Advertisement

ಮೀನುಗಾರಿಕೆ ಕುಂಠಿತ:ಶೇ. 90ರಷ್ಟು ದೋಣಿಗಳಿಗೆ ನಷ್ಟ

10:22 PM Sep 28, 2019 | Team Udayavani |

ಮಲ್ಪೆ: ಹವಾಮಾನ ವೈಪರೀತ್ಯ, ಸಮುದ್ರ ಪ್ರಕ್ಷುಬ್ಧತೆಯಿಂದ ಈ ಬಾರಿ ಮೀನುಗಾರಿಕೆ ಋತುವಿನ ಆರಂಭ ದಿನದಿಂದಲೇ ನೆಲಕಚ್ಚಿದೆ. ಎಲ್ಲ ವರ್ಗದ ಮೀನುಗಾರರೂ ಸರಿಯಾಗಿ ಮೀನು ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಶೇ. 90ರಷ್ಟು ಬೋಟ್‌ಗಳು ನಷ್ಟದಲ್ಲಿವೆ.

Advertisement

ಆಳಸಮುದ್ರಕ್ಕೆ ತೆರಳುವ ಬೋಟ್‌ಗಳು 10ರಿಂದ 12 ದಿನಗಳವರೆಗೆ ಅಲ್ಲಿದ್ದು ಮೀನುಗಾರಿಕೆ ನಡೆಸುತ್ತವೆ. ಈ ಸಂದರ್ಭ ದೋಣಿಯೊಂದಕ್ಕೆ ಐದೂವರೆಯಿಂದ ಆರು ಸಾವಿರ ಲೀ. ಡೀಸೆಲ್‌ ಬೇಕು. ಹಿಂದಿರುಗುವಾಗ 6 ಲಕ್ಷ ರೂ.ಗಳ ಮೀನು ದೊರೆತರೆ ಮಾತ್ರ ವೆಚ್ಚವನ್ನು ಸರಿದೂಗಿಸಲು ಸಾಧ್ಯ. ಆದರೆ ಈಗ ಬೆರಳೆಣಿಕೆಯ ಬೋಟುಗಳಿಗೆ ಮಾತ್ರ 4ರಿಂದ 5 ಲಕ್ಷ ರೂ.ಗಳ ಮೀನು ಸಿಗುತ್ತದೆ. ಉಳಿದವುಗಳಿಗೆ ಸಿಗುವುದು 1ರಿಂದ 2 ಲಕ್ಷ ರೂ.ಗಳ ಮೀನು ಎನ್ನುತ್ತಾರೆ ಮೀನುಗಾರರು. ದಿನಂಪ್ರತಿ ತೆರಳುವ ಪಸೀìನ್‌ ಮೀನುಗಾರಿಕೆಯೂ ಸಂಪೂರ್ಣ ನಷ್ಟದಲ್ಲಿದೆ. ಶೇ.40ರಷ್ಟು ದೋಣಿಗಳು ದಡದಲ್ಲಿ ಉಳಿದಿವೆ.

ಸಾಲದ ಸುಳಿ
ಬೋಟ್‌ ಮಾಲಕರು, ವ್ಯಾಪಾರಸ್ಥರು, ಕಾರ್ಮಿಕರು ಸಹಕಾರಿ ಸಂಸ್ಥೆ, ಬ್ಯಾಂಕ್‌ಗಳ ಮೂಲಕ ಪಡೆದ ಸಾಲ ಮರು ಪಾವತಿಸಲಾಗದೆ ಪರದಾಡುತ್ತಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಆತ್ಮಹತ್ಯೆ, ನಾಪತ್ತೆಯ ಪ್ರಕರಣಗಳು ದಾಖಲಾಗುತ್ತಿದ್ದು, ಇದಕ್ಕೆ ಸಾಲದ ಹೊರೆಯೂ ಕಾರಣ ಎನ್ನಲಾಗುತ್ತಿದೆ.

ಸ್ಥಳೀಯ ಆರ್ಥಿಕತೆಗೆ ನಷ್ಟ
ಇದರಿಂದ ಸ್ಥಳೀಯ ಆರ್ಥಿಕತೆಗೂ ಭಾರೀ ಹೊಡೆತ ಬಿದ್ದಿದೆ. ಮೀನುಗಾರಿಕೆಗೆ ಹೊಂದಿಕೊಂಡಿರುವ ಮೀನು ಮಾರಾಟಗಾರರು, ಸಾಗಾಟಗಾರರು, ಮಂಜುಗಡ್ಡೆ ಸ್ಥಾವರ, ಮೀನು ಸಂಸ್ಕರಣ ಘಟಕ ಸೇರಿದಂತೆ ಇತರ ಕ್ಷೇತ್ರಗಳು ಭಾರೀ ಹಿನ್ನಡೆ ಅನುಭವಿಸುತ್ತಿವೆ. ಪಶ್ಚಾತ್‌ ಪರಿಣಾಮ ಹೊಟೇಲ್‌ ಉದ್ಯಮ, ಪ್ರವಾಸೋದ್ಯಮ ಮತ್ತಿತರ ಕ್ಷೇತ್ರಗಳಲ್ಲಿ ಕುಸಿತಕ್ಕೂ ಕಾರಣವಾಗಿದೆ.

