Advertisement

ಸೌದಿ ಕುವೈತ್‌ ಕನ್ನಡಿಗರ ಸಹಾಯಕ್ಕೆ ಒತ್ತಾಯ

04:27 PM Feb 20, 2021 | Team Udayavani |

ಅಬುಧಾಬಿ :  ದುಬಾೖನಲ್ಲಿ ಸಂಕಷ್ಟದಲ್ಲಿರುವ ಸೌದಿ ಅರೇಬಿಯಾ ಮತ್ತು ಕುವೈತ್‌ಗೆ ಕೆಲಸ ಅರಸಿ ಬಂದ ಅನಿವಾಸಿ ಕನ್ನಡಿಗರು ಮರಳಿ ಭಾರತಕ್ಕೆ ತೆರಳಲು ಕರ್ನಾಟಕ ಸರಕಾರ ಸಹಾಯ ಮಾಡಬೇಕು ಹಾಗೂ ದುಬಾೖನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಒತ್ತಾಯಿಸಿ ಫೆ. 11ರಂದು ದುಬಾೖ ಹೆಮ್ಮೆಯ ಕನ್ನಡಿಗರು ಯುಎಇ ವತಿಯಿಂದ ಟ್ವಿಟರ್‌ ಅಭಿಯಾನ ನಡೆಯಿತು. ಈ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಯವರು ಭಾರತ ಕೇಂದ್ರ ಸರಕಾರ ವಿದೇಶಾಂಗ ಮಂತ್ರಿಗಳ ಗಮನ ಸೆಳೆದು ಸಂತ್ರಸ್ತರು ತಾಯ್ನಾಡಿಗೆ ಮರಳಲು ಕೂಡಲೇ ಉಚಿತ ವಿಮಾನ ಟಿಕೆಟ್‌ ವ್ಯವಸ್ಥೆ ಮಾಡಿಕೊಂಡುವಂತೆ ಮನವಿ ಮಾಡಿತು.

Advertisement

ದುಬಾೖಯಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಹಬ್ಬ , ಕ್ರೀಡೆ, ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಕಾರ್ಯಕ್ರಮಗಳು ಮತ್ತು ಕೋವಿಡ್‌ ಸಂಕಷ್ಟದ ವೇಳೆ ಹೆಮ್ಮೆಯ ಯುಎಇ ಕನ್ನಡಿಗರ ತಂಡ ಸ್ವಯಂ ಸೇವಾ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿತ್ತು. ಇಲ್ಲಿ ನೆಲೆಸಿರುವ ಕನ್ನಡಿಗರು ಹಲವಾರು ಕನ್ನಡನಾಡುನುಡಿಯ ಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಅದಕ್ಕೆ ಪೂರಕವಾಗಿ ಕನ್ನಡ ಭವನ ನಿರ್ಮಿಸಬೇಕಿದೆ ಎನ್ನುವ ಕುರಿತು ಸವಿಸ್ತಾರವಾದ ಪತ್ರವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಇ- ಮೇಲ್‌ ಮಾಡಲಾಗಿದೆ.  ಈ ಅಭಿಯಾನಕ್ಕೆ ಕನ್ನಡಿಗರೆಲ್ಲ ಒಕ್ಕೊರಲಿನಿಂದ ಧ್ವನಿಗೂಡಿದ್ದು, ಸಮಸ್ಯೆ ಪರಿಹಾರ ಮತ್ತು ಕನ್ನಡ ಭಾಷೆ ಉಳಿವಿಗೆ ಟ್ವೀಟ್‌ ಮಾಡುವುದರ ಮೂಲಕ ಬೆಂಬಲಿಸಿದ್ದಾರೆ.

