1987ರಲ್ಲಿ “ಸತ್ಯಂ ಶಿವಂ ಸುಂದರಂ’ ಎಂಬ ಚಿತ್ರ ಬಿಡುಗಡೆಯಾಗಿತ್ತು. ವಿಷ್ಣುವರ್ಧನ್ ಆ ಚಿತ್ರದಲ್ಲಿ ತ್ರಿಪಾತ್ರದಲ್ಲಿ ನಟಿಸಿದ್ದರು. ಅವರೊಂದಿಗೆ ರಾಧಿಕಾ, ಸುಮಿತ್ರ, ವಜ್ರಮುನಿ ಇತರರು ಅಭಿನಯಿಸಿದ್ದರು. ಈಗೇಕೆ ಆ ಸಿನಿಮಾ ವಿಷಯ ಅಂತೀರಾ, ಈಗ ಕಿರುತೆರೆಯಲ್ಲಿ “ಸತ್ಯಂ ಶಿವಂ ಸುಂದರಂ’ ಎಂಬ ಧಾರಾವಾಹಿ ಮೂಡಿಬರುತ್ತಿದೆ.
ಹೌದು, ಸ್ಟಾರ್ ಸುವರ್ಣದಲ್ಲಿ ಹೊಸದಾಗಿ ಪ್ರಸಾರ ಆಗುತ್ತಿರುವ ಈ ಧಾರಾವಾಹಿಯಲ್ಲಿ ಶ್ರೀಮಂತ ರಾಜ್‌ಅರಸ್ ಮನೆತನದ ಕಥೆ ಹೇಳಲಾಗುತ್ತಿದೆ. ಈ ಧಾರಾವಾಹಿಯ ವಿಶೇಷವೆಂದರೆ, ಇದೇ ಮೊದಲ ಸಲ ನಟರಾದ ನೀನಾಸಂ ಅಶ್ವತ್ಥ್, ಆದಿ ಲೋಕೇಶ್, ಸುಷ್ಮಾ ವೀರ್ ಕಾಣಿಸಿಕೊಳ್ಳುತ್ತಿದ್ದಾರೆ.
ಇವರೊಂದಿಗೆ ನಟ ಚೇತನ್ ಚಂದ್ರ ಕೂಡ ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇನ್ನು, ಹಿರಿಯ ನಟಿ ಭಾರ್ಗವಿ ನಾರಾಯಣ್ ಅವರಿಲ್ಲಿ ಕಲ್ಯಾಣಿ ರಾಜ್ ಅರಸ್ ಎಂಬ ಪಾತ್ರ ಮಾಡುತ್ತಿದ್ದಾರೆ.ಬಿಡದಿ ಬಳಿ ಬೃಹತ್ ಸೆಟ್ ನಿರ್ಮಿಸಿ, ಚಿತ್ರೀಕರಿಸುತ್ತಿರುವ ಈ ಧಾರಾವಾಹಿಯಲ್ಲಿ, ದೊಡ್ಡ ಮನೆಯ ದೊಡ್ಡ ಸಮಸ್ಯೆಗಳು,
ಆ ಕುಟುಂಬದೊಳಗಿನ ಕಲಹ, ಹಣದ ವ್ಯಾಮೋಹ, ಸಹೋದರರ ನಡುವಿನ ಬಿರುಕು, ಚಿಕ್ಕವರಾದರೂ ಶಿವ, ಸತ್ಯ ಮತ್ತು ಸುಂದರ ಈ ಮೂವರ ನಡುವಿನ ಬಾಂಧವ್ಯವನ್ನು ಹೇಳಲಾಗುತ್ತಿದೆ. ಇನ್ನೊಂದು ವಿಶೇಷವೆಂದರೆ, ಈ ಧಾರಾವಾಹಿಗೆ ಅದ್ಭುತ ಸೆಟ್ ನಿರ್ದೇಶನ ಮಾಡಿರುವುದು “ಬಾಹುಬಲಿ’, “ಅರುಂಧತಿ’ ಚಿತ್ರಗಳಲ್ಲಿ ಕೆಲಸ ಮಾಡಿರುವ ಹೈದರಾಬಾದ್‌ನ ಕಲಾ ನಿರ್ದೇಶಕ ನಾಣಿ.
ಈ ಧಾರಾವಾಹಿಯಲ್ಲಿ ರಂಗಭೂಮಿ ಕಲಾವಿದರಾದ ಗಿರೀಶ್, ಅಜಯ್ ರಾಜ್ ಇಬ್ಬರೂ ಸತ್ಯ ಹಾಗೂ ಸುಂದರ್ ನಟಿಸುತ್ತಿದ್ದಾರೆ. ಪವನ್‌ಕುಮಾರ್ ನಿರ್ದೇಶನದ ಈ ಧಾರಾವಾಹಿಗೆ ರಾಮ ಸಿಂಗ್ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಅಂದಹಾಗೆ, ಆಗಸ್ಟ್ 7 ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 7 ಕ್ಕೆ ಪ್ರಸಾರವಾಗಲಿದೆ.