ರಾಜ್‌ಕೋಟ್: ನಾಲ್ಕನೇ ಫೈನಲ್ ಪ್ರಯತ್ನದಲ್ಲಿ ಸೌರಾಷ್ಟ್ರ ತಂಡ ರಣಜಿ ಟ್ರೋಫಿ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತವರಿನ ರಾಜ್‌ಕೋಟ್ ಅಂಗಳದಲ್ಲಿ ಬಂಗಾಲ ವಿರುದ್ಧ ಪ್ರಥಮ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಮೊದಲ ಬಾರಿಗೆ ರಣಜಿ ಕಿರೀಟ ಧರಿಸಿ ಇತಿಹಾಸ ನಿರ್ಮಿಸಿತು.
ಸೌರಾಷ್ಟ್ರದ 425 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ ಬಂಗಾಲ 381ಕ್ಕೆ ತನ್ನ ಹೋರಾಟವನ್ನು ಮುಗಿಸಿತು. ಪಂದ್ಯಕ್ಕೆ ಡ್ರಾ ಮುದ್ರೆ ಬೀಳುವಾಗ ಸೌರಾಷ್ಟ್ರ ದ್ವಿತೀಯ ಸರದಿಯಲ್ಲಿ 4 ವಿಕೆಟಿಗೆ 105 ರನ್ ಗಳಿಸಿತ್ತು.
ಅನುಸ್ತೂಪ್ ಮಜುಮಾªರ್ (63) ಮತ್ತು ಅರ್ನಾಬ್ ನಂದಿ (ಅಜೇಯ 40) ಸೇರಿಕೊಂಡು ಬಂಗಾಲದ ಹೋರಾಟವನ್ನು ಜಾರಿಯಲ್ಲಿರಿಸಿದ್ದರು. ಗುರುವಾರ ಇವರಿಬ್ಬರ ನಡುವೆ 91 ರನ್ ಜತೆಯಾಟ ನಡೆದಿತ್ತು. 4ನೇ ದಿನದಾಟದ ಅಂತ್ಯಕ್ಕೆ 6 ವಿಕೆಟಿಗೆ 354 ರನ್ ಗಳಿಸಿದ್ದ ಬಂಗಾಲ ಮುನ್ನಡೆಯ ಸಾಧ್ಯತೆಯನ್ನು ತೆರೆದಿರಿಸಿತ್ತು. ಆದರೆ ಶುಕ್ರವಾರ ಬಂಗಾಲದ ಆಟ ನಡೆಯಲಿಲ್ಲ. 27 ರನ್ ಸೇರಿಸುವಷ್ಟರಲ್ಲಿ ಅದು ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು; 44 ರನ್ ಹಿನ್ನಡೆಗೆ ಸಿಲುಕಿತು.
ಸ್ಕೋರ್ 361ಕ್ಕೆ ತಲುಪಿದ ವೇಳೆ ಮಜುಮಾªರ್ ವಿಕೆಟ್ ಕಿತ್ತ ನಾಯಕ ಉನಾದ್ಕತ್ ಸೌರಾಷ್ಟ್ರವನ್ನು ಹಳಿಗೆ ತಂದರು. ಉನಾದ್ಕತ್ ಸಾಧನೆ 96ಕ್ಕೆ 2. ಪ್ರಸಕ್ತ ರಣಜಿ ಋತುವಿನಲ್ಲಿ ಅವರು 13.23 ಸರಾಸರಿಯಲ್ಲಿ 67 ವಿಕೆಟ್ ಉರುಳಿಸಿ ಅಗ್ರಸ್ಥಾನ ಅಲಂಕರಿಸಿದರು. ರಣಜಿ ಸಾರ್ವಕಾಲಿಕ ದಾಖಲೆಯಿಂದ ಒಂದೇ ವಿಕೆಟ್ ದೂರ ಉಳಿದರು.ಸೌರಾಷ್ಟ್ರ ಕಳೆದ ವರ್ಷದ ಫೈನಲ್‌ನಲ್ಲಿ ವಿದರ್ಭಕ್ಕೆ ಶರಣಾಗಿತ್ತು. ಇದಕ್ಕೂ ಹಿಂದೆ 2 ಸಲ ಮುಂಬಯಿ ವಿರುದ್ಧ ಎಡವಿತ್ತು.
ಸಂಕ್ಷಿಪ್ತ ಸ್ಕೋರ್: ಸೌರಾಷ್ಟ್ರ-425 ಮತ್ತು 4 ವಿಕೆಟಿಗೆ 105. ಬಂಗಾಲ-381. ಪಂದ್ಯಶ್ರೇಷ್ಠ: ಅರ್ಪಿತ್ ವಸವಾಡ.