ಈ ನಿಟ್ಟಿನಲ್ಲಿ ದುಬಾೖ ಹೆಮ್ಮೆಯ ಕನ್ನಡಿಗರು ಯುಎಇ ತಂಡದ ಕಾರ್ಯದರ್ಶಿಗಳಾದ ಸೆಂತಿಲ್‌ ಬೆಂಗಳೂರು, ಸಂಚಾಲಕರಾದ ರಫೀಕಲಿ ಕೊಡಗು, ತಂಡದ ಸಾಮಾಜಿಕ ಜಾಲತಾಣದ ಪ್ರಮುಖರಾದ ಫಿರೋಜ್‌ ಮಂಗಳೂರು ಮತ್ತು ಅಕ್ರಮ್‌ ಕೊಡಗು ಅವರು ಸಾಕಷ್ಟು ಪ್ರಯತ್ವಿಸಿದ್ದರು. ತಂಡದ ಅಧ್ಯಕ್ಷರಾದ ಮಮತಾ ಮೈಸೂರು ಮತ್ತು ಸಾಹಿತ್ಯ ಘಟಕದ ಮುಖ್ಯಸ್ಥರಾದ ವಿಷ್ಣುಮೂರ್ತಿ ಮೈಸೂರು ಅವರು ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ದುಬಾೖಯಲ್ಲಿ ಸಂಕಷ್ಟಕ್ಕೆ ಒಳಗಾದ ಕನ್ನಡಿಗರು :

ಕೆಲಸ ಅರಸಿಕೊಂಡು ಕರ್ನಾಟಕದಿಂದ ದುಬಾೖ ನಗರಕ್ಕೆ ಬಂದ ಕನ್ನಡಿಗರು 14 ದಿನಗಳ ಕ್ವಾರಂಟೈನ್‌ ಮುಗಿಸಿ ಈ ಎರಡು ದೇಶಗಳ ಅನುಮತಿ ಪಡೆದ ಬಳಿಕ ಅಲ್ಲಿಗೆ ತೆರಳುತ್ತಿದ್ದರು. ಆದರೆ ಕೊರೊನಾದ ಎರಡನೇ ಅಲೆ ಪ್ರಾರಂಭವಾಗಿದ್ದರಿಂದ ಸೌದಿ ಅರೇಬಿಯಾ ಮತ್ತು ಕುವೈಟ್‌ ದೇಶಗಳು ದುಬಾೖ ಸಹಿತ ಇತರೆಡೆಯಿಂದ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳು  (ವಿಮಾನ, ರಸ್ತೆ ಸಾರಿಗೆ ) ಮುಚ್ಚಿ ಯಾರೂ ಪ್ರವೇಶ ಪಡೆಯದಂತೆ ನಿರ್ಬಂಧ ಹೇರಿದೆ. ಈ ಕ್ರಮದಿಂದ ಇಲ್ಲಿಗೆ ಕೆಲಸ ಅರಸಿ ಬಂದ ಕನ್ನಡಿಗರು ಸೌದಿ ಅರೇಬಿಯಾ ಮತ್ತು ಕುವೈಟ್‌ ದೇಶಕ್ಕೆ ನೇರವಾಗಿ ಪ್ರವೇಶ ಮಾಡಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.

Advertisement

ಕೋವಿಡ್ ಮಹಾಮಾರಿ ಎಲ್ಲರ ಜೀವನವನ್ನು ತಲ್ಲಣಗೊಳಿಸಿ ಇಂದಿಗೂ ತನ್ನ ರೌದ್ರಾವತಾರ ಮೆರೆಯುತ್ತಲೇ ಇದೆ. ನಮ್ಮ ಹೆಮ್ಮೆಯ ಯುಎಇ ಕನ್ನಡಿಗರು ತಂಡ ಕೋವಿಡ್‌ ಸಮಯದಲ್ಲಿ ಇಲ್ಲಿನ ಕನ್ನಡಿಗರಿಗೆ ಸುಮಾರು 85,000 ದಿಹಾರಮ್‌ (17 ಲಕ್ಷ ರೂ.) ದೇಣಿಗೆಯಿಂದ ಆಹಾರ, ಔಷಧ, ವಿಮಾನ ಟಿಕೆಟ್‌, ಕೆಲಸ ಕಳೆದುಕೊಂಡ ಕನ್ನಡ ಕುಟುಂಬಗಳಿಗೆ ಹಣ ಸಹಾಯ ಕಾರ್ಯಕ್ರಮವನ್ನು ನಡೆಸಿದೆವು. ಅಲ್ಲದೆ ದುಬಾೖ ಪೊಲೀಸರೊಂದಿಗೆ ಸಹಕರಿಸಿ ಕೋವಿಡ್‌ ಪೀಡಿತ ಕನ್ನಡಿಗರನ್ನು ಆಸ್ಪತ್ರೆಗೆ ಸೇರಿಸಲು ಮತ್ತು ಚಿಕಿತ್ಸೆ ಕೊಡಿಸಲು ನೆರವಾಯಿತು. ಇದಕ್ಕೆ ದುಬಾೖ ಸರಕಾರ ಮತ್ತು ಜನತೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂತು.

