ದೋಹಾ: ಸೌದಿ ಅರೇಬಿಯಾ ಮಂಗಳವಾರ ಆರ್ಜೆಂಟೀನಾ ತಂಡದೆದುರು ಐತಿಹಾಸಿಕ ಗೆಲುವು ಸಾಧಿಸಿದೆ. ಸಂತೋಷದಲ್ಲಿ ತೇಲುತ್ತಿದೆ, ಮತ್ತೊಂದು ಕಡೆ ದುಃಖದಲ್ಲಿ ನರಳಾಡುತ್ತಿದೆ. ಕಾರಣವೇನು ಗೊತ್ತಾ? ಇಂತಹ ಅದ್ಭುತ ಜಯ ಸಾಧಿಸಿದ ಪಂದ್ಯದಲ್ಲೇ ಆ ತಂಡದ ರಕ್ಷಣ ಆಟಗಾರ ಯಾಸೆರ್ ಅಲ್ ಶಹ್ರಾನಿ, ತಂಡದ ಗೋಲುಕೀಪರ್ ಮೊಹಮ್ಮದ್ ಅಲ್ ಓವೈಸ್‌ಗೆ ಢಿಕ್ಕಿ ಹೊಡೆದಿದ್ದು.
ಓವೈಸ್ ಅವರ ಮಂಡಿ ಶಹ್ರಾನಿಗೆ ಯಾವ ರೀತಿಯಲ್ಲಿ ಗುದ್ದಿದೆಯೆಂದರೆ, ಶಹ್ರಾನಿ ದವಡೆ, ಮುಖದ ಮೂಳೆಗಳು ಮುರಿದಿವೆ. ಆಂತರಿಕವಾಗಿ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಶಹ್ರಾನಿ ಕುಸಿದುಬಿದ್ದಿದ್ದಾರೆ. ಪ್ರಜ್ಞಾಹೀನರಂತೆ ಬಿದ್ದಿದ್ದರಿಂದ ಅವರನ್ನು ಕೂಡಲೇ ಸ್ಟ್ರೆಚರ್‌ನಲ್ಲಿ ಮೈದಾನದಿಂದ ಹೊರಕ್ಕೆ ಸಾಗಿಸಲಾಯಿತು.
ಅವರನ್ನು ವಿಶೇಷ ವಿಮಾನದಲ್ಲಿ ಜರ್ಮನಿಗೆ ಕಳುಹಿಸಲಾಗಿದೆ. ಪರಿಸ್ಥಿತಿ ಹೇಗಿದೆ ಎನ್ನುವುದು ಇನ್ನು ಮುಂದಷ್ಟೇ ಗೊತ್ತಾಗಬೇಕು. ಈ ವಿಶ್ವಕಪ್‌ನಿಂದಂತೂ ಅವರು ಹೊರಬಿದ್ದಿರುವುದು ಖಾತ್ರಿಯಾಗಿದೆ.
ನಡೆದಿದ್ದು ಹೇಗೆ?: ಶಹ್ರಾನಿ ರಕ್ಷಣ ಆಟಗಾರ, ಅವರು ಬಹುತೇಕ ಗೋಲುಕೀಪರ್ ಬಳಿಯೇ ಇರುತ್ತಾರೆ. ಅಲ್ ಓವೈಸ್ ಒಂದು ಗೋಲನ್ನು ತಡೆಯುವ ಯತ್ನದಲ್ಲಿದ್ದರು. ಆ ವೇಳೆ ಇಬ್ಬರ ನಡುವೆ ಢಿಕ್ಕಿಯಾಗಿದೆ. ಅದು ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗಿದೆ.