ರಿಯಾದ್: ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು.
ತೈಲ ಸಂಪದ್ಭರಿತ ಗಲ್ಫ್ ದೇಶದ ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಝೀಜ್ ಅಲ್ ಸೌದ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಒಂದು ದಿನದ ಅಧಿಕೃತ ಸೌದಿ ಭೇಟಿ ಕೈಗೊಂಡಿದ್ದರು.
ನನ್ನ ರಿಯಾದ್ ಭೇಟಿಯ ವೇಳೆ ನಾನು ಸೌದಿ ಅರೇಬಿಯಾ ರಾಜನ ಜತೆ ದ್ವಿಪಕ್ಷೀಯ ಚರ್ಚೆ ನಡೆಸಿದ್ದು, ಈ ಸಂದರ್ಭದಲ್ಲಿ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಅವರ ಜತೆಯೂ ಚರ್ಚೆ ನಡೆಸಿದ್ದೇನೆ. ಮೊಹಮ್ಮದ್ ಬಿನ್ ಸಲ್ಮಾನ್ ಅವರ ಜತೆ ದ್ವಿಪಕ್ಷೀಯ ಸಹಕಾರ, ದೇಶೀಯ ಹಾಗೂ ಜಾಗತಿಕ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಿರುವುದಾಗಿ ಮೋದಿ ಈ ವೇಳೆ ತಿಳಿಸಿದರು.
ಭಾರತ ಮತ್ತು ಸೌದಿ ಅರೇಬಿಯಾ ಸಾಂಪ್ರದಾಯಿಕವಾಗಿ ತುಂಬಾ ನಿಕಟ ಮತ್ತು ಗೆಳೆತನದ ಸಂಬಂಧ ಹೊಂದಿದೆ. ಸೌದಿ ಅರೇಬಿಯಾ ಬೃಹತ್ ಹಾಗೂ ಭಾರತಕ್ಕೆ ಅಗತ್ಯವಿರುವಷ್ಟು ಇಂಧನ ಸರಬರಾಜು ಮಾಡುವ ನಂಬಿಕಸ್ಧ ದೇಶವಾಗಿದೆ. ಅಲ್ಲದೇ ಭಾರತದಲ್ಲಿ 100 ಬಿಲಿಯನ್ ಅಮೆರಿಕನ್(ಅಂದಾಜು 7ಸಾವಿರ ಕೋಟಿ) ಡಾಲರ್ ನಷ್ಟು ಹೂಡಿಕೆ ಮಾಡುವ ಬಗ್ಗೆ 2019ರ ವೇಳೆ ನವದೆಹಲಿಗೆ ಆಗಮಿಸಿದ್ದಾಗ ಭರವಸೆ ನೀಡಿರುವಂತೆ ಹೂಡಿಕೆ ಮಾಡುವ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆಂದು ಮೋದಿ ಹೇಳಿದರು.
ರಕ್ಷಣೆ, ಭದ್ರತೆ, ವ್ಯಾಪಾರ, ಸಂಸ್ಕೃತಿ ಶಿಕ್ಷಣ ಸೇರಿದಂತೆ ಇತರ ಪ್ರಮುಖ ಕ್ಷೇತ್ರಗಳ ಬಗ್ಗೆ ಸೌದಿ ಅರೇಬಿಯಾದ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಾಯಿತು ಎಂದು ಪ್ರಧಾನಿ ಮೋದಿ ತಿಳಿಸಿದರು.