Advertisement

ಕತಾರ್‌ ಮೇಲೇಕೆ ಸಿಟ್ಟಾಯಿತು ಸೌದಿ?

11:06 AM Jun 07, 2017 | Harsha Rao |

ಸೌದಿ ಅರೇಬಿಯಾ ಮತ್ತು ಕತಾರ್‌ ಜಗಳಕ್ಕೆ ನಿಂತಿರುವುದರಿಂದ, ಉಗ್ರವಾದಿಗಳಿಗಂತೂ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಲಿದೆ. ಈಗ ಐಸಿಸ್‌, ಅಲ್‌ಖೈದಾ ಒಂದೋ ಕತಾರ್‌ಗೆ ನಿಷ್ಠವಾಗಿರಬೇಕು ಇಲ್ಲವೇ ಸೌದಿಗೆ ಜೈ ಅನ್ನಬೇಕು. ಒಟ್ಟಲ್ಲಿ ಒಂದು ದೇಶದ ಬೆಂಬಲವನ್ನಂತೂ ಅವು ಕಳೆದುಕೊಳ್ಳಲಿವೆ. 

Advertisement

“ಕತಾರ್‌ ಉಗ್ರವಾದಿಗಳಿಗೆ ಬೆಂಬಲ ನೀಡುತ್ತಿದೆ’ ಎಂದು ದೂಷಿಸಿ ಆ ರಾಷ್ಟ್ರದೊಂದಿಗೆ ತಮ್ಮ ರಾಜತಾಂತ್ರಿಕ ಸಂಬಂಧಗಳನ್ನು ತುಂಡರಿಸಿವೆ ಸೌದಿ ಅರೇಬಿಯಾ, ಬಹೆÅàನ್‌, ಯುಎಇ, ಈಜಿಪ್ಟ್, ಮಾಲ್ಡಿವ್ಸ್‌ ಮತ್ತು ಯೆಮೆನ್‌. ಅದರಲ್ಲೂ ಮುಖ್ಯವಾಗಿ ಕತಾರ್‌ನ ವಿರುದ್ಧ ಜೋರಾಗಿ ಮುಗಿಬಿದ್ದಿರುವುದು ಸೌದಿ ಅರೇಬಿಯಾ. ವಿಶೇಷವೆಂದರೆ ಒಂದೇ ರೀತಿಯ ಸಾಮಾಜಿಕ ಸಾಮ್ಯತೆಗಳು ಮತ್ತು ಅಂತಾರಾಷ್ಟ್ರೀಯ ನಂಟುಗಳನ್ನು ಹೊಂದಿರುವ ಕತಾರ್‌ ಮತ್ತು ಸೌದಿ ನಡುವೆ ಬಹಿರಂಗವಾಗಿ ಹೊಡೆದಾಟ ಆರಂಭವಾಗಿರುವುದು! 

ಕತಾರ್‌ ಮತ್ತು ಸೌದಿ ನೆರೆ ರಾಷ್ಟ್ರಗಳು. ಇವೆರಡೂ ತಮ್ಮ ವೈಭವೋಪೇತ ದೇಶೀಯ ಆರ್ಥಿಕತೆಯನ್ನು ಬೆಳೆಸಲು ಇಂಧನ ರಫ್ತಿನ ಮೇಲೆಯೇ ಹೆಚ್ಚು ಅವಲಂಬಿತವಾಗಿವೆ. ಕತಾರ್‌ ಮತ್ತು ಸೌದಿ ಒಂದೇ ರೀತಿಯ ಸಲಾಫಿ ಇಸ್ಲಾಮ್‌ ಅನ್ನೇ ಅನುಸರಿಸುತ್ತವೆ. ಈ ಸಾಮ್ಯತೆ ಇಲ್ಲಿಗೇ ನಿಲ್ಲುವುದಿಲ್ಲ. ಇವೆರಡಕ್ಕೂ ಅರಬ್‌ ಪ್ರಾಂತ್ಯದಲ್ಲಿ ಸಮಾನ ಶತ್ರುರಾಷ್ಟ್ರಗಳಿವೆ(ಮುಖ್ಯವಾಗಿ ಸಿರಿಯಾ). ಕತಾರ್‌ ಮತ್ತು ಸೌದಿ ಅಲ್‌ಕೈದಾ ಮತ್ತು ಐಎಸ್‌ಐಎಸ್‌ ಸೇರಿದಂತೆ ಅನೇಕ ಉಗ್ರ ಸಂಘಟನೆಗಳಿಗೆ ಹಣ ಒದಗಿಸುತ್ತಾ ಬಂದಿವೆ.

