Advertisement

MS: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿಗೆ ಸತ್ಯು ಆಯ್ಕೆ

12:44 PM Mar 06, 2024 | Team Udayavani |

ಬೆಂಗಳೂರು: 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿಗೆ ಹಿರಿಯ ಚಲನಚಿತ್ರ ನಿರ್ದೇಶಕ ಎಂ.ಎಸ್‌. ಸತ್ಯು ಆಯ್ಕೆಯಾಗಿದ್ದಾರೆ. 2023-24ನೇ ಸಾಲಿನ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿ ಆಯ್ಕೆಗೆ ರಚಿಸಿದ್ದ ಆಯ್ಕೆ ಸಮಿತಿಯು ಸೋಮವಾರ ನಡೆಸಿದ ಸಭೆಯಲ್ಲಿ
ಮೂವರು ಸಂಭಾವ್ಯರನ್ನು ಆಯ್ಕೆ ಮಾಡಿ ಪಟ್ಟಿ ಸಲ್ಲಿಸಿತ್ತು ಅವರಲ್ಲಿ ಎಂ.ಎಸ್‌. ಸತ್ಯು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಸರ್ಕಾರ ಆದೇಶ ಹೊರಡಿಸಿದೆ.

Advertisement

ಸತ್ಯುಗೆ ಅಭಿನಂದನೆ: ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕ, ಹಿರಿಯ ರಂಗಕರ್ಮಿ ಹಾಗೂ ಕಲಾ ನಿರ್ದೇಶಕ ಮೈಸೂರು ಶ್ರೀನಿವಾಸ ಸತ್ಯು (ಎಂ. ಎಸ್‌. ಸತ್ಯು) ಅವರು ಕಲಾಜಗತ್ತಿಗೆ ಸಲ್ಲಿಸಿರುವ ಅನನ್ಯ ಸೇವೆಯನ್ನು ಗುರುತಿಸಿ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ತಿಳಿಸಿದ್ದಾರೆ. ಈ ಕುರಿತು ಎಕ್ಸ್‌ ಖಾತೆಯಲ್ಲಿ ಸಂತಸ ಹಂಚಿಕೊಂಡಿರುವ ಸಿಎಂ, ಸತ್ಯು ಅವರ ನಿರ್ದೇಶನದ ಹಿಂದಿ ಚಿತ್ರ ಗರಂ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದರೆ, ಕನ್ನಡದ ಬರ ಚಿತ್ರವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿತ್ತು. ಕಲಾ ನಿರ್ದೇಶಕರಾಗಿ ಅವರು ನಿರ್ದೇಶಿಸಿದ ಮೊದಲ ಚಲನಚಿತ್ರವಾದ ಹಕೀಕತ್‌ ಫಿಲ್ಮ್ ಫೇರ್‌ ಪ್ರಶಸ್ತಿ ಪಡೆದಿತ್ತು.

ದಾರಾಶೀಕೋ ನಾಟಕವು ಆಧುನಿಕ ಉತ್ಕೃಷ್ಟ ನಾಟಕವೆಂದು ಗುರುತಿಸಲ್ಪಟ್ಟಿದ್ದು ಅವರ ಇನ್ನೊಂದು ಸಾಧನೆಯಾಗಿದೆ. ಹೀಗೆ ನಮ್ಮೂರಿನಲ್ಲಿ ಹುಟ್ಟಿದ ಮೇರು ಸಾಧಕ, ಹಿರಿಯ ರಂಗಕರ್ಮಿಯೊಬ್ಬರು ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅತ್ಯಂತ ಖುಷಿಯ ವಿಚಾರ ಎಂದಿದ್ದಾರೆ.

