Advertisement

ಧನಂಜಯ ಡಿ ಸಿಲ್ವ ಶತಕ: ಲಂಕಾ ದಾಳಿಗೆ ಶಕೀಲ್‌-ಸಲ್ಮಾನ್‌ ಸಡ್ಡು

11:29 PM Jul 17, 2023 | Team Udayavani |

ಗಾಲೆ: ಅರ್ಧದಷ್ಟು ಆಟಗಾರರನ್ನು 101 ರನ್‌ ಆಗುವಷ್ಟರಲ್ಲಿ ಕಳೆದುಕೊಂಡ ಪಾಕಿಸ್ಥಾನಕ್ಕೆ ಸೌದ್‌ ಶಕೀಲ್‌ ಮತ್ತು ಆಘಾ ಸಲ್ಮಾನ್‌ ಸೇರಿಕೊಂಡು ಆಸರೆ ಒದಗಿಸಿದ್ದಾರೆ. ಶ್ರೀಲಂಕಾದ 312 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡುತ್ತಿರುವ ಪಾಕಿಸ್ಥಾನ ಗಾಲೆ ಟೆಸ್ಟ್‌ ಪಂದ್ಯದ ದ್ವಿತೀಯ ದಿನ 5 ವಿಕೆಟ್‌ ನಷ್ಟಕ್ಕೆ 221 ರನ್‌ ಮಾಡಿದೆ.

Advertisement

ಶ್ರೀಲಂಕಾ 6 ವಿಕೆಟಿಗೆ 242 ರನ್‌ ಗಳಿಸಿ ಮೊದಲ ದಿನದಾಟ ಮುಗಿಸಿತ್ತು. 94 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಧನಂಜಯ ಡಿ ಸಿಲ್ವ 122ರ ತನಕ ಸಾಗಿದರು. ಇದು ಅವರ 10ನೇ ಟೆಸ್ಟ್‌ ಶತಕ. 214 ಎಸೆತ ನಿಭಾಯಿಸಿದ ಧನಂಜಯ 12 ಬೌಂಡರಿ ಹಾಗೂ 3 ಸಿಕ್ಸರ್‌ ಬಾರಿಸಿದರು. ಕೊನೆಯ ಆಟಗಾರ ವಿಶ್ವ ಫೆರ್ನಾಂಡೊ 21 ರನ್‌ ಮಾಡಿದರು. ಪಾಕಿಸ್ಥಾನದ ಬೌಲಿಂಗ್‌ ಸರದಿಯಲ್ಲಿ ಮಿಂಚಿದವರೆಂದರೆ ಶಾಹೀನ್‌ ಶಾ ಅಫ್ರಿದಿ, ನಸೀಮ್‌ ಶಾ ಮತ್ತು ಅಬ್ರಾರ್‌ ಅಹ್ಮದ್‌. ಮೂವರೂ 3 ವಿಕೆಟ್‌ ಕೆಡವಿದರು.

ಪ್ರಭಾತ್‌ ಜಯಸೂರ್ಯ, ರಮೇಶ್‌ ಮೆಂಡಿಸ್‌ ಮತ್ತು ಕಸುನ್‌ ರಜಿತ ಬೌಲಿಂಗ್‌ ದಾಳಿಗೆ ಪಾಕಿಸ್ಥಾನದ ಅಗ್ರ ಕ್ರಮಾಂಕ ತೀವ್ರ ಕುಸಿತ ಕಂಡಿತು. 101 ರನ್ನಿಗೆ 5 ವಿಕೆಟ್‌ ಉರುಳಿತು. ಈ ಹಂತದಲ್ಲಿ ಸೌದ್‌ ಶಕೀಲ್‌ (ಬ್ಯಾಟಿಂಗ್‌ 69) ಮತ್ತು ಆಘಾ ಸಲ್ಮಾನ್‌ (ಬ್ಯಾಟಿಂಗ್‌ 61) 6ನೇ ವಿಕೆಟಿಗೆ 120 ರನ್‌ ಪೇರಿಸಿ ತಂಡವನ್ನು ಆಧರಿಸಿ ನಿಂತಿದ್ದಾರೆ. ಸದ್ಯ ಪಾಕ್‌ 91 ರನ್ನುಗಳ ಹಿನ್ನಡೆಯಲ್ಲಿದೆ.

ಸಂಕ್ಷಿಪ್ತ ಸ್ಕೋರ್‌
ಶ್ರೀಲಂಕಾ-312 (ಧನಂಜಯ ಡಿ ಸಿಲ್ವ 122, ಏಂಜೆಲೊ ಮ್ಯಾಥ್ಯೂಸ್‌ 64, ಸಮರವಿಕ್ರಮ 36, ಕರುಣಾರತ್ನೆ 29, ಅಬ್ರಾರ್‌ ಅಹ್ಮದ್‌ 68ಕ್ಕೆ 3, ಶಾಹೀನ್‌ ಅಫ್ರಿದಿ 86ಕ್ಕೆ 3, ನಸೀಮ್‌ ಶಾ 90ಕ್ಕೆ 3). ಪಾಕಿಸ್ಥಾನ-5 ವಿಕೆಟಿಗೆ 221 (ಸೌದ್‌ ಶಕೀಲ್‌ ಬ್ಯಾಟಿಂಗ್‌ 69, ಆಘಾ ಸಲ್ಮಾನ್‌ ಬ್ಯಾಟಿಂಗ್‌ 61, ಶಾನ್‌ ಮಸೂದ್‌ 39, ಪ್ರಭಾತ್‌ ಜಯಸೂರ್ಯ 83ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next