ನಿಮಗೆ ಆಶ್ಚರ್ಯವಾಗಬಹುದು. ಈಗ ಕತಾರ್‌ ಮತ್ತು ಸೌದಿ ನಡುವೆ ಸಮಸ್ಯೆ ಬಿಗಡಾಯಿಸಲು ಮುಖ್ಯ ಕಾರಣವೇನು ಗೊತ್ತೇ? ಇವೆರಡೂ ರಾಷ್ಟ್ರಗಳ ನಡುವಿನ ಸಾಮ್ಯತೆ! ತೈಲ ವಲಯದಲ್ಲಿ ಸೂಪರ್‌ ಪವರ್‌ ಆಗಬೇಕೆಂಬ ಜಟಾಪಟಿ ಮೊದಲಿ ನಿಂದಲೂ ಇವುಗಳ ಮಧ್ಯೆ ಇದೆ. ಓಪಿಇಸಿಯೇತರ ರಾಷ್ಟ್ರಗಳು ಹೆಚ್ಚು ಇಂಧನ ಉತ್ಪಾದನೆಯಲ್ಲಿ ತೊಡಗಲಾರಂಭಿಸಿವೆ, ಅತ್ತ ಚೀನಾ ಗ್ರೀನ್‌ ಎನರ್ಜಿ ಉತ್ಪಾದನೆಯಲ್ಲಿ ವೇಗವಾಗಿ ಹೆಜ್ಜೆಯಿಡುತ್ತಿದೆ. ಇವೆಲ್ಲ ಕಾರಣಗಳಿಂದಾಗಿ ತೈಲ ಬೆಲೆಗಳು ಸಾವರಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದೇ ಪರಿಣತರು ಭವಿಷ್ಯ ನುಡಿದಿದ್ದರು. ಪರಿಣಾಮವಾಗಿ ಸೌದಿ ಅರೇಬಿಯಾದ ಆರ್ಥಿಕತೆಗೆ ಪೆಟ್ಟು ಬೀಳ ಲಾರಂಭಿಸಿದೆ. ತನ್ನ ತೈಲ ಪ್ರತಿಸ್ಪರ್ಧಿಯನ್ನು ಮೂಲೆಗುಂಪಾಗಿಸದೇ ಸೌದಿಗೆ ಭದ್ರವಾಗಿ ನಿಲ್ಲಲು ಅನ್ಯ ದಾರಿಯಿಲ್ಲ. 

ಸೌದಿ ಮತ್ತು ಇತರ ರಾಷ್ಟ್ರಗಳು ಕತಾರ್‌ನೊಂದಿಗೆ ನಂಟು ಕಡಿದುಕೊಳ್ಳುವ ಘೋಷಣೆ ಮಾಡುತ್ತಿದ್ದಂತೆಯೇ ತೈಲ ಬೆಲೆಗಳಲ್ಲಿ ಹೆಚ್ಚಳವಾಗಿದೆ. ಹಾಗಿದ್ದರೆ ಈ ಬೆಲೆ ತಗ್ಗುವುದೇ ಇಲ್ಲವೇ? ಬೇಗನೇ ತಗ್ಗಲಿದೆ ಎನ್ನುತ್ತಾರೆ ಪರಿಣತರು. ಆದರೆ ಹೀಗೇನಾದರೂ ಆದರೆ ಸೌದಿ ಮತ್ತಷ್ಟು ಕಠಿಣತರ ಕ್ರಮಗಳಿಗೆ ಕೈ ಹಾಕಲಿದೆ ಹಾಗೂ ಇನ್ನಿತರ ರಾಷ್ಟ್ರಗಳಿಗೂ ಇದೇ ಗತಿ ಕಾಣಿಸಲಿದೆ ಎಂದೂ ಅವರು ವಾದಿಸುತ್ತಾರೆ. ಹಿಂದೆಯೂ ಸೌದಿ ಮತ್ತು ಕತಾರ್‌ನ ನಡುವೆ ಇದೇ ರೀತಿಯ ಜಗಳ ನಡೆದಿತ್ತಾದರೂ, ಈ ಬಾರಿಯ ಕದನ ಮಾತ್ರ ತೀವ್ರ ರೂಪದಲ್ಲಿದೆ. ಸೌದಿ ಅರೇಬಿಯಾ, ಕತಾರ್‌ನ ಜೊತೆ ನಂಟು ಕಡಿದುಕೊಳ್ಳಲು ಅನ್ಯ ರಾಷ್ಟ್ರಗಳ ಮನವೊಲಿಸಿ ದ್ದಷ್ಟೇ ಅಲ್ಲದೆ, ಕತಾರ್‌ ಮೂಲದ ಪ್ರಖ್ಯಾತ ಸುದ್ದಿ ಸಂಸ್ಥೆ ಅಲ್‌ಜಜೀರಾ ಮೇಲೂ ಮುಗಿಬಿದ್ದಿದೆ. ತನ್ನೊಡಲಲ್ಲಿರುವ ಅಲ್‌ಜಝೀರಾ ಕಚೇರಿಯನ್ನು ಮುಚ್ಚಿ, ಅದಕ್ಕೆ ಕೊಟ್ಟಿದ್ದ ಪರವಾನಗಿಯನ್ನು ಹಿಂಪಡೆದಿದೆ. ಕತಾರ್‌ನೊಂದಿಗಿನ ತನ್ನ ಗಡಿಗಳನ್ನೆಲ್ಲ ಭದ್ರಪಡಿಸಿರುವ ಸೌದಿ ಜಲ ಸಂಪರ್ಕವನ್ನು ಕಡಿತಗೊಳಿಸಿದೆ, ಆಹಾರದ ರಫ್ತು ಮತ್ತು ಆಮದನ್ನು ನಿಲ್ಲಿಸಿದೆ.  

Advertisement

ಒಂದು ರೀತಿಯಲ್ಲಿ ಸೌದಿ ಮತ್ತು ಯುಎಇ ಇನ್ನಿತರ ರಾಷ್ಟ್ರಗಳ ಜೊತೆಗೂಡಿ ಕತಾರ್‌ನ ಸುತ್ತಲೂ ಅದೃಶ್ಯ ಗೋಡೆಯನ್ನು ನಿರ್ಮಿಸಲಾರಂಭಿಸಿವೆ. 

ಕತಾರ್‌ ವರ್ಸಸ್‌ ಸೌದಿ: ಮೊದಲಿನಿಂದಲೂ ಸೌದಿಯ ಛಾಯೆ ಯಿಂದ ಹೊರಬಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಗೆ ವಿಶೇಷ ಸ್ಥಾನ ಕಲ್ಪಿಸಿಕೊಳ್ಳಬೇಕು, ಎಲ್ಲರಿಗಿಂತ ಭಿನ್ನ ಎಂದು ತೋರಿಸಿಕೊಳ್ಳಬೇಕೆಂಬ ಪ್ರಯತ್ನ ನಡೆಸುತ್ತ ಬಂದಿದೆ ಕತಾರ್‌. ಅದು ಕೆಲವೊಮ್ಮೆ ಗುಪ್ತವಾಗಿ, ಹಲವು ಬಾರಿ ಮುಕ್ತವಾಗಿ ಅಂತಾರಾ ಷ್ಟ್ರೀಯ ಸಂಬಂಧಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದೆ. 

ಈ ಹಾದಿಯಲ್ಲೇ ಕತಾರ್‌ ಇರಾನ್‌ನೊಂದಿಗೆ ಮಾಡಿಕೊಂಡಿ ರುವ ಹೊಂದಾಣಿಕೆಗಳನ್ನು ಗಮನಿಸಬೇಕು. ಒಂದೆಡೆ ಸೌದಿ ಅರೇಬಿಯಾ ಸೇರಿದಂತೆ ಅನೇಕ ಸುನ್ನಿ ರಾಷ್ಟ್ರಗಳು, ಶಿಯಾ ಬಹುಸಂಖ್ಯಾತ ಇರಾನ್‌ನನ್ನು ಬಹಳ ದ್ವೇಷಿಸುತ್ತವೆ. ಹಾಗೆಂದು ಕತಾರ್‌ ಏನೂ ಇರಾನ್‌ನ ಮಿತ್ರ ರಾಷ್ಟ್ರವಲ್ಲ. ಆದರೂ ವಾಸ್ತವಿಕ ನೆಲೆಗಟ್ಟಿನಲ್ಲಿ ಯೋಚಿಸಿದ ಅದು, ಆ ದೇಶದೊಂದಿಗೆ ಹಲವು ಔದ್ಯಮಿಕ ವ್ಯವಹಾರಗಳನ್ನು ಮತ್ತು ಮುಖ್ಯವಾಗಿ ಅನಿಲ ಒಪ್ಪಂದಗಳನ್ನು ಮಾಡಿಕೊಂಡಿದೆ. 

ಇರಾನ್‌ನೊಂದಿಗಿನ ಕತಾರ್‌ನ ಸಂಬಂಧವನ್ನು ಮೊದಲಿನಿಂದಲೂ ಟೀಕಿಸುತ್ತಾ ಬಂದ ಸೌದಿಗೆ ಇತ್ತೀಚೆಗಿನ ವಿದ್ಯಮಾನವೊಂದು ಬಹಳ ಕಣ್ಣು ಕೆಂಪಾಗಿಸಿತ್ತು. ಕತಾರ್‌ನ ಸುಪ್ರೀಂ ನಾಯಕ ಶೇಖ್‌ ತಮೀಮ್‌ ಬಿನ್‌ ಹಮದ್‌ ಅಲ್‌ಥಾನಿಯವರು ಇರಾನ್‌ ಬಗ್ಗೆ ಹಿತವಾಗಿ ಮಾತನಾಡಿದ ಸುದ್ದಿ ಕತಾರಿ ಸರಕಾರದ ನ್ಯೂಸ್‌ ಏಜೆನ್ಸಿಯ ಟ್ವೀಟ್‌ಗಳಲ್ಲಿ ಪ್ರಕಟವಾಗಿತ್ತು. ಇದಷ್ಟೇ ಅಲ್ಲ, ಅಲ್‌ಥಾನಿಯವರು ಲೆಬನಾನ್‌ನ ಶಿಯಾ ಬಂಡುಕೊರ ಗುಂಪೊಂದನ್ನೂ ಹೊಗಳಿದ ಸುದ್ದಿಯೂ ಹೊರಬಂದಿತು. ಈ ಗುಂಪಿಗೆ ಇರಾನ್‌ನೊಂದಿಗೆ ಆಪ್ತ ಮೈತ್ರಿಯಿದೆ. ಸೌದಿ ಅರೇಬಿಯಾ ಮತ್ತು ಅಮೆರಿಕ ಇದನ್ನು ಉಗ್ರ ಸಂಘಟನೆ ಎಂದೇ ಪರಿಗಣಿಸುತ್ತವೆ. ಈ ಕಾರಣಕ್ಕಾಗಿಯೇ ಅಲ್‌ಥಾನಿ ವಿರುದ್ಧ ಸೌದಿ ಸೇರಿದಂತೆ ಅನೇಕ ರಾಷ್ಟ್ರಗಳ ಕೋಪ ವಿಪರೀತವಾಗಿಬಿಟ್ಟಿತು. ಆದಾಗ್ಯೂ ಸರ್ಕಾರಿ ಸುದ್ದಿ ಏಜೆನ್ಸಿಯ ಟ್ವಿಟರ್‌ ಖಾತೆ ಹ್ಯಾಕ್‌ ಆಗಿತ್ತು, ಕಿಡಿಗೇಡಿಗಳು ಈ ಸುಳ್ಳುಸುದ್ದಿಯನ್ನು ಹರಡಿದ್ದಾರೆ ಎಂದು ಕತಾರ್‌ ವಾದಿಸುತ್ತಿದೆಯಾದರೂ, ಸೌದಿ ಮಾತ್ರ ಈ ಮಾತನ್ನು ನಂಬಲು ತಯ್ನಾರಿಲ್ಲ. 

ಈಜಿಪ್ಟ್ ಏಕೆ ಮುನಿಸಿಕೊಂಡಿದೆ?: ಹಾಗೆ ನೋಡಿದರೆ ಸೌದಿಗೂ ಈಜಿಪ್ಟ್ಗೂ ಹೇಳಿಕೊಳ್ಳುವಂಥ ಸಂಬಂಧ-ಸಾಮ್ಯತೆಯೇನೂ ಇಲ್ಲ. ಈಜಿಪ್ಟ್ ಜಾತ್ಯತೀತ ರಾಷ್ಟ್ರವಾಗಿದ್ದು, ಅನೇಕ ಧರ್ಮಗಳ ನೆಲೆವೀಡಾಗಿದೆ. ಆದರೆ ಆ ರಾಷ್ಟ್ರದ ಮೇಲೆ ಐಎಸ್‌ಐಎಸ್‌ನಂಥ ಉಗ್ರ ಗುಂಪುಗಳು ದಾಳಿ ನಡೆಸುತ್ತಲೇ ಇವೆ. ಇವುಗಳಿಗೆಲ್ಲ ಸೌದಿ ಮತ್ತು ಕತಾರ್‌ ಬೆಂಬಲ ನೀಡುತ್ತಿವೆ ಎನ್ನುವುದು ವಿಶೇಷ. ಆದರೆ, ಕತಾರ್‌ ಮುಸ್ಲಿಂ ಬ್ರದರ್‌ಹುಡ್‌ಗೆ ಬೆಂಬಲ ನೀಡುತ್ತಿದೆ ಎನ್ನುವುದೇ ಈಜಿಪ್ಟ್ನ ಮುನಿಸಿಗೆ ಮುಖ್ಯ ಕಾರಣ. ಅಮೆರಿಕದ ಅಂದಿನ ಅಧ್ಯಕ್ಷ ಒಬಾಮಾ ಯಾವಾಗ ಈಜಿಪ್ಟ್ನ ಅಧ್ಯಕ್ಷ ಹೊಸ್ನಿ ಮುಬಾರಕ್‌ರ ಕೈಬಿಟ್ಟಿದ್ದರೋ ಆಗ ಆ ದೇಶ ಮುಸ್ಲಿಂ ಬ್ರದರ್‌ ಹುಡ್‌ನ‌ ಹಿಡಿತಕ್ಕೆ ಸಿಲುಕಿತ್ತು(2012-1013). ಕಟ್ಟರ್‌ ಸಂಪ್ರದಾ ಯವಾದಿ ಮುಸ್ಲಿಂ ಬ್ರದರ್‌ಹುಡ್‌ ಆ ಅವಧಿಯಲ್ಲಿ ಈಜಿಪ್ಟ್ನ ನಾಗರಿಕರಿಗೆ ಕೊಟ್ಟ ತೊಂದರೆ ಅಷ್ಟಿಷ್ಟಲ್ಲ. ಈಗ ಆ ದೇಶದಲ್ಲಿ ಮತ್ತೆ ಜಾತ್ಯತೀತ ಆಡಳಿತ ಅನುಷ್ಠಾನಕ್ಕೆ ಬಂದಿದೆಯಾದರೂ, ಕತಾರ್‌ ಈ ಮುಸ್ಲಿಂ ಬ್ರದರ್‌ಹುಡ್‌ಗೆ ಬೆಂಬಲ ನೀಡುತ್ತಲೇ ಇದೆ ಎನ್ನುವ ಸಂಗತಿ ಈಜಿಪ್ಟ್ಗೆ ವಿಪರೀತ ಸಿಟ್ಟುಬರಿಸುತ್ತಿದೆ. ಸತ್ಯವೇನೆಂದರೆ ಕತಾರ್‌ನ ಬಗ್ಗೆ ಈಜಿಪ್ಟ್ನ ಸುನ್ನಿಗಳು, ಶಿಯಾಗಳು, ಕ್ರಿಶ್ಚಿಯನ್ನರು ಕೂಡ ಕೆಟ್ಟ ಭಾವನೆಯನ್ನೇ ಹೊಂದಿದ್ದಾರೆ. 

