ಹಾಸನ: ಕಳೆದ ನಾಲ್ಕು ತಿಂಗಳ ಬಾಕಿ ವೇತನವನ್ನು ತಮಗೆ ಕೂಡಲೇ ಬಿಡುಗಡೆ ಮಾಡುವಂತೆ ಹಾಗೂ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರು ಜಿಲ್ಲಾ ಪಂಚಾಯತಿ ಕಚೇರಿ ಬಳಿ ಸರಣಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ಮಂಗಳವಾರದಿಂದ ಸರಣಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಿದರು.
4 ತಿಂಗಳಿಂದ ಆದಾಯವಿಲ್ಲ: ರಾಜ್ಯದ ಶಾಲೆಗಳಲ್ಲಿ ಮಧ್ಯಾಹ್ನನದ ಬಿಸಿಯೂಟ ಯೋಜನೆಯಡಿಯಲ್ಲಿ 1,17,999 ನೌಕರರು ಕಳೆದ 19 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಈ ನೌಕರರು ಬಡ ಮಹಿಳೆಯರು, ವಿಚ್ಛೇದಿತರು, ವಿಧವೆಯರೇ ಹೆಚ್ಚಿನ ಸಂಖ್ಯೆಲ್ಲಿದ್ದಾರೆ. ಈ ಉದ್ಯೋಗವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ 4 ತಿಂಗಳಿ ನಿಂದ ಯಾವುದೇ ಆದಾಯಲ್ಲವಿದೆ ಅತ್ಯಂತ ನಿಕೃಷ್ಟ ಪರಿಸ್ಥಿತಿಯಲ್ಲಿದ್ದಾರೆ.
ಮನವಿಯಲ್ಲಿ ಒತ್ತಾಯ: ಕೋವಿಡ್ ಹರಡುವುದನ್ನು ತಡೆಗಟ್ಟಲು ಶಾಲೆಗಳನ್ನು ಮುಚ್ಚಿರುವ ಸರ್ಕಾರವು ಅಕ್ಷರ ದಾಸೋಹದ ಫಲಾನುಭಗಳಾದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದ ಸಿಗುತ್ತಿರುವ ಆಹಾರವನ್ನು ಬೇಯಿಸಿದ ರೂಪದಲ್ಲಿ ತಕ್ಷಣಕ್ಕೆ ಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಹಾರ ಧಾನ್ಯಗಳನ್ನು ಹಲವಾರು ಜಿಲ್ಲೆಗಳಲ್ಲಿ ಬಿಸಿಯೂಟದ ನೌಕರರೇ ಮಕ್ಕಳ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಶಾಲೆಗಳು ಮುಚ್ಚಿದ್ದರು ಶಾಲಾ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗೆ ಪ್ರತಿ ತಿಂಗಳೂ ಸರ್ಕಾರ ವೇತನ ನೀಡುತ್ತಿದೆ. ಹಾಗೇ ಬಿಸಿಯೂಟ ನೌಕರರಿಗೂ ವೇತನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸ್ಪಂದಿಸದ ಸರ್ಕಾರ: ಈಗಾಗಲೇ ಸರ್ಕಾರಕ್ಕೆ ಕಳೆದ ಏಪ್ರಿಲ್ ತಿಂಗಳಿನಿಂದ ಮುಖ್ಯಮಂತ್ರಿಯವರಿಗೆ, ಶಿಕ್ಷಣ ಸಚಿವರಿಗೆ, ಸರ್ಕಾರ ಮುಖ್ಯ ಕಾರ್ಯದರ್ಶಿಯವರಿಗೆ 3 ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸಿಲ್ಲ. ಬಿಸಿಯೂಟದ 1.17,995 ನೌಕರರಿಗೆ 4 ತಿಂಗಳ ವೇತನಕ್ಕೆ 120 ಕೋಟಿ ರೂ. ಬಿಡುಗಡೆ ಮಾಡಿದರೆ ಸಾಕು. ಬಿಸಿಯೂಟ ನೌಕರರಿಗೆ ವೇತನ ನೀಡಬೇಕು ಎಂದು ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಫಾರಸ್ಸು ಮಾಡಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳದಿರುವುದು ಖಂಡನೀಯ . ಹಾಗಾಗಿ ನಮಗೆ ವೇತನ ಪಾವತಿಸುವವರೆಗೂ ರಾಜ್ಯದ ಎಲ್ಲ ತಾಲೂಕು ಪಂಚಾಯತಿ, ಮತ್ತು ಜಿಲ್ಲಾ ಪಂಚಾಯತಿ ಕಚೇರಿಗಳ ಮುಂದೆ ಸರಣಿ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ಬಿಸಿಯೂಟ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಎಂಬಿ.ಪುಷ್ಪಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ, ಹಾಸನ ತಾಲೂಕು ಅಧ್ಯಕ್ಷೆ ಮೀನಾಕ್ಷಿ, ಖಜಾಂಚಿ ಪುಟ್ಟಲಕ್ಷ್ಮೀ ಇದ್ದರು.