ಸಾಲ ತೀರಿಸುವುದು ಕಷ್ಟ
ಮೀನುಗಾರಿಕೆಯನ್ನೇ ಆಶ್ರಯಿಸಿರುವ ಸಾವಿರಾರು ಮಂದಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ವೃತ್ತಿಯನ್ನು ನಂಬಿ ಲಕ್ಷಾಂತರ ರೂ. ಸಾಲ ಮಾಡಿರುವ ಮಂದಿ ತೀರಿಸಲಾಗದೆ ಒದ್ದಾಡುತ್ತಿದ್ದಾರೆ. ಋತು ಆರಂಭಕ್ಕೆ ಮೊದಲು ಬ್ಯಾಂಕಿನಿಂದ, ಫೈನಾನ್ಸ್‌ನಿಂದ ಮತ್ತು ಕೈ ಸಾಲ ಮಾಡಿ ದೋಣಿ ಸಜ್ಜುಗೊಳಿಸಿರುತ್ತಾರೆ. ಆದರೆ ಪ್ರಸ್ತುತ ಮೀನುಗಾರಿಕೆ ಚಟುವಟಿಕೆಗಳು ಕುದುರದೆ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.

Advertisement

ಕೋಟ್ಯಂತರ ರೂ. ವ್ಯವಹಾರ ನಷ್ಟ
ಮೀನುಗಾರಿಕೆ ಋತು ಆರಂಭ ಮತ್ತು ಅಂತ್ಯದ ಎರಡು ತಿಂಗಳು ಸಾಮಾನ್ಯವಾಗಿ ಎಲ್ಲ ವರ್ಗದ ಮೀನುಗಾರರಿಗೆ ಲಾಭದಾಯಕ ಅವಧಿ. ಆದರೆ ಈ ಬಾರಿ ಕೈಕೊಟ್ಟಿದೆ. ಎರಡು ತಿಂಗಳು ಕಳೆಯುತ್ತಾ ಬಂದರೂ ಶೇ. 90ರಷ್ಟು ಬೋಟುಗಳು ನಷ್ಟದಲ್ಲಿವೆ. ಕಳೆದ ಒಂದೂವರೆ ತಿಂಗಳಿನಲ್ಲಿ ಸುಮಾರು 500ಕ್ಕೂ ಅಧಿಕ ಕೋ.ರೂ. ವ್ಯವಹಾರ ನಷ್ಟ ಉಂಟಾಗಿದೆ.
-ಸತೀಶ್‌ ಕುಂದರ್‌, ಮಲ್ಪೆ ಮೀನುಗಾರರ ಸಂಘದ ಮಾಜಿ ಅಧ್ಯಕ್ಷರು

ಸಾಲ ಮರುಪಾವತಿಗೆ ಕಾಲಾವಕಾಶ ಬೇಕು
ಹವಾಮಾನದ ವೈಪರೀತ್ಯ, ಮತ್ಸÂಕ್ಷಾಮ -ಒಂದಲ್ಲ ಒಂದು ಸಮಸ್ಯೆ ಈ ಬಾರಿ ಮೀನುಗಾರರನ್ನು ಕಾಡುತ್ತಿದೆ. ಸರಕಾರ, ಜನ‌ಪ್ರತಿನಿಧಿಗಳು ಕಷ್ಟವನ್ನು ಅರಿತು ಮೀನುಗಾರರು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಾಡಿದ ಸಾಲದ ಮರುಪಾವತಿಗೆ ಕಾಲಾವಕಾಶವನ್ನು ನೀಡಬೇಕು. ಬಡ ಮೀನುಗಾರರ ಸಾಲವನ್ನು ಮನ್ನಾ ಮಾಡಬೇಕು.
– ಕೃಷ್ಣ ಎಸ್‌. ಸುವರ್ಣ, ಅಧ್ಯಕ್ಷರು, ಮೀನುಗಾರರ ಸಂಘ, ಮಲ್ಪೆ

ಕಾರಣವೇನು ?
ಆರಂಭದಲ್ಲಿ ಸಮುದ್ರದಲ್ಲಿ ಗಾಳಿ ಮತ್ತು ನೀರಿನ ಹೊಯ್ದಾಟ ಸರಿಯಿರಲಿಲ್ಲ. ನೀರಿನ ಸೆಳೆತ ಇರುವ ಕಾರಣ ಬಲೆ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಸಮುದ್ರದ ಅಡಿಭಾಗದಲ್ಲಿ ಸೆಳೆತವಿದ್ದು, ಬಲೆ ಪೂರಕವಾಗಿ ನಿಲ್ಲದೆ ಮೀನು ಬಲೆಗೆ ಬೀಳುತ್ತಿರಲಿಲ್ಲ. ಈಗ ಸಿಗುವ ಮೀನುಗಳೇ ಕಡಿಮೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next