ಈ ಮಹಾಮಾರಿಯನ್ನು ಹತೋಟಿಗೆ ತರಲು ಕೊಲ್ಲಿ ರಾಷ್ಟ್ರಗಳು ಹರಸಾಹಸ ಮಾಡುತ್ತಲೇ ಕಠಿನ ಮತ್ತು ಅನಿವಾರ್ಯ ಅನಿರೀಕ್ಷಿತ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಕೊಲ್ಲಿ ರಾಷ್ಟ್ರವಾದ ಸೌದಿ ಅರೇಬಿಯಾ ಮತ್ತು ಕುವೈಟ್‌ ದೇಶಗಳು ಕೋವಿಡ್‌ ಮಹಾಮಾರಿಯ ಎರಡನೇ ಅಲೆಯನ್ನು ತಡೆಯಲು ತತ್‌ಕ್ಷಣವೇ ಹಲವು ದೇಶಗಳಿಂದ ವಿದೇಶಿಯರು ಪ್ರವೇಶ ಮಾಡುವುದನ್ನು ನಿಷೇದಿಸಿದ್ದಾರೆ. ಅದರಲ್ಲಿ ಭಾರತ ದೇಶವೂ ಒಂದು.

ತಮ್ಮ ಹಾಗೂ ಸಂಸಾರದ ಹೊಟ್ಟೆಪಾಡಿಗಾಗಿ ಉದ್ಯೋಗಕ್ಕಾಗಿ ನೂರಾರು ಕಾರ್ಮಿಕರು ಕನಸು ಹೊತ್ತು ಕೊಲ್ಲಿ ರಾಷ್ಟ್ರಕ್ಕೆ ಬರುತ್ತಾರೆ. ತಮಗೆ ಸಂಬಳ ಸಿಕ್ಕಿದ ದಿನ ಎಕ್ಸ್‌ಚೇಂಜ್‌ ಸಾಲಿನಲ್ಲಿ ನಿಂತು ಈ ಹಣಕ್ಕಾಗಿ ಕಾಯುತ್ತಿರುವ ತಮ್ಮ ಕುಟುಂಬ ಸದಸ್ಯರಿಗೆ ಕಳುಹಿಸುತ್ತಾರೆ. 50 ಡಿಗ್ರಿ ತಾಪಮಾನದಲ್ಲೂ ಎಲ್ಲ ನೋವನ್ನೂ ನುಂಗಿಕೊಂಡು, ಎಲ್ಲ ಕಷ್ಟವನ್ನು ಸಹಿಸಿಕೊಂಡು ಇಲ್ಲಿ ದುಡಿಯುತ್ತಿರುತ್ತಾರೆ.

ಸೌದಿ ಅರೇಬಿಯಾ ಮತ್ತು ಕುವೈತ್‌ ದೇಶಕ್ಕೆ ನೇರವಾಗಿ ಪ್ರವೇಶ ಮಾಡಲಾಗದೆ ಕೆಲಸ ಅರಸಿ ಬಂದ ಕನ್ನಡಿಗರು ಕರ್ನಾಟಕದಿಂದ ದುಬಾೖ ನಗರಕ್ಕೆ ಬಂದು 16 ದಿನಗಳ ಕ್ವಾರಂಟೈನ್‌ ಮುಗಿಸಿ ಈ ಎರಡು ದೇಶಗಳ ಅನುಮತಿ ಸಿಕ್ಕಿ ಅಲ್ಲಿಗೆ ತೆರಳುತ್ತಿದ್ದರು. ಆದರೆ ವಿಧಿಯ ಆಟವೇ ಬೇರೆ. ಕೊರೊನಾದ ಎರಡನೇ ಅಲೆ ಆರಂಭವಾಗಿದ್ದರಿಂದ ಸೌದಿ ಅರೇಬಿಯಾ ಮತ್ತು ಕುವೈತ್‌ ಎರಡೂ ದೇಶಗಳೂ ದುಬಾೖ ಸೇರಿದಂತೆ ಎಲ್ಲ  ವಿಮಾನ, ರಸ್ತೆ ಮಾರ್ಗಗಳನ್ನು ಮುಚ್ಚಿ ಯಾವ ಉದ್ಯೋಗಸ್ಥರೂ ಪ್ರವೇಶ ಮಾಡದಂತೆ ನಿರ್ಬಂಧ ಹೇರಿದೆ. ಇದರಿಂದ ಈ  ಮಾರ್ಗದಿಂದ ಬಂದ ಕನ್ನಡಿಗರಿಗೆ ಬರಸಿಡಿಲು ಬಡಿದಂತಾಗಿದ್ದು ದಿಕ್ಕೇ ತೋಚದೆ ಬಹಳ ಹತಾಶರಾಗಿದ್ದಾರೆ.