ಎಂಎಸ್‌ ಸತ್ಯು ಪರಿಚಯ:
ಎಂಎಸ್‌ ಸತ್ಯು( ಮೈಸೂರು ಶ್ರೀನಿವಾಸ ಸತ್ಯು) 1930ರ ಜುಲೈ 6ರಂದು ಮೈಸೂರಿನಲ್ಲಿ ಜನಿಸಿದ್ದು, ಪ್ರಸಿದ್ಧ ರಂಗನಿರ್ದೇಶಕರು, ಚಲನಚಿತ್ರ ನಿರ್ದೇಶಕರಾಗಿ ಪ್ರಸಿದ್ಧರಾಗಿದ್ದಾರೆ. ಸತ್ಯು ಅವರು ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದು, ನಂತರ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಮುಗಿಸುವಷ್ಟರಲ್ಲಿ ರಂಗಚಟುವಟಿಕೆ ಮತ್ತು ಸಿನಿಮಾ ರಂಗದತ್ತ ಅವರ ಮನಸು ಸೆಳೆದಿದ್ದವು. 1952ರಲ್ಲಿ ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟು ಮುಂಬೈಗೆ ತೆರಳಿದ್ದರು.

ಸುಮಾರು ನಾಲ್ಕು ವರ್ಷಗಳ ಅಲೆದಾಟದ ನಂತರ ಚೇತನ್‌ ಆನಂದ್‌ ಅವರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವ ಅವಕಾಶ ಸತ್ಯು ಅವರಿಗೆ ಲಭಿಸಿತ್ತು. ಇದು ಅವರ ಜೀವನದ ದೊಡ್ಡ ತಿರುವಾಯಿತು. ಚೇತನ್‌ ಆನಂದ್‌ ಅವರ ಹಕೀಕತ್‌ ಎಂಬ ಚಲನಚಿತ್ರದಲ್ಲಿ ಕಲಾನಿರ್ದೇಶಕರಾಗಿ ಕೆಲಸ ಮಾಡಿ ಫಿಲ್ಮ್‌ ಫೇರ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ಎಂಎಸ್‌ ಅವರು ರಂಗಕರ್ಮಿ, ನಿರ್ದೇಶಕಿ ಶಮಾ ಜೈದಿ ಅವರನ್ನು ವಿವಾಹವಾಗಿದ್ದರು. ಇವರ ನಿರ್ದೇಶನದ ಮೊದಲ ಚಿತ್ರ ಗರಂ ಹವಾ 1950ರ ಮಾರ್ಕಿಸ್ಟ್‌ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಧರಿಸಿದ್ದಾಗಿತ್ತು. ಈ ಸಿನಿಮಾದಲ್ಲಿ ಬಲರಾಜ್‌ ಸಾಹ್ನಿ ಮತ್ತು ಕೈಫಿ ಅಜ್ಮಿ ನಟಿಸಿದ್ದರು. ಈ ಸಿನಿಮಾ ಹಲವಾರು ರಾಷ್ಟ್ರೀಯ ಪ್ರಶಸ್ತಿ ಪಡೆದಿತ್ತು. ಎಂಎಸ್‌ ಸತ್ಯು ಅವರ ದಾರಾ ಶಿಕೋ ಆಧುನಿಕ ಉತ್ಕೃಷ್ಟ ನಾಟಕ ಎಂದು ಪರಿಗಣಿಸಲಾಗಿದೆ.

Advertisement

ಮುದ್ರಾ ರಾಕ್ಷಸ, ಆಖ್ರಿ ಶಮಾ, ರಾಶೋಮಾನ್‌, ಬಕ್ರಿ, ಗಿರಿಜಾ ಕೆ ಸಪ್ನೆ, ಮೋಟೆ ರಾಮ್‌ ಕಾ ಸತ್ಯಾಗ್ರಹ, ಗುಲೇಬಕಾವಲಿ ಪ್ರಮುಖ ನಾಟಕಗಳಾಗಿವೆ. ಅದೇ ರೀತಿ ಏಕ್‌ ಥಾ ಚೋಟು ಏಕ್‌ ಥಾ ಮೋಟು, ಚಿತೆಗೂ ಚಿಂತೆ, ಕನ್ನೇಶ್ವರರಾಮ, ಬರ, ಸೂಖಾ, ಘಳಿಗೆ, ಕೊಟ್ಟ ಸತ್ಯು ನಿರ್ದೇಶನದ ಪ್ರಮುಖ ಸಿನಿಮಾಗಳು.

Advertisement

Udayavani is now on Telegram. Click here to join our channel and stay updated with the latest news.

Next