅವಕಾಶವಿದೆ. ಆ ಕುರಿತು ಇಲಾಖೆಗೆ ಪ್ರಸ್ತಾವನೆ ಕಳುಹಿಸಿಕೊಡಿ ಎಂದು ಸೂಚನೆ ನೀಡಿದರು.
ವಿವಿಧ ಇಲಾಖೆ ಅಧಿಕಾರಿಗಳು ಸಭೆಗೆ ವರದಿ ಸಲ್ಲಿಸಿದರು. ತಾಪಂ ಇಒ ಎಸ್‌ಎಂಡಿ ಇಸ್ಮಾಯಿಲ್, ಇಡಿ ಸದಾನಂದ ಅಮರಾಪೂರ, ಜಿಪಂ ಸದಸ್ಯೆ ನೀಲವ್ವ ಚವ್ಹಾಣ ಇದ್ದರು.