ಮೈಸೂರು: “ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ನಡೆಯುತ್ತಿರುವ ಹೋರಾಟದ ಬಗ್ಗೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಮೌನ ಮುರಿದು, ತಮ್ಮ ನಿಲುವನ್ನು ಬಹಿರಂಗಪಡಿಸಬೇಕು’ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಹೇಳಿದರು.
ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಕನ್ನಡ ಸಾಹಿತ್ಯ ಕಲಾಕೂಟದ ವತಿಯಿಂದ ಸರಸ್ವತಿ ಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ಪ್ರೊ.ಚಂಪಾ ಅವರ “ಚಂಪಾಂಕಣ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
“ಪ್ರಸ್ತುತ ಸಂದರ್ಭದಲ್ಲಿ ಲಿಂಗಾಯತ ಸಮುದಾಯದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಪ್ರತ್ಯೇಕ ಧರ್ಮದ ವಿಷಯದಲ್ಲಿ ಧರ್ಮಕಾರಣ, ರಾಜಕಾರಣದೊಂದಿಗೆ ಜನಾಂದೋಲನವಾಗಿ ರೂಪುಗೊಂಡಿದ್ದು, ಈ ಮೂಲಕ ವೈದಿಕ ಪರಂಪರೆ ವಿರುದಟಛಿ ಎಂದು ಲಿಂಗಾಯತರು ಪ್ರತಿಪಾದಿಸುತ್ತಿದ್ದಾರೆ.
ಹೀಗಾಗಿ ವಿವೇಕದ ಸಂಕೇತವಾಗಿರುವ ಸುತ್ತೂರು ಶ್ರೀಗಳು, ಈ ವಿಷಯದ ಬಗ್ಗೆ ಮೌನ ಮುರಿದು ತಮ್ಮ ನಿಲುವು ಪ್ರತಿಪಾದಿಸಬೇಕಿದೆ’ ಎಂದು ಒತ್ತಾಯಿಸಿದರು.
ವೀರಶೈವ ಎಡಬಿಡಂಗಿಗಳಿಂದ ಗೊಂದಲ: “ಲಿಂಗಾಯತ ಪ್ರತ್ಯೇಕ ಅಲ್ಪ ಸಂಖ್ಯಾತ ಧರ್ಮದ ಮಾನ್ಯತೆಗಾಗಿ ದೊಡ್ಡ ಹೋರಾಟ ನಡೆಯಬೇಕು’ ಎಂದು ಪ್ರೊ.ಚಂಪಾ ಪ್ರತಿಪಾದಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಶನಿವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಹಿಂದೂಗಳು ಬಲಪಂಥೀಯರು, ಲಿಂಗಾಯತರು ಎಡಪಂಥೀಯರು. ಅಲ್ಲೂ ಇಲ್ಲದೆ, ಇಲ್ಲೂ ಇಲ್ಲದ ವೀರಶೈವರು ಎಡಬಿಡಂಗಿಗಳು ಎಂದು ಹೇಳಿದರು.