ಈಗಾಗಲೇ ಏಜೆಂಟ್‌ಗಳಿಗೆ ದುಡ್ಡು ಕೊಟ್ಟು ವೀಸಾ ತೆಗೆದುಕೊಂಡು ಉದ್ಯೋಗದ ನಿರೀಕ್ಷೆಯಲ್ಲಿ ಬಂದಿಳಿದ ಈ ಬಡವರು ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿದ್ದಾರೆ. ಏಕೆಂದರೆ ಈ ದೇಶದ ಕ್ರಮಗಳನ್ನು ಮನವರಿತ ದುಬಾೖ ಕಾನ್ಸುಲೇಟ್‌ ಈ ಎಲ್ಲ ಭಾರತೀಯರು ಮರಳಿ ಭಾರತಕ್ಕೆ ಹೋಗುವಂತೆ ಸೂಚಿಸಿದೆ.  ಬದಲಾದ ಪರಿಸ್ಥಿತಿಯಲ್ಲಿ ಊಟ ತಿಂಡಿಗೂ ಬಸವಳಿದ ಕೆಲವರಿಗೆ ಅನಿವಾಸಿ ಕನ್ನಡಿಗರು ಆಹಾರ ವ್ಯವಸ್ಥೆ ಮಾಡಿದ್ದಾರೆ. ಆದರೆ ಅವರಿಗೆ ಉಳಿದುಕೊಳ್ಳುವ ಮನೆ ಬಾಡಿಗೆ, ವಾಪಾಸ್‌ ಕರ್ನಾಟಕಕ್ಕೆ ಹೋಗಲು ವಿಮಾನ ಟಿಕೆಟ್‌ ವ್ಯವಸ್ಥೆ ಆಗಬೇಕಿದೆ. ಇದಕ್ಕಾಗಿ ನಮ್ಮ ಕೈಲಾದ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ ಪರಿಸ್ಥಿತಿ ಕೈ ಮೀರಿದ್ದರಿಂದ ಕರ್ನಾಟಕ ಸರಕಾರದ ಸಹಾಯದ ನಿರೀಕ್ಷೆ ಮಾಡಲಾಗಿದೆ.

ಕನ್ನಡ ಭವನ ನಿರ್ಮಾಣಕ್ಕೆ ಒತ್ತಾಯ :

ಯುಎಇ ದೇಶ ಕೊಲ್ಲಿ ರಾಷ್ಟ್ರದಲ್ಲೇ ಎಲ್ಲ ದೇಶಗಳ ಜನ, ಭಾಷೆ, ಸಂಸ್ಕೃತಿ, ಕಲೆಗೆ ಪ್ರಾಶಸ್ತ್ಯ ನೀಡುವ ದೇಶವಾಗಿದ್ದು, ವಿಶೇಷವಾಗಿ ದುಬಾೖ ನಗರ ಕನ್ನಡಿಗರಿಗೆ ಮತ್ತು ಅವರ ಕನ್ನಡ ಚಟುವಟಿಕೆಗಳಿಗೆ ಮಾನ್ಯತೆ ಕೊಟ್ಟಿದೆ. ನಮ್ಮ ತಂಡ ದುಬಾೖನಲ್ಲಿ  ಪ್ರತಿವರ್ಷ ದುಬಾೖ ದಸರಾ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ ನಡೆಸುತ್ತಿದೆ. ವಿಶ್ವದಾದ್ಯಂತ ಕನ್ನಡಿಗರು ಇದನ್ನು ಪ್ರಶಂಸಿಸಿದ್ದಾರೆ. ನಮ್ಮ ತಂಡದ ಮೂಲಕ ಕನ್ನಡ, ಭಾಷೆ ನಡೆ ನುಡಿಯ ಮೂಲಕ  ಅನಿವಾಸಿ ಕನ್ನಡಿಗರಲ್ಲಿ ಚೈತನ್ಯ ಮೂಡಿಸುತಿದ್ದೇವೆ.

ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ. ದೇವೇಗೌಡ  ಅವರು ಬಹರೈನ್‌ ಕನ್ನಡ ಭವನ ಶಂಕುಸ್ಥಾಪನೆಗೆ ದುಬಾೖಗೆ ಭೇಟಿ ಕೊಟ್ಟಾಗ ಅವರನ್ನು ಸಮ್ಮಾನಿಸಿ ಎಲ್ಲ ಕನ್ನಡ ಸಂಘಟನೆಗಳು ದುಬಾೖನಲ್ಲೂ ಒಂದು ಕನ್ನಡ ಭವನ ನಿರ್ಮಾಣದ ಆಶಯವನ್ನು ವ್ಯಕ್ತಪಡಿಸಿದ್ದೇವೆ.

ಇಂತಹ ಒಂದು ಕಟ್ಟಡ ಕನ್ನಡ  ಚಟುವಟಿಕೆಗಳಿಗೆ ಮಾತ್ರವಲ್ಲ ಅನಿರೀಕ್ಷಿತ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಕನ್ನಡಿಗರಿಗೆ ಆಪತ್ಕಾಲದ ಆಶ್ರಯವಾಗುತ್ತದೆ. ಅಲ್ಲದೆ ಕನ್ನಡವನ್ನು ವಿದೇಶದಲ್ಲೂ ಬೆಳೆಯಲು ಅವಕಾಶ ಮಾಡಿಕೊಟ್ಟ  ಶ್ರೇಯಸ್ಸು, ಕೀರ್ತಿ ಕರ್ನಾಟಕ ಸರಕಾರದ್ದಾಗುತ್ತದೆ.

ಹೀಗಾಗಿ ಶೀಘ್ರವೇ ಈ ಕನ್ನಡಿಗರು ತಾಯ್ನಾಡಿಗೆ ಮರಳಲು ವಿಮಾನ ಟಿಕೆಟ್‌ನ ಸಹಾಯ ಮಾಡಿಕೊಡಬೇಕು ಮತ್ತು ದುಬಾೖನಲ್ಲಿ ಆದಷ್ಟು ಬೇಗ ಕನ್ನಡ ಭವನ ನಿರ್ಮಾಣ ಮಾಡಿ ಕನ್ನಡಿಗರಿಗೆ ವಿದೇಶದಲ್ಲೂ ಧೈರ್ಯದಿಂದ ಬದುಕುವ ಅವಕಾಶ ಮಾಡಿಕೊಡುವಂತೆ ದುಬಾೖ ಹೆಮ್ಮೆಯ ಕನ್ನಡಿಗರು ತಂಡ ಒತ್ತಾಯಿಸಿದೆ.

ಟ್ವಿಟರ್‌ ಅಭಿಯಾನದ ಕುರಿತು ಫೆ. 10ರಂದು ನೀಡಿದ ಪತ್ರಿಕಾ ಹೇಳಿಕೆ ಸಭೆಯಲ್ಲಿ ಅಧ್ಯಕ್ಷರಾದ ಮಮತಾ ರಾಘವೇಂದ್ರ, ಮಾಜಿ ಅಧ್ಯಕ್ಷರಾದ ಸುದೀಪ್‌ ದಾವಣಗೆರೆ, ಮುಖ್ಯ ಕಾರ್ಯರ್ಶಿಗಳಾದ ಸೆಂತಿಲ್‌ ಬೆಂಗಳೂರು, ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು ಮತ್ತು ಸಮಿತಿ ಸದಸ್ಯರಾದ ಮಮತಾ ಶಾರ್ಜಾ, ಅನಿತಾ ಬೆಂಗಳೂರು, ಪಲ್ಲವಿ ದಾವಣಗೆರೆ, ಡಾ| ಸವಿತಾ ಮೈಸೂರು, ಹಾದಿಯ ಮಂಡ್ಯ, ವಿಷ್ಣು ಮೂರ್ತಿ ಮೈಸೂರು, ಶಂಕರ್‌ ಬೆಳಗಾವಿ, ಮೊಹಿದ್ದೀನ್‌ ಹುಬ್ಬಳ್ಳಿ ಮತ್ತು ಸರ್ವ ಉಪಸಮಿತಿ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next