ದುಬಾೖ: ಕೊರೊನಾ ಸೋಂಕಿನ ಭೀತಿಯಿಂದ ಹಲವು ನಿರ್ಬಂಧಗಳಿಗೆ ಒಳಗಾಗಿದ್ದ ಸೌದಿ ಅರೇಬಿಯಾದ ವಾರ್ಷಿಕ ಹಜ್ ಯಾತ್ರೆ ಈ ಬಾರಿ ಸರಾಗವಾಗಿ ನಡೆಯಲಿದ್ದು, ಕೊರೊನಾಪೂರ್ವ ಸ್ಥಿತಿಗೆ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2021ರಲ್ಲಿ ಸೌದಿ ಅರೇಬಿಯಾದ 60 ಸಾವಿರ ನಿವಾಸಿಗಳು ಯಾತ್ರೆ ಮಾಡಿದ್ದರೆ, ಕಳೆದ ವರ್ಷ 10 ಲಕ್ಷ ಮಂದಿ ಮೆಕ್ಕಾಗೆ ಆಗಮಿಸಿದ್ದರು. ಈ ಬಾರಿ ಎಲ್ಲ ನಿರ್ಬಂಧಗಳನ್ನೂ ತೆರವುಗೊಳಿ ಸಲಾಗಿದೆ. ಜತೆಗೆ ವಯಸ್ಸಿನ ಮಿತಿ ಯಿಲ್ಲದೇ ಕೊರೊನಾ ಪೂರ್ವದಂತೆಯೇ ಈ ವರ್ಷ ಹಜ್ ಯಾತ್ರೆ ಜರಗಲಿದೆ ಎಂದು ಉಮ್ರಾ ಸಚಿವ ತೌಫೀಕ್ ಅಲ್ ರಬಿಯಾ ಹೇಳಿದ್ದಾರೆ.
ಜತೆಗೆ ಯಾತ್ರಿಗಳ ಅಗತ್ಯತೆಗಳನ್ನು ಪೂರೈಸುವ ಪರವಾನಿಗೆ ಇರುವ ಜಗತ್ತಿನ ಯಾವುದೇ ಕಂಪೆನಿಗೂ ಹಜ್ ಯಾತ್ರೆಯ ಆಯೋಜನೆಗೆ ಅವಕಾಶ ಕಲ್ಪಿಸುವುದಾಗಿಯೂ ತಿಳಿಸಿದ್ದಾರೆ.
ಕೊರೊನಾ ಸೋಂಕಿಗೂ ಮೊದಲು ಪ್ರತೀ ವರ್ಷ ಇಸ್ಲಾಂನ ಪವಿತ್ರ ಮೆಕ್ಕಾ ನಗರಕ್ಕೆ ಲಕ್ಷಾಂತರ ಮಂದಿ ಯಾತ್ರಿಗಳು ಆಗಮಿಸುತ್ತಿದ್ದರು.
2019ರಲ್ಲಿ ಸುಮಾರು 24 ಲಕ್ಷ ಮಂದಿ ಹಜ್ ಯಾತ್ರೆ ಮಾಡಿದ್ದರು. 2020ರಲ್ಲಿ ಲಾಕ್‌ಡೌನ್‌ನಿಂದಾಗಿ ಸೌದಿ ಅರೇಬಿಯಾ ಸರಕಾರವು ಹಲವು ನಿರ್ಬಂಧಗಳನ್ನು ಹೇರಿತ್ತಲ್ಲದೇ ತನ್ನ 1,000 ನಿವಾಸಿಗಳಿಗಷ್ಟೇ ಯಾತ್ರೆಗೈಯ್ಯಲು ಅನುಮತಿ ನೀಡುವುದಾಗಿ ಘೋಷಿಸಿತ್ತು. ಜಗತ್ತಿನಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿಪಡೆದ 1918ರ ಫೂÉ ಸಾಂಕ್ರಾಮಿಕದ ಸಮಯದಲ್ಲೂ ಹಜ್ ಯಾತ್ರೆಗೆ ಇಂಥ ನಿರ್ಬಂಧಗಳನ್ನು ಹೇರಿರಲಿಲ್ಲ.