Advertisement

ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರ ದಂಡು: ಹುಂಡಿಯಲ್ಲಿ 500,1000 ಮುಖಬೆಲೆಯ ಹಳೆಯ ನೋಟುಗಳು

11:26 AM Jan 08, 2022 | Team Udayavani |

ಸವದತ್ತಿ: ಯಲ್ಲಮ್ಮ ದೇವಸ್ಥಾನದ ದರ್ಶನವನ್ನು ಜಿಲ್ಲಾಧಿಕಾರಿ ನಿಷೇಧಿಸಿದರೂ ಭಕ್ತರ ದಂಡು ಯಲ್ಲಮ್ಮನ ಗುಡ್ಡಕ್ಕೆ ತಂಡೋಪ ತಂಡವಾಗಿ ಹರಿದು ಬರುತ್ತಿದೆ.

Advertisement

ಕೋವಿಡ್, ಓಮಿಕ್ರಾನ್ ಹೆಚ್ಚಳ ಹಿನ್ನಲೆಯಲ್ಲಿ ಜನೇವರಿ 6 ರಿಂದ ಜಿಲ್ಲಾಧಿಕಾರಿ ನಿಷೇಧ ಜಾರಿಗೆ ಬರುವಂತೆ ಆದೇಶಿಸಿದ್ದಾರೆ. ಇದ್ಯಾವುದನ್ನೂ ಅರಿಯದ ಭಕ್ತರು ಜಾತ್ರೆಗೆಂದು ಯಥಾಸ್ಥಿತಿ ಗುಡ್ಡವನ್ನು ಸೇರುತ್ತಿದ್ದಾರೆ.

ಧ್ವನಿವರ್ಧಕ, ಪ್ರಕಟಣೆ ಸೇರಿದಂತೆ ಪ್ರಚಾರದ ಮೂಲಕ ಪೊಲೀಸ್ ಇಲಾಖೆ ತಿಳಿಸುತ್ತಿದೆ. ಆದಾಗ್ಯೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಬಹುಶಃ ನಿಷೇಧದ ಕುರಿತು ಈಗಾಗಲೇ ಬಂದ ಜನರಿಗೆ ವಿಷಯ ತಿಳಿದಿಲ್ಲ. ಆದಾಗ್ಯೂ ಸಕಲ ಪ್ರಯತ್ನದಿಂದ ಜನರಿಗೆ ಮನವರಿಕೆ ಮಾಡಲಾಗುತ್ತಿದೆ. ಜೊತೆಗೆ ದರ್ಶನವು ಸ್ಥಗಿತಗೊಂಡಿದೆ. ಬರುವ ಭಕ್ತರನ್ನು ಸವದತ್ತಿಯಲ್ಲಿಯೇ ನಿಲ್ಲಿಸಿ ಮರಳಿಸುವ ವ್ಯವಸ್ಥೆ ನಡೆಸಲಾಗುತ್ತಿದೆ ಎಂದು ಪಿಎಸ್‌ಐ ಶಿವಾನಂದ ಗುಡಗನಟ್ಟಿ ಉದಯವಾಣಿಗೆ ಪ್ರತಿಕ್ರ‍್ರಿಯಿಸಿದರು.

ನಿಷೇಧವಿದ್ದರೂ ಸಹಿತ ಶುಕ್ರವಾರ ಯಾವುದೇ ಸಂದರ್ಭದಲ್ಲಿ ದರ್ಶನ ಪಡೆದೇ ಹಿಂದಿರುಗಬೇಕೆನ್ನುವ ಭಕ್ತರಿಗೂ ಕಡಿಮೆಯಿರಲಿಲ್ಲ. ನಿಷೇಧದ ಅರಿವಿದ್ದರೂ ಧಾವಿಸಿ ಬಂದವರ ಸಂಖ್ಯೆಯೇ ಹೆಚ್ಚಾಗಿತ್ತು.

ನಿಷೇಧ ಒಂದೆಡೆಯಾದರೆ ಈಗಾಗಲೇ ದೇವಸ್ಥಾನದಲ್ಲಿರುವ ಅಸಂಖ್ಯಾತ ಭಕ್ತರಿಂದ ಕೋವಿಡ್ ನಿಯಮ ಪಾಲಿಸಲಿಕ್ಕಾಗಿಲ್ಲ.ಜಾತ್ರೆಗೆಂದೇ ಬಂದವರಿಗೆ ನಿಯಮ ಪಾಲಿಸಲು ತಿಳಿಸುವದೇ ಹರಸಾಹಸದ ಕೆಲಸವಾಗಿದೆ. ಸ್ವಯಂ ಪ್ರೇರಿತರಾಗಿ ಮಾಸ್ಕ್, ಅಂತರ ಕಾಯುವ ಪರಿಸ್ಥಿತಿಯಂತೂ ಕಾಣಸಿಗುವುದಿಲ್ಲ.

Advertisement

ದರ್ಶನ ಸ್ಥಗಿತಗೊಂಡಿದ್ದರಿಂದ ಹರಕೆ ಹೊತ್ತು ದೂರದಿಂದ ಬಂದ ಭಕ್ತರು ಅಮ್ಮನ ದರ್ಶನವಾಗದೇ ನಿರಾಶೆಯಿಂದ ಮರಳುತ್ತಿರುವುದು ಕಂಡುಬಂತು. ನಿಷೇಧದ ಮಧ್ಯ ಜನಜಂಗುಳಿಯಿಲ್ಲದ ಕಾರಣ ದೇವಸ್ಥಾನದ ಸಿಬ್ಬಂದಿ ಗೋಪುರವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸಿದರು. ನಿತ್ಯ ಎಲ್ಲರ ಮಧ್ಯ ನಡೆಯುವ ಈ ಸ್ವಚ್ಛತೆ ಕಾರ್ಯ ಇದೀಗ ನಿರಾಳವಾಗಿ ನಡೆಯುತ್ತಿದೆ.

ದೇವಸ್ಥಾನದಲ್ಲಿ ಬುಧವಾರ ನಡೆದ ಹುಂಡಿ ಎಣಿಕೆಯಲ್ಲಿ 500 ಹಾಗೂ 1000 ಮುಖಬೆಲೆಯ ಹಳೆಯ ನೋಟುಗಳು ದೊರೆತಿವೆ. ಜೊತೆಗೆ ಸುಮಾರು ರೂ. 1980 ಮೌಲ್ಯವುಳ್ಳ ಸೌದಿ ಅರೇಬಿಯಾದ ರಿಯಾಲ್ 100 ರ ನೋಟನ್ನು ಭಕ್ತರು ಕಾಣಿಕೆಯಲ್ಲಿ ಹಾಕಿದ್ದಾರೆ. ಇದನ್ನು ಬ್ಯಾಂಕಿನಿಂದ ಬದಲು ಮಾಡಿಕೊಳ್ಳಲಾಗುವದೆಂದು ದೇವಸ್ಥಾನದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ನಾಗರತ್ನಾ ಚೋಳಿನ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next