ಸಿರಿಯನ್‌ ಸಂಬಂಧ: ಸಿರಿಯಾ ಬಿಕ್ಕಟ್ಟಿನಲ್ಲಿ ಸೌದಿ ಮತ್ತು ಕತಾರ್‌ನ ಪಾತ್ರವಿದೆ ಎನ್ನುವುದು ಜಗತ್ತಿಗೆ ಗೊತ್ತಿರುವಂಥದ್ದೆ. ವಿಶೇಷವೆಂದರೆ ಇವೆರಡೂ ರಾಷ್ಟ್ರಗಳೂ ಐಸಿಸ್‌, ಅಲ್‌ಖೈದಾ ಸೇರಿದಂತೆ ಇತರೆ ಸಲಾಫಿ ಉಗ್ರ ಗುಂಪುಗಳಿಗೆ ಹಣ ಮತ್ತು ಶಸ್ತ್ರಾಸ್ತ್ರ ಪೂರೈಸುತ್ತಾ, ಅಲ್ಲಿನ ಬಿಕ್ಕಟ್ಟಿನಲ್ಲಿ ಪರೋಕ್ಷವಾಗಿ ಕೈಜೋಡಿಸಿ ನಿಂತಿವೆ! ಸಿರಿಯಾಕ್ಕೆ ಕತಾರ್‌ ಆಗಲಿ ಅಥವಾ ಸೌದಿಯೊಂದಿಗಾಗಲಿ ಅಷ್ಟೇನೂ ಗಟ್ಟಿಯಾದ ರಾಜತಾಂತ್ರಿಕ ಸಂಪರ್ಕವಿಲ್ಲ. 

ಆದರೆ ಸೌದಿ ಮತ್ತು ಕತಾರ್‌ ಜಗಳಕ್ಕೆ ನಿಂತಿರುವುದರಿಂದ, ಉಗ್ರವಾದಿಗಳಿಗಂತೂ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಲಿದೆ. ಈಗ ಐಸಿಸ್‌, ಅಲ್‌ಖೈದಾ ಒಂದೋ ಕತಾರ್‌ಗೆ ನಿಷ್ಠವಾಗಿರ ಬೇಕು ಇಲ್ಲವೇ ಸೌದಿಗೆ ಜೈ ಅನ್ನಬೇಕು. ಒಟ್ಟಲ್ಲಿ ಒಂದು ದೇಶ ದ ಬೆಂಬಲವನ್ನಂತೂ ಅವು ಕಳೆದುಕೊಳ್ಳಲಿವೆ. 

