ವಿಜಯಪುರ: ಬಿಜೆಪಿ ನಾಯಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ ತೋರಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ನಿಗದಿತ ಕಾರ್ಯಕ್ರಮಗಳನ್ನು ರದ್ದು ಮಾಡಿ ದಿಢೀರ್ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
ಕೆಪಿಸಿಸಿ ಪ್ರಚಾರ ಸಮಿತಿ ಆಧ್ಯಕ್ಷ ಎಂ ಬಿ ಪಾಟೀಲ ಶುಕ್ರವಾರ ತಾವು ಪ್ರತಿನಿಧಿಸುತ್ತಿರುವ ಹಾಗೂ ಸ್ಪರ್ಧೆಗೆ ಮುಂದಾಗಿರುವ ಬಬಲೇಶ್ವರ ಕ್ಷೇತ್ರದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಿತ್ತು.
ಆದರೆ ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಗೆ ಒಲವು ತೋರಿದ್ದಾರೆ. ಅಥಣಿ ಹಾಗೂ ಬಬಲೇಶ್ವರ ಕ್ಷೇತ್ರಗಳು ಪರಸ್ಪರ ಹೊಂದಿಕೊಂಡಿರುವ ಕ್ಷೇತ್ರಗಳು. ಅಲ್ಲದೇ ಹಿಂದಿನ ಚುನಾವಣೆಯಲ್ಲಿ ಬಬಲೇಶ್ವರ ಕ್ಷೇತ್ರದಲ್ಲಿ ಸವದಿ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಕೆಲಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸವದಿ ಕಾಂಗ್ರೆಸ್ ಸೇರ್ಪಡೆ ಕುರಿತು ಪಕ್ಷದ ಪ್ರಮುಖರ ಅಭಿಪ್ರಾಯ ಸಂಗ್ರಹಣೆಗೆ ಪಕ್ಷದ ವರಿಷ್ಠರು ಬುಲಾವ್ ನೀಡಿದ್ದಾರೆ.
ಇದನ್ನೂ ಓದಿ:ಆ ಸಮಯದಲ್ಲಿ ರಾಕಿ ಎಲ್ಲಿದ್ದ…? KGF Chapter 3 ಬಗ್ಗೆ ಸುಳಿವು ಕೊಟ್ಟ ಹೊಂಬಾಳೆ
ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತುರ್ತು ಕರೆ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ವಿಚಾರದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲು ಎಂ.ಬಿ.ಪಾಟೀಲ ದಿಢೀರ್ ಬೆಂಗಳೂರಿಗೆ ತೆರಳಿದ್ದಾರೆ.
ಇದೇ ಕಾರಣಕ್ಕಾಗಿ ಶುಕ್ರವಾರ ತಮ್ಮ ಸ್ವಕ್ಷೇತ್ರ ಬಬಲೇಶ್ವರದಲ್ಲಿ ನಿಗದಿಯಾಗಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿ, ಪಾಟೀಲ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ತೆರಳಿದ್ದಾಗಿ ಪಕ್ಷದ ಮೂಲಗಳು ತಿಳಿಸಿವೆ.