Advertisement

ವಿದೇಶೀಯರಿಗೂ ಪೌರತ್ವ ನೀಡಲು ಮುಂದಾದ ಸೌದಿ

10:01 AM Dec 06, 2019 | sudhir |

ರಿಯಾದ್‌: ಸೌದಿ ಅರೇಬಿಯಾದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿದೇಶೀಯರಿಗೂ ಪೌರತ್ವ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ವಿವಿಧ ವಲಯಗಳಲ್ಲಿನ ವೃತ್ತಿಪರರು, ತಜ್ಞರಿಗೆ ಪೌರತ್ವವನ್ನು ನೀಡುವುದಾಗಿ ಅಲ್ಲಿನ ಸರಕಾರ ಘೋಷಿಸಿದೆ.

Advertisement

ಭವಿಷ್ಯದ ದಿನಗಳಲ್ಲಿ ತೈಲ ಉತ್ಪಾದನೆ, ಮಾರಾಟ ಹೊರತಾದ ಆರ್ಥಿಕತೆಯನ್ನು ರೂಪಿಸಲು ಸೌದಿ ಅರೇಬಿಯಾ ಹವಣಿಸುತ್ತಿದ್ದು, ತನ್ನ ಆರ್ಥಿಕತೆಯನ್ನು ಗಟ್ಟಿಮಾಡಿಕೊಳ್ಳುವ ಉದ್ದೇಶದಿಂದ ಅದು ಈ ತೀರ್ಮಾನಕ್ಕೆ ಬಂದಿದೆ.

“ವಿಜ್ಞಾನಿಗಳು, ವೈದ್ಯರು, ಕೃಷಿ ತಜ್ಞರು, ನ್ಯೂಕ್ಲಿಯರ್‌-ಮರುಬಳಕೆ ಇಂಧನ ತಜ್ಞರು, ಕೃತಕ ಬುದ್ಧಿಮತ್ತೆ ಪರಿಣತರು ಸೇರಿದಂತೆ ವಿವಿಧ ವಲಯದ ಅತ್ಯುನ್ನತ ಪರಿಣತರಿಗೆ ಪೌರತ್ವ ನೀಡಲಾಗುವುದು. ಈ ಮೂಲಕ ಸೌದಿಯನ್ನು ಸಮೃದ್ಧಿ ಮತ್ತು ವೈವಿಧ್ಯ ದೇಶವನ್ನಾಗಿ ರೂಪಿಸಲಾಗುತ್ತದೆ. ಈ ಬಗ್ಗೆ ಅರಬ್‌ ಜಗತ್ತು ಹೆಮ್ಮೆ ಪಡುತ್ತದೆ’ ಎಂದು ಸರಕಾರದ ನಿರ್ಧಾರಗಳನ್ನು ಪ್ರಕಟಿಸುವ ವೇದಿಕೆ ಸೌದಿ ಪ್ರಾಜೆಕ್ಟ್ ಟ್ವೀಟ್‌ ಮಾಡಿದೆ. ಇದರೊಂದಿಗೆ ಯೆಮೆನ್‌ನ ಪರಿಣತರಿಗೂ ಪೌರತ್ವವನ್ನು ನೀಡುವುದಾಗಿ ಸೌದಿ ಹೇಳಿಕೊಂಡಿದೆ.

ಪರಿಣತರಿಗೆ ಪೌರತ್ವವನ್ನು ನೀಡುವ ಯೋಜನೆಯನ್ನು ಸುಮಾರು ಎರಡು ತಿಂಗಳ ಹಿಂದೆಯೇ, ಸೌದಿ ಸರಕಾರ ಪ್ರಸ್ತಾವಿಸಿತ್ತು. ವಿಷನ್‌ 2030 ಅನ್ವಯ ಸೌದಿಯ°ನು ಇನ್ನಷ್ಟು ಬಲಪಡಿಸಲು ಸೌದಿ ಅರಸರ ದೂರದೃಷ್ಟಿಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟನೆ ಹೇಳಿತ್ತು.

ಪೌರತ್ವ ಪಡೆಯುವುದು ಸಾಧ್ಯವೇ ಇರಲಿಲ್ಲ
ವಿದೇಶೀಯರು ಸೌದಿಯ ಪೌರತ್ವ ಪಡೆಯುವುದು ಈವರೆಗೆ ಸಾಧ್ಯವೇ ಇರಲಿಲ್ಲ. ಸತತ ಐದು ವರ್ಷಗಳ ವರೆಗೆ ಸೌದಿಯಲ್ಲಿ ವಾಸವಿದ್ದವರಿಗೆ ತಾತ್ಕಾಲಿಕ ಪೌರತ್ವವನ್ನಷ್ಟೇ ಸೌದಿ ನೀಡುತ್ತಿತ್ತು. ಅದಕ್ಕೂ ಹಲವಾರು ಷರತ್ತುಗಳನ್ನು ವಿಧಿಸುತ್ತಿತ್ತು. ಇದು ಹೊರತಾಗಿ ಸೌದಿಯ ಪ್ರಜೆಯಿಂದ ಜನಿಸಿದ ವಿದೇಶೀಯರಿಗೆ ಮಾತ್ರ ಹಲವು ಕಾನೂನು ಕ್ರಮಗಳ ಬಳಿಕ ಪೌರತ್ವ ಪಡೆಯುವುದಕ್ಕೆ ಅವಕಾಶವಿತ್ತು.

Advertisement

ಬದಲಾಗುತ್ತಿದೆ ಸೌದಿ
ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ, ಮಾರಾಟದಿಂದಲೇ ದೇಶ ನಡೆಸುತ್ತಿದ್ದ ಸೌದಿಗೆ ಈಗ ಜಗತ್ತು ನಿಧಾನಕ್ಕೆ ಅದರಿಂದ ದೂರವಾಗುತ್ತಿರುವುದನ್ನು ಪತ್ತೆ ಹಚ್ಚಿದೆ. ಮುಂದಿನ ದಿನಗಳಲ್ಲಿ ತೈಲಗಳಿಗೆ ಬೇಡಿಕೆ ಕಡಿಮೆಯಾದರೆ ಆರ್ಥಿಕತೆ ಕುಸಿಯಲಿದೆ ಎಂಬುದನ್ನು ಅದು ಮನಗಂಡಿದ್ದು ಇದಕ್ಕೆ ಪೂರ್ವಭಾವಿಯಾಗಿ ತನ್ನ ಕಟ್ಟುನಿಟ್ಟಿನ ಕಾನೂನುಗಳನ್ನು ಒಂದೊಂದಾಗಿ ಸಡಿಲಿಸುತ್ತಿದೆ. ಇದಕ್ಕೆ ಪೂರಕವಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ, ಹೆಣ್ಮಕ್ಕಳಿಗೆ ಚಾಲನೆ ಪರವಾನಿಗೆ ಲಭ್ಯತೆ, ಪ್ರವಾಸಿಗರಿಗೆ ಶೀಘ್ರ ವೀಸಾದಂತಹ ಕ್ರಮಗಳು, ವಸ್ತ್ರ ಸಂಹಿತೆಯ ಕಾನೂನು ಬದಲಾವಣೆಯನ್ನು ಅದು ಮಾಡಿದ್ದು ಈಗ ಪೌರತ್ವ ವಿಚಾರದಲ್ಲೂ ಉದಾರತನ ತೋರಲು ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next