ಹೊಸದಿಲ್ಲಿ: ಸೌದಿ ಅರೇಬಿಯಾದ ತೈಲ ಸಂಸ್ಥೆ ಅರಾಮೊRà ಮೇಲೆ ದಾಳಿ ನಡೆದಿದ್ದರೂ, ಅದರಿಂದ ಭಾರತಕ್ಕೆ ಪೂರೈಕೆಯಾಗಿರುವ ಕಚ್ಚಾ ತೈಲದ ಮೇಲೆ ಪ್ರಭಾವ ಬೀರುವುದಿಲ್ಲ. ಮಾರುಕಟ್ಟೆ ಸ್ಥಿರತೆ ತರುವ ನಿಟ್ಟಿನಲ್ಲಿ ಹಾಗೂ ದೇಶದ ಇಂಧನ ಅಗತ್ಯ ಪೂರೈಸುವ ಬಗ್ಗೆ ರಚನಾತ್ಮಕವಾಗಿ ಕೆಲಸ ಮಾಡುವುದಾಗಿ ಹೊಸದಿಲ್ಲಿಯಲ್ಲಿರುವ ಸೌದಿ ಅರೇಬಿಯಾ ರಾಯಭಾರಿ ಡಾ| ಸೌದ್ ಬಿನ್ ಮೊಹಮ್ಮದ್ ಅಲ್ ಸತಿ ಹೇಳಿದ್ದಾರೆ. “ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, “ಬಲವಂತ ದಾಳಿಯನ್ನು ನಿರೋಧಿಸುವ ಶಕ್ತಿಯನ್ನು ಸೌದಿ ಅರೇಬಿಯಾ ಹೊಂದಿದೆ. ಹುತಿ ಬಂಡುಕೋರರು ನಡೆಸಿದ ದಾಳಿಯ ವೇಳೆ ಭಾರತ ಸರಕಾರ ರಿಯಾದ್‌ಗೆ ನೀಡಿದ ಬೆಂಬಲ ಶ್ಲಾಘನೀಯ’ ಎಂದರು.
ಇರಾನ್‌ನಿಂದ ಕಚ್ಚಾ ತೈಲ ಪೂರೈಕೆಯ ಮೇಲೆ ಅಮೆರಿಕ ಮಿತಿ ಹೇರಿರುವ ಕಾರಣ, ಅರಬ್ ರಾಷ್ಟ್ರ ದೇಶಕ್ಕೆ ಹೆಚ್ಚಿನ ತೈಲ ಪೂರೈಕೆ ಮಾಡ ಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಮ್ಮ ದೇಶ ಭಾರತದ ಇಂಧನ ಅಗತ್ಯ ಪೂರೈಸಲು ಸಿದ್ಧವಿದೆ. ಕಚ್ಚಾ ತೈಲದ ಪೂರೈಕೆಯಲ್ಲಿ ಕೊರತೆ ಉಂಟಾದರೆ ಇತರ ಮೂಲಗಳಿಂದ ಅದನ್ನು ಭರ್ತಿ ಮಾಡುತ್ತೇವೆ’ ಎಂದು ಹೇಳಿದ್ದಾರೆ.
ದಾಳಿಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ ರಾಯಭಾರಿ, ಇರಾನ್‌ನಿಂದಲೇ ದಾಳಿ ನಡೆದ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ. ವಿಶ್ವಸಂಸ್ಥೆ ಮತ್ತು ಇತರ ಅಂತಾರಾಷ್ಟ್ರೀಯ ಸಮುದಾಯ ಘಟನೆಯನ್ನು ಖಂಡಿಸಿ ಸೌದಿಗೆ ಬೆಂಬಲ ವ್ಯಕ್ತಪಡಿಸಿವೆ ಎಂದರು.