ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ವಾಗುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಮಾತ್ರ ಶನಿವಾರ ಸಹ ಲಾಕ್ ಡೌನ್ ಮಾಡುವ ಚಿಂತನೆ ನಡೆಸಲಾಗಿದೆಯೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ಕೋವಿಡ್-19 ಆಸ್ಪತ್ರೆಯಲ್ಲಿ ಶನಿವಾರ ನೂತನವಾಗಿ ಸ್ಥಾಪಿಸಿರುವ 500 ಜನರ ಸಾಮರ್ಥ್ಯದ ಆರ್ ಟಿಪಿಸಿಆರ್ ಪರೀಕ್ಷಾ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಲೇ ಭಾನುವಾರ ರಾಜ್ಯದಲ್ಲಿ ಲಾಕ್ ಡೌನ್ ಘೊಷಣೆ ಮಾಡಲಾಗಿದೆ. ಅದೇ ರೀತಿ ಶನಿವಾರ ಲಾಕ್ ಡೌನ್ ಘೊಷಿಸಬೇಕು ಎಂಬ ಚಿಂತನೆ ಇದೆ. ಬೆಂಗಳೂರಿಗೆ ಸೀಮಿತವಾಗಿ ಶನಿವಾರ ಲಾಕ್ಡೌನ್ ಘೊಷಿಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಆರ್ ಟಿಪಿಸಿಆರ್ ಪ್ರಯೋಗಾಲಯ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು ಯಾವುದೇ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಕೆಲಸ ಮಾಡುವ ಟೆಕ್ನಿಷಿಯನ್ ಸಿಬ್ಬಂದಿಗೆ ಸೋಂಕು ಹರಡುವುದಿಲ್ಲ ಎಂದರು.
ಇದೇ ವೇಳೆ ಸಚಿವ ಡಾ.ಕೆ.ಸುಧಾಕರ್ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿದರು.