ರಿಯಾದ್: ಸೆಪ್ಟೆಂಬರ್ ಎರಡನೇ ವಾರದಲ್ಲಿ ಭಾರತಕ್ಕೆ ಆಗಮಿಸುವ ಮುನ್ನ ಸೌದಿ ಅರೇಬಿಯ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಸೌದಿ ಮೂಲಗಳು ತಿಳಿಸಿವೆ.
ಸೆ.10ರಂದು ಸಲ್ಮಾನ್ ಅವರು ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಅದಕ್ಕೂ ಮುನ್ನ ಇಸ್ಲಾಮಾಬಾದ್‌ಗೆ ಅವರು ಭೇಟಿ ನೀಡಲಿದ್ದು, ಇಲ್ಲಿ ಕೇವಲ 4ರಿಂದ 6 ಗಂಟೆಗಳ ಕಾಲ ಇರಲಿದ್ದಾರೆ.
ಈ ವೇಳೆ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್-ಉಲ್-ಹಕ್ ಕಾಕರ್ ಮತ್ತು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳ ಕುರಿತು ತನ್ನದು ಸಮತೋಲನ ದೃಷ್ಟಿಕೋನ ಎಂದು ನಿರೂಪಿಸಲು ಸೌದಿ ಅರೇಬಿಯ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಇಸ್ಲಾಬಾದ್‌ಗೆ ಭೇಟಿ ನೀಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಇನ್ನೊಂದೆಡೆ, ತೀವ್ರ ಆರ್ಥಿಕ ದುಸ್ಥಿತಿ ಎದುರಿಸುತ್ತಿರುವ ಪಾಕ್‌ನಲ್ಲಿ ಸಾಮಾನ್ಯ ನಾಗರಿಕರು ಬೆಲೆ ಏರಿಕೆಯಿಂದ ಬಳಲುತ್ತಿದ್ದಾರೆ. ಅಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 305 ಪಾಕಿಸ್ತಾನಿ ರೂ.ಗೆ ಮುಟ್ಟಿದೆ.