ಸವಣೂರು: ಗಡಿ ಕಾಯುವ ಯೋಧ, ಅನ್ನ ನೀಡುವ ರೈತ ಇಬ್ಬರೂ ದೇಶದ ಎರಡು ಕಣ್ಣುಗಳು. ಇವರನ್ನು ಸದಾ ಸ್ಮರಿಸುವ ಮೂಲಕ ಗೌರವಿಸುವುದು ಪ್ರತಿಯೊಬ್ಬ ದೇಶಾಭಿಮಾನಿಯ ಕರ್ತವ್ಯವಾಗಬೇಕು ಎಂದು ಜೆಸಿಐ ವಲಯ ತರಬೇತುದಾರ ಜೆಸಿ ವಿದ್ಯಾಧರ ಕುತನಿ ತಿಳಿಸಿದರು.
ಪಟ್ಟಣದ ಹಾವಣಗಿ ಪ್ಲಾಟ್‌ನಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚಿಗೆ ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ಸೆಲ್ಯೂಟ್-ಟು-ಸೈಲೆಂಟ್ ವರ್ಕರ್ ಗೌರವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಯೋಧರ ಪತ್ನಿಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶ ಕಾಯುವ ಸಲುವಾಗಿ ತಮ್ಮ ವೈಯಕ್ತಿಕ ಜೀವನವನ್ನೇ ಬಲಿಕೊಟ್ಟು, ನಿಸ್ವಾರ್ಥ ಸೇವೆ ಮಾಡುವ ಮೂಲಕ ಯಾವುದೇ ಪ್ರಚಾರಕ್ಕೆ ಮುಂದಾಗದ ಇಂತಹ ವ್ಯಕ್ತಿಗಳು ನಮ್ಮ ದೇಶದ ಹೆಮ್ಮೆ. ಅಂತಹವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವ ಕೆಲಸವನ್ನು ಜೆಸಿಐ ಸಂಸ್ಥೆ ಪ್ರತಿ ತಿಂಗಳು ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಲ್ಪಾ ಹಿರೇಮಠ, ದೇಶ ಸೇವೆ ಮಾಡುವ ಯೋಧರ ಬಾಳ ಸಂಗಾತಿಯಾಗಿ ಜೀವನ ನಡೆಸುವುದು ಆ ಮಹಿಳೆಯ ಪೂರ್ವಜನ್ಮದ ಪುಣ್ಯ. ಅಂತಹ ಗಂಡನ ಜೊತೆಗೆ ಪರೋಕ್ಷವಾಗಿ ದೇಶದ ಸೇವೆ ಮಾಡುವಂತಹ ಸುಸಂದರ್ಭ ಎಲ್ಲರಿಗೂ ದೊರೆಯಲು ಸಾಧ್ಯವಿಲ್ಲ. ಅದಕ್ಕೆ ದೈವ ಕೃಪೆಯೂ ಕಾರಣವಾಗಿದೆ. ಯೋಧರು ಎಂದಾಕ್ಷಣ ಮಗಳನ್ನು ಮದುವೆ ಮಾಡಲು ಪಾಲಕರು ಹಿಂದೇಟು ಹಾಕದೆ ಶುಭ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷ ಜೆಸಿ ಬಾಪೂಗೌಡ ಕೊಪ್ಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯೋಧರ ಪತ್ನಿಯರಾದ ಪ್ರಿಯದರ್ಶಿನಿ ಬಂಡಾರಿ, ಸುಲೋಚನಾ ಚಾಕಲಬ್ಬಿ, ಶಿಲ್ಪಾ ಹೊಸಮಠ, ಮಲ್ಲಮ್ಮ ಲಮಾಣಿ ಅವರನ್ನು ಸನ್ಮಾನಿಸಲಾಯಿತು.
ಬಿಎಸ್‌ಎಫ್ ಯೋಧ ಯಲ್ಲಪ್ಪ ಬಂಡಾರಿ, ಜೆಸಿಐ ಪದಾಧಿಕಾರಿಗಳಾದ ಎಸ್.ಬಿ.ಪಾಟೀಲ, ಪ್ರಕಾಶ ಜಮಾದರ, ಗಣೇಶಗೌಡ ಪಾಟೀಲ, ಕವಿತಾ ಬಿಕ್ಕಣ್ಣವರ, ತೇಜಸ್ವಿನಿ ಕೊಂಡಿ, ಪ್ರೇಮಾ ಚಳ್ಳಾಳ, ಲಕ್ಷ್ಮೀ ಗುಡ್ಡಣ್ಣವರ, ಲತಾ ಅಪ್ಪಣ್ಣವರ ಹಾಗೂ ಇತರರು ಪಾಲ್ಗೊಂಡಿದ್ದರು.