Advertisement

ಬನದ ಜಾತ್ರೆಗೆ ಯಲ್ಲಮ್ಮಗುಡ್ಡ ಸಜ್ಜು

11:25 AM Jan 21, 2019 | |

ಸವದತ್ತಿ: ಬನದ ಹುಣ್ಣಿಮೆ ಜಾತ್ರೆಗೆ ಏಳುಕೊಳ್ಳದ ನಾಡು ಸಜ್ಜುಗೊಳ್ಳುತ್ತಿದೆ. ಸುಕ್ಷೇತ್ರ ಯಲ್ಲಮ್ಮನ ಸನ್ನಿಧಾನಕ್ಕೆ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗೆ ಸಂಚಾರದಲ್ಲಿ ತೊಂದರೆಯಾಗಬಾರದೆಂಬ ಉದ್ದೇಶದಿಂದ ಪ್ರಸಕ್ತ ವರ್ಷ ಆಡಳಿತ ಮಂಡಳಿಯ ಸಹಕಾರದೊಂದಿಗೆ ಪೊಲೀಸ್‌ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

Advertisement

ಪ್ರತಿವರ್ಷ ಬನದ ಹಾಗೂ ಭಾರತ ಹುಣ್ಣಿಮೆ ಜಾತ್ರೆಯಲ್ಲಿ ಟ್ರಾಫಿಕ್‌ ಸಮಸ್ಯೆಯಿಂದ ಸ್ಥಳೀಯರಿಗೆ, ಭಕ್ತರಿಗೆ ಹಾಗೂ ವಾಹನ ಸವಾರರಿಗೆ ಬಹಳ ತೊಂದರೆಯಾಗುತ್ತಿತ್ತು. ಆದರೆ ಈ ಬಾರಿ ಸಂಚಾರದಲ್ಲಿ ಸಮಸ್ಯೆಯಾಗಬಾರದೆಂದು ಪೊಲೀಸ್‌ ಇಲಾಖೆ ಕೆಲ ಕ್ರಮಗಳನ್ನು ಕೈಗೊಂಡಿದೆ.

ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನದಲ್ಲಿ ಸೋಮವಾರ (ಜ. 21) ಜರುಗಲಿರುವ ಬನದ ಹುಣ್ಣಿಮೆ ಜಾತ್ರೆ ವೇಳೆ ಭದ್ರತೆಗೆ ಸವದತ್ತಿ, ಮುನವಳ್ಳಿ, ಮುರಗೋಡ, ಕಟಕೋಳ ಮತ್ತು ರಾಮದುರ್ಗ ಠಾಣೆಗಳಿಂದ 5 ಸಿಪಿಐ, 12 ಪಿಎಸೈ, 45 ಎಎಸೈ, 2 ಕೆಎಸ್‌ಆರ್‌ಪಿ, 2 ಡಿಎಆರ್‌, 40 ಮಹಿಳಾ ಸಿಬ್ಬಂದಿ ಸೇರಿದಂತೆ 200 ಪೇದೆಗಳು ಮತ್ತು 200 ಹೊಮ್‌ ಗಾರ್ಡ್ಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಸಂಚಾರದಲ್ಲಿ ನಿಯಂತ್ರಣದೊಂದಿಗೆ ಭಕ್ತರ ಸುರಕ್ಷತೆಗೆ ಪ್ರತಿ ಅರ್ಧ ಕಿಮೀಗೆ ಒಂದು ಪೊಲೀಸ್‌ ಟೆಂಟ್‌ ಹಾಕಲಾಗಿದೆ. ಇದರಿಂದ ಭಕ್ತರಿಗೆ ಮತ್ತು ವಾಹನ ಸವಾರರಿಗೆ ಅನುಕೂಲವಾಗಲಿದೆ.  

ಏಕಮುಖಿ  ಸಂಚಾರ: ಕಳೆದ ವರ್ಷದ ಜಾತ್ರೆಯಲ್ಲಿ ಜಾರಿಗೆ ಬಂದ ಏಕಮುಖೀ ಸಂಚಾರ ವ್ಯವಸ್ಥೆ ಮುಂದುವರಿಸಲಾಗಿದೆ. ಹೊರ ಹೋಗುವ  ವಾಹನಗಳಿಗೆ ಯಲ್ಲಮ್ಮ ದೇವಸ್ಥಾನದಿಂದ ಜೋಗಳಬಾವಿ ಕ್ರಾಸ್‌ ನವರೆಗೆ ಮತ್ತು ಒಳ ಬರುವ ವಾಹನಗಳಿಗೆ ಸವದತ್ತಿ ಎಪಿಎಂಸಿ ಕ್ರಾಸ್‌ದಿಂದ ದೇವಸ್ಥಾನಕ್ಕೆ ಏಕಮುಖಿ  ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಅದರೊಂದಿಗೆ ರಸ್ತೆ ವಿಭಜಕಗಳು ಹಾಗೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ತಪ್ಪದ ನೀರಿನ ಅಭಾವ
ಪ್ರತಿ ವರ್ಷದಂತೆ ಈ ವರ್ಷವು ಕುಡಿಯುವ ನೀರಿಗಾಗಿ ಭಕ್ತರು ಪರದಾಡುವ ಪರಿಸ್ಥಿತಿ ಎದುರಾಗಲಿದೆ. ಮುನ್ನಚ್ಚರಿಕೆ ಕ್ರಮವಾಗಿ ಟ್ಯಾಂಕರ್‌ ಮೂಲಕ ನೀರು ಒದಗಿಸುವ ಕಾರ್ಯ ನಡೆದಿದೆ. ಆದರೆ ಲಕ್ಷಾಂತರ ಸಂಖ್ಯೆಯಲ್ಲಿ ಸೇರುವ ಭಕ್ತರಿಗೆ ಟ್ಯಾಂಕರ್‌ ನೀರು ಪೂರೈಕೆ ಸಾಲುವುದಿಲ್ಲ. ಉಗರಗೋಳ, ಜೊಗಳಬಾವಿ, ಮಲಪ್ರಭಾ ನದಿಗೆ ಬಂದು ಟ್ಯಾಂಕರ್‌ಗಳ ಮೂಲಕ ನೀರು ತರುತ್ತಿರುವ ದೃಶ್ಯ ಕಂಡು ಬರುತ್ತಿದೆ. ಪ್ರತಿವರ್ಷ ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಸಂಖ್ಯೆ ಹೆಚ್ಚುತ್ತಿದ್ದು, ಅದರನುಗುಣವಾಗಿ ಆಡಳಿತ ಮಂಡಳಿ ಎಲ್ಲ ರೀತಿಯಲ್ಲಿ ಕ್ರಮ ಕೈಗೊಂಡ್ಡಿದ್ದಾರೆ. ಆದರೆ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ನೀಗಿಸಲು ಇನ್ನು ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.