ಅಲ್ಲದೇ ಈಗ ಸಿರಿಯಾದಲ್ಲಿ ಕತಾರ್‌ ಮತ್ತು ಸೌದಿ ಪ್ರಾಯೋ ಜಕತ್ವದ ಉಗ್ರವಾದಿಗಳು ಜೋರಾಗಿಯೇ ಪೆಟ್ಟು ತಿನ್ನುತ್ತಾ ಸಾಗಿದ್ದಾರೆ. ಉಗ್ರರೊಂದಿಗಿನ ಯುದ್ಧದಲ್ಲಿ ಗೆಲ್ಲುವ ಹಾದಿಯಲ್ಲಿದೆ ಸಿರಿಯಾ. ಕತಾರ್‌ ತನ್ನೊಡಲಿಂದ ಟರ್ಕಿಯವರೆಗೆ ಗ್ಯಾಸ್‌ ಪೈಪ್‌ಲೈನ್‌ ನಿರ್ಮಿಸಬೇಕು ಎಂಬ ಮಹತ್ವಾಕಾಂಕ್ಷೆಯಲ್ಲಿತ್ತು. 

ಈ ಪೈಪ್‌ಲೈನ್‌ ಸಿರಿಯಾದ ಮೂಲಕವೇ ಹಾದುಹೋಗ ಬೇಕಿತ್ತು. ಆದರೆ  ಯಾವುದೇ ಕಾರಣಕ್ಕೂ ಸಿರಿಯನ್‌ ಸರಕಾರ ಈ ಯೋಜನೆಗೆ ಒಪ್ಪಿಗೆ ನೀಡುವುದಿಲ್ಲ ಎನ್ನುವುದು ಅದಕ್ಕೆ ಗೊತ್ತಾ ಯಿತು. ಹೀಗಾಗಿ ಸಿರಿಯಾದ ಚುನಾಯಿತ ಸರಕಾರವನ್ನು ಕೆಳಕ್ಕುರುಳಿಸುವುದಕ್ಕಾಗಿ ಅದು ಉಗ್ರರಿಗೆ ಬೆಂಬಲ ನೀಡಿದ್ದು.  ಈಗ ಉಗ್ರರ ವಿರುದ್ಧದ‌ ಹೋರಾಟದಲ್ಲಿ ಸಿರಿಯನ್‌ ಸರಕಾರ ಮೇಲುಗೈ ಸಾಧಿಸುತ್ತಿದೆ. ಒಟ್ಟಲ್ಲಿ ಕತಾರ್‌ನ ಮಹತ್ವಾಕಾಂಕ್ಷಿ ಗ್ಯಾಸ್‌ಪೈಪ್‌ಲೈನ್‌ ಯೋಜನೆ ಕನಸಾಗಿಯೇ ಉಳಿದುಹೋಗಲಿದೆ. 

ಮಜವೆಂದರೆ ಔದ್ಯಮಿಕ ವಿಸ್ತರಣೆಗಾಗಿ ಕತಾರ್‌ ಇರಾನ್‌ನತ್ತ ತಿರುಗಿದೆಯಾದರೂ, ಕತಾರಿ ಪ್ರಾಯೋಜಿತ ಉಗ್ರರ ವಿರುದ್ಧವೇ ಸಿರಿಯಾದಲ್ಲಿ ಯುದ್ಧ ಮಾಡುತ್ತಿದೆ ಇರಾನ್‌.  

ಒಟ್ಟಲ್ಲಿ ಕತಾರ್‌ ಮತ್ತು ಸೌದಿ ನಡುವಿನ ಜಗಳ ಇಲ್ಲಿಗೇ ನಿಲ್ಲು ವುದಿಲ್ಲವಾದರೂ, ಉಗ್ರಸಂಘಟನೆಗಳಿಗಂತೂ ತುಸು ಮಟ್ಟಿಗೆ ಹಾನಿಯಾಗಲಿರುವುದು ಸತ್ಯ!
(ಲೇಖಕರು ಅಮೆರಿಕದ ಪತ್ರಕರ್ತರು)

– ಗ್ಯಾರಿ ಆ್ಯಡಂ

Advertisement

Udayavani is now on Telegram. Click here to join our channel and stay updated with the latest news.

Next