Advertisement

ಸಣ್ಣ ವ್ಯಾಪಾರಸ್ಥರ ಗೋಳು
ದೇವಸ್ಥಾನ ಆಡಳಿತ ಮಂಡಳಿಯೂ ದೇವಸ್ಥಾನ ಅಭಿವೃದ್ಧಿ ಹೆಸರಲ್ಲಿ ಸಣ್ಣ-ಪುಟ್ಟ ವ್ಯಾಪಾರಿಗಳನ್ನು ಕಡೆಗಣಿಸುತ್ತಿದ್ದಾರೆಂದು 4-5 ತಿಂಗಳಿನಿಂದ ವ್ಯಾಪಾರಿಗಳು ಹೋರಾಟ ಮಾಡಿದ್ದರು. ಈ ಕುರಿತು ಉನ್ನತಾಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಏನೂ ಪ್ರಯೋಜನವಾಗಿಲ್ಲ. ಮೂಲ ಸೌಕರ್ಯಗಳಿಲ್ಲದ ಹಾಗೂ ಸ್ವಚ್ಛತೆಯಿಲ್ಲದ ಸ್ಥಳಗಳಲ್ಲಿ ಅಂಗಡಿಗಳನ್ನು ಸ್ಥಳಾಂತರದಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗಬಹುದು. ದೇವಸ್ಥಾನಕ್ಕೆ ಬರುವ ಭಕ್ತರನ್ನೇ ನೆಚ್ಚಿ ಬದುಕು ನಡೆಸುವ ಸಣ್ಣ ವ್ಯಾಪಾರಿಗಳಿಗೆ ಕಷ್ಟವಾಗುತ್ತದೆ. ಬಂಡವಾಳ ಹೂಡಿದ ವ್ಯಾಪಾರಸ್ಥರಿಗೆ ಆಡಳಿತ ಮಂಡಳಿಯ ಈ ಆದೇಶದಿಂದ ಹಾಕಿದ ಹಣವೂ ಸಹ ವಾಪಸ್‌ ಬರುವುದಿಲ್ಲ ಎಂದು ಸಣ್ಣ ವ್ಯಾಪಾರಸ್ಥರು ಆರೋಪಿಸಿದ್ದಾರೆ.

ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸುರಕ್ಷತೆ ದೃಷ್ಟಿಯಿಂದ 500ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳ ನಿಯೋಜನೆ ಮಾಡಲಾಗಿದೆ. ಅಲ್ಲಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ವಾಹನಗಳನ್ನು ರಸ್ತೆ ಮಧ್ಯೆ ಅಡ್ಡಾದಿಡ್ಡಿ ನಿಲ್ಲಿಸುವುದೇ ಟ್ರಾಪಿಕ್‌ ಸಮಸ್ಯೆಗೆ ಪ್ರಮುಖ ಕಾರಣ. ಅದಕ್ಕಾಗಿ ಪ್ರತ್ಯೇಕ ನಿಲುಗಡೆ ಸ್ಥಳಗಳನ್ನು ನಿಗದಿ ಮಾಡಲಾಗಿದೆ. ವಾಹನ ದಟ್ಟಣೆ ತಡೆಗಟ್ಟಲು ಏಕಮುಖೀ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ.
ಪರಶುರಾಮ ಪೂಜೇರ,
ಪಿಎಸೈ ಸವದತ್ತಿ

ಲಕ್ಷಾಂತರ ಸಂಖ್ಯೆಯಲ್ಲಿ ಸೇರುವ ಭಕ್ತರ ಅನುಕೂಲಕ್ಕಾಗಿ ಆಡಳಿತ ಮಂಡಳಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಇತರೆ ಮೂಲ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ. ಜಾತ್ರೆ ನಿಮಿತ್ತ ಹಲವಾರು ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಎಲ್ಲ ಇಲಾಖೆಗಳ ಸಕಾರಾತ್ಮಕವಾಗಿ ಸ್ಪಂದನೆ ನೀಡುತ್ತಿವೆ.
ಎಸ್‌.ಪಿ. ಜಿರಗಾಳ,
ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ,
ಯಲ್ಲಮ್ಮ ದೇವಸ್ಥಾನ

„ಡಿ.ಎಸ್‌. ಕೊಪ್ಪದ

Advertisement

Udayavani is now on Telegram. Click here to join our channel and stay updated with the